ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಮನಸಲ್ಲಿ ರಾಷ್ಟ್ರಪ್ರೇಮ ಬಿತ್ತಿದ ನೇತಾರ’

ಜೈಹಿಂದ್‌ ಪ್ರತಿಷ್ಠಾನದಿಂದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮ ದಿನಾಚರಣೆ
Last Updated 23 ಜನವರಿ 2022, 15:05 IST
ಅಕ್ಷರ ಗಾತ್ರ

ಚಾಮರಾಜನಗರ: ‘ಯುವ ಮನಸ್ಸುಗಳಲ್ಲಿ ರಾಷ್ಟ್ರ ಭಕ್ತಿ, ರಾಷ್ಟ್ರಪ್ರೇಮವನ್ನು ಬಿತ್ತಿದ ಹಾಗೂ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಮನೋಭಾವನೆ ಬೆಳೆಸಿದ ಕ್ರಾಂತಿಕಾರಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ರಾಷ್ಟ್ರಪ್ರೇಮ, ರಾಷ್ಟ್ರ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು’ ಎಂದು ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಭಾನುವಾರ ಇಲ್ಲಿ ತಿಳಿಸಿದರು.

ನಗರದಲ್ಲಿ ಜೈಹಿಂದ್‌ ಪ್ರತಿಷ್ಠಾನ ಹಮ್ಮಿಕೊಂಡಿದ್ದನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ ಹಾಗೂ ಪರಾಕ್ರಮ ದಿನದಲ್ಲಿ ಮಾತನಾಡಿದ ಅವರು, ‘ನೇತಾಜಿ ಭಾರತ ರಾಷ್ಟ್ರೀಯ ಸೈನ್ಯವನ್ನು ಕಟ್ಟಿ, ‘ನೀವು ನಿಮ್ಮ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ’ ಎಂದು ಗರ್ಜಿಸುವ ಮೂಲಕ ಯುವ ಸಮುದಾಯದ ಮೇಲೆ ಪ್ರಭಾವ ಬೀರಿದ್ದರು’ ಎಂದರು.

‘ಮಹಿಳೆಯರಿಗೆ ಸೈನ್ಯದಲ್ಲಿ ಆದ್ಯತೆ ನೀಡಿ, ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟನ್ನು ಆರಂಭಿಸಿ ಮಹಿಳಾ ಸೈನ್ಯವನ್ನು ರೂಪಿಸಿದ ನೇತಾಜಿಯವರ ದೂರದೃಷ್ಟಿಗೆ ಭಾರತೀಯರಾದ ನಾವು ಸದಾ ಚಿರಋಣಿಯಾಗಿರಬೇಕು’ ಎಂದು ಹೇಳಿದರು.

ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್‌ ಎನ್‌.ಋಗ್ವೇದಿ ಮಾತನಾಡಿ ‘ನೇತಾಜಿ ಜೀವನವೇ ರೋಮಾಂಚನಕಾರಿ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ಹೋರಾಟ ಒಂದು ಕಡೆಯಾದರೆ; ನೇತಾಜಿಯವರ ಹೋರಾಟ ಮತ್ತೊಂದು ದಿಕ್ಕಿನಲ್ಲಿ ಸಾಗಿತ್ತು. ಬ್ರಿಟಿಷರು ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡುವ ನಿಟ್ಟಿನಲ್ಲಿ ಬೋಸ್‌ ಕೊಡುಗೆ ಅಪಾರ’ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವ‌ರಿ ವಿಶ್ವವಿದ್ಯಾಲಯದ ಸಂಚಾಲಕಿ ದಾನೇಶ್ವರಿ ಮಾತನಾಡಿ ‘ದೇಶದ ಸ್ವಾತಂತ್ರ್ಯಕ್ಕಾಗಿ ತಪಸ್ಸು, ತ್ಯಾಗ, ಬಲಿದಾನದ ಮೂಲಕ ಹೋರಾಟದ ಬದುಕನ್ನು ನಡೆಸಿದ ನೇತಾಜಿ ನಮ್ಮೆಲ್ಲರಿಗೂ ನೆಮ್ಮದಿಯ ಬದುಕನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು.

ಸೇಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ 3ನೇ ತರಗತಿಯ ಕಿಶೋರ್ ಶ್ರೀನಿವಾಸ್‌ ನೇತಾಜಿ ಸುಭಾಷ್ ಚಂದ್ರ ಬೋಸ್ ವೇಷ ಧರಿಸಿ ಗಮನ ಸೆಳೆದರು.

ಜೈಹಿಂದ್ ಪ್ರತಿಷ್ಠಾನದ ಕುಸುಮಾ ಋಗ್ವೇದಿ, ಪ್ರೌಢಶಾಲಾ ಶಿಕ್ಷಕಿ ಸವಿತಾ, ಅಕ್ಕಮಹಾದೇವಿ ಮಹಿಳಾ ಸಂಘದ ವತ್ಸಲಾ ರಾಜಗೋಪಾಲ್, ಬಿ.ಕೆ.ಆರಾಧ್ಯ, ಶ್ರೀನಿವಾಸ್, ಭಾಗ್ಯಶ್ರೀ, ರವಿ ಮಾಲ, ಝಾನ್ಸಿ ಮಕ್ಕಳ ಪರಿಷತ್ ಶ್ರಾವ್ಯ ಎಸ್.ಋಗ್ವೇದಿ, ಸಾನಿಕ, ವೈಭವಿ ಇದ್ದರು.

ಸಂಘಟನೆಗಳಿಂದ ನೇತಾಜಿ ಸ್ಮರಣೆ

ಚಾಮರಾಜನಗರ: ನಗರದ ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಆಜಾದ್ ಹಿಂದೂ ಸೇನೆ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನವನ್ನು ಭಾನುವಾರ ಆಚರಿಸಲಾಯಿತು.

ನೇತಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸೇನೆಯ ರಾಜ್ಯ ಅಧ್ಯಕ್ಷ ಎಂ.ಎಸ್.ಪೃಥ್ವಿರಾಜ್ ಮಾತನಾಡಿ ‘ಸುಭಾಷ್ ಚಂದ್ರಬೋಸ್ ಅವರ ಸಾವಿನ ನಿಗೂಡತೆ, ಸ್ವಾತಂತ್ರ್ಯ ಹೋರಾಟದ ಪರಾಕ್ರಮವನ್ನು ದೇಶವಲ್ಲದೆ ವಿಶ್ವವ್ಯಾಪಿ ಪ್ರಚುರಪಡಿಸಬೇಕಿದೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದರು.

‘ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಬೋಸ್‌, ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದರು. 1945ರಲ್ಲಿ ಅವರು ಸಾಯಲಿಲ್ಲ. ನಂತರವೂ ಜೀವಂತವಾಗಿದ್ದರು ಎಂಬುದಕ್ಕೆ ಬಲವಾದ ಆಧಾರಗಳಿವೆ’ ಎಂದು ತಿಳಿಸಿದರು.

ನಗರಸಭೆ ಸದಸ್ಯ ನಾಗೇಶ ನಾಯಕ, ಮುಖಂಡ ರಾಜೇಶ್, ಸೇನೆಯ ಗೌರವ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಅಧ್ಯಕ್ಷ ಶಿವು ವಿರಾಟ್, ಟೌನ್ ಅಧ್ಯಕ್ಷ ಶಿವು, ರಾಜೇಶ್, ಮಾರ್ಕೆಟ್ ಕುಮಾರ್, ರಾಮಸಮುದ್ರ ಶಿವು, ಚಂದ್ರು, ರಘು, ಹರೀಶ್, ಪ್ರವೀಣ್, ಚೇತನ್, ಪೃಥ್ವಿ, ಬಾನು, ಮಾಧು, ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ನಾಯಕ, ಮಾದೇಶ್, ಚಲುವರಾಜು, ಕಿರಣ್ ಇದ್ದರು.

ಆದರ್ಶ:ಶಿವಾಜಿ ನೇತಾಜಿ ಸೈನ್ಯದ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸ್ 125ನೇ ಜನ್ಮ ದಿನವನ್ನು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಆಚರಿಸಲಾಯಿತು.

ನಗರಸಭೆ ಸದಸ್ಯ ಮನೋಜ್‌ ಪಟೇಲ್‌ ಮಾತನಾಡಿ ‘ನೇತಾಜಿ ಇಂದಿನ ಪೀಳಿಗೆಗೆ ಆದರ್ಶವಾಗಬೇಕು. ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಅವರದ್ದೂ ಕೊಡುಗೆ ಇದೆ’ ಎಂದರು.

ಸೈನ್ಯದ ಜಿಲ್ಲಾ ಅಧ್ಯಕ್ಷ ಸುಂದರರಾಜ್ ಮಾತನಾಡಿ ‘ಮಹಾನ್‌ ರಾಷ್ಟ್ರಪ್ರೇಮಿಯಾಗಿದ್ದ ಸುಭಾಷ್ ಚಂದ್ರಬೋಸ್ ಅವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಸೈನ್ಯದ ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಮಹೇಶ್, ಸಂಚಾಲಕರಾದ ಚಂದ್ರಶೇಖರ್ ರಾವ್, ನಟರಾಜು, ಕೂಸಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಮುಖಂಡ ಎಂ.ಎಸ್.ಚಂದ್ರಶೇಖರ್, ಶೈಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT