ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಸಾಲ ಮನ್ನಾ, ₹25 ಸಾವಿರ ಬೆಳೆ ಪರಿಹಾರ ಘೋಷಣೆಗೆ ಆಗ್ರಹ

ರಾಜ್ಯ ಬಜೆಟ್‌: ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಲವು ಬೇಡಿಕೆ, ಪ್ರತಿಭಟನೆ
Published 13 ಫೆಬ್ರುವರಿ 2024, 16:28 IST
Last Updated 13 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ಚಾಮರಾಜನಗರ: ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಉದ್ಯಾನದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಭುವನೇಶ್ವರಿ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ವಾಹನ ಸಂಚಾರ ತಡೆದರು. ಬಳಿಕ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. 

ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಬರಗಾಲದಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಸಾಲವನ್ನು ತೆಲಂಗಾಣ ಮತ್ತು ಪಂಜಾಬ್ ಮಾದರಿಯಲ್ಲಿ ಮನ್ನಾ ಮಾಡಬೇಕು. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 6,040 ಕೃಷಿ ಪತ್ತಿನ ಸಹಕಾರ ಸಂಘಗಳ ₹25 ಸಾವಿರ ಕೋಟಿ ಬೆಳೆ ಸಾಲವನ್ನು ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು. 

‘ಕಳೆದ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್‌ಗೆ ₹150 ರಂತೆ ₹950 ಕೋಟಿ ಬರಬೇಕಾಗಿದೆ. ಕಾರ್ಖಾನೆಗಳಿಂದ ಕೊಡಿಸಲಾಗದಿದ್ದರೆ ಸರ್ಕಾರವೇ ಸ್ವಯಂಘೋಷಿತವಾಗಿ ಕೊಡಬೇಕು. ವರ್ಷದ ಹಂಗಾಮು ಕಟಾವು ಮುಗಿಯುತ್ತಿರುವುದರಿಂದ ಎಫ್‌ಆರ್‌ಪಿಯನ್ನು ಸೇರಿ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹4000 ದಂತೆ ದರ ನಿಗದಿ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿಇಳುವರಿಯಲ್ಲಿ ಮೋಸ ತಿಳಿಯಲು ರಚಿಸಿರುವ ತಜ್ಞರ ಸಮಿತಿಗೆ ಸ್ಥಳೀಯ ರೈತರು ಹಾಗೂ ನಮ್ಮ ಸಂಘದ ಮುಖಂಡರನ್ನು ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ಎರಡು ವರ್ಷಗಳ ಹಿಂದೆ ಕಬ್ಬನ್ನು ರೈತರಿಂದ ಒಪ್ಪಂದ ರಹಿತ ಕಬ್ಬು ಎಂದು ಸುಮಾರು ₹1 ಕೋಟಿಗೂ ಹೆಚ್ಚು ಹಣವನ್ನು ರೈತರಿಂದ ಪ್ರತಿ ಟನ್‌ಗೆ ₹50 ಕಟಾವು ಮಾಡಿಕೊಂಡು ಅದನ್ನು ರೈತರ ಖಾತೆಗೆ ಜಮಾ ಮಾಡಬೇಕು. ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿಯನ್ನು ಪುನರ್ ರಚಿಸಿ ತಕ್ಷಣ ಸಭೆ ಕರೆಯಬೇಕು. ಕೃಷಿ ಚಟುವಟಿಕೆಗೆ ಸಾಲ ಕೊಟ್ಟಿರುವ ಬ್ಯಾಂಕುಗಳು ಬರಗಾಲದಿಂದ ತತ್ತರಿಸಿದರೂ ಸಾಲ ವಸೂಲಾತಿಗೆ ನೋಟಿಸ್ ನೀಡಿ ಕಿರುಕುಳ ಕೊಡುತ್ತಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ನೂತನ ಕೃಷಿ ಪಂಪ್‌ಸೆಟ್ ಮಾಡುವವರಿಗೆ ಹೊಸ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

‘ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆ ₹25 ಸಾವಿರ ನಷ್ಟ ಪರಿಹಾರ ಕೊಡಬೇಕು. ಕೃಷಿ ಉತ್ಪನ್ನಗಳು ಮತ್ತು ಕೃಷಿ ಬಳಕೆಯ ವಸ್ತುಗಳಿಗೆ ಜಿಎಸ್‌ಟಿ ಕಡಿತ ಮಾಡಬೇಕು. ರೈತರಿಗೆ ಉಚಿತ ₹5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು’ ಎಂದು ಭಾಗ್ಯರಾಜ್‌ ಹೇಳಿದರು. 

ಡಿಸಿಗೆ ಮನವಿ: ನಂತರ ಪ್ರತಿಭಟನಕಾರರು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. 

ಸಂಘದ ಜಿಲ್ಲಾಧ್ಯಕ್ಷ  ಹಾಲಿನ ನಾಗರಾಜ್, ಮುದ್ದಾಹಳ್ಳಿ ಚಿಕ್ಕಸ್ವಾಮಿ, ಹಾಡ್ಯರವಿ,  ಮಲೆಯೂರು ಹರ್ಷ,  ಬಸವರಾಜಪ್ಪ, ಕಾಳಪ್ಪ, ಗುರುಶಂಕರ ಕೊಣನೂರು, ವಿಶ್ವನಾಥ್, ಪ್ರವೀಣ್, ಉಡಿಗಾಲ ಗ್ರಾಮ ಘಟಕದ ಮಂಜುನಾಥ್, ಮಹದೇವಸ್ವಾಮಿ, ಮಲ್ಲೇಶ,  ಸುಧಾಕರ್, ನಂದೀಶ್, ಅಡುಗೆ ಚನ್ನಬಸಪ್ಪ, ದೇವನೂರು ನಾಗೇಂದ್ರ,  ವೆಂಕಟಸ್ವಾಮಿ, ಶ್ರೀಕಂಠ ಜನ್ನೂರ್, ಶಾಂತರಾಜ್ ಅರಳಿಕಟ್ಟೆ ಪ್ರಭಣ್ಣ, ಮಹಾದೇವಸ್ವಾಮಿ ಇತರರು ಇದ್ದರು. 

ಪೊಲೀಸರ ವಿರುದ್ಧ ಆಕ್ರೋಶ

ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು ಭವನದ ಪ್ರವೇಶ ದ್ವಾರದ ಮೆಟ್ಟಿನಲ್ಲಿ ಧರಣಿ ಕುಳಿತುಕೊಳ್ಳಲು ಬಯಸಿದ್ದರು. ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಅಂಬೇಡ್ಕರ್‌ ಪ್ರತಿಮೆಯ ಬಳಿ ತಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್‌ ಚೌಕಿ ಇರುವ ಕಟ್ಟಡದ ಬಳಿ ಹೋಗುವಂತೆ ಸೂಚಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲೇ ಕುಳಿತರು. ಜಿಲ್ಲಾಡಳಿತ ರಾಜ್ಯ ಸರ್ಕಾರ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.  ‘ವಿಧಾನಸೌಧದಲ್ಲಿರುವ ಕಳ್ಳ–ಕಾಕರಿಗೆ ರಕ್ಷಣೆ ಕೊಡುವ ನೀವು ಅನ್ನದಾತರನ್ನು ತಡೆಯುತ್ತಿದ್ದೀರಿ. ರೈತರು ಬೆಳೆದ ಅನ್ನವನ್ನು ತಿನ್ನುತ್ತಿದ್ದರೆ. ಗೌರವಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿ ಕೊಡಿ. ಇಲ್ಲದಿದ್ದರೆ ಭವನಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT