ಭಾನುವಾರ, ಸೆಪ್ಟೆಂಬರ್ 19, 2021
28 °C
ರೈತ ಸಂಘದ ಬಗ್ಗೆ ಅವಹೇಳನ ಆರೋಪ: ರಾತ್ರಿ ಇಡೀ ಪ‍್ರತಿಭಟನೆ, ಸಂಧಾನ ಸಭೆ ಯಶಸ್ವಿ

ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರ ವರ್ಗಾವಣೆಗೆ 15 ದಿನಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ಸಂಘದ ಹಾಗೂ ರೈತ ಹೋರಾಟಗಾರರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಆರೋಪ ಹೊತ್ತಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ರಾಜ್ಯದಿಂದ ಹೊರಗಡೆ ವರ್ಗಾವಣೆ ಮಾಡಲು ರೈತ ಸಂಘಗಳ ಮುಖಂಡರು 15 ದಿನಗಳ ಗಡುವು ನೀಡಿದ್ದಾರೆ. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮಾರ ಕರೆದಿದ್ದ ಕಬ್ಬು ಬೆಳೆಗಾರರ ಸಭೆಯ ನಡಾವಳಿಗಳಿಗೆ ಸ್ಪಷ್ಟೀಕರಣ ನೀಡುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರು, ರೈತ ಸಂಘದವರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಸಂಘಟನೆಯ ಅಸ್ತಿತ್ವಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದ್ದರು. ಕಾರ್ಖಾನೆಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದರು. 

ರಾತ್ರಿ ಇಡೀ ‍ಪ್ರತಿಭಟನೆ: ಶರವಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಸ್ಥಳಕ್ಕೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬರಬೇಕು ಎಂದು ಪಟ್ಟು ಹಿಡಿದ ರೈತ ಮುಖಂಡರು ಸೋಮವಾರ ರಾತ್ರಿ ಇಡೀ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಎದುರು ಧರಣಿ ನಡೆಸಿದರು. ರಾತ್ರಿ 11.45ರವರೆಗೂ ಜಿಲ್ಲಾಧಿಕಾರಿ ಅವರು ಸ್ಥಳದಲ್ಲಿದ್ದು, ಮನವೊಲಿಸಲು ಯತ್ನಿಸಿದ್ದರು. ಆದರೆ, ಅದು ಫಲಪ್ರದವಾಗಲಿಲ್ಲ.  

ವಿಷಯ ತಿಳಿದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ಮೂರ್ತಿ ಅವರು ಮಂಗಳವಾರ ಬಂದಿದ್ದರು. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ನೇತೃತ್ವದಲ್ಲಿ ಸಂಜೆ ಕಾರ್ಖಾನೆಯ ಅಧಿಕಾರಿಗಳು ಹಾಗೂ ರೈತ ಸಂಘಗಳ ಮುಖಂಡರ ಸಂಧಾನ ಸಭೆ ನಡೆಯಿತು. 

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿದಂತೆ ಸ್ಥಳೀಯ ರೈತ ಮುಖಂಡರು ಸಭೆಯಲ್ಲಿದ್ದರು. 

ಆಗಿರುವ ತಪ್ಪಿಗೆ ಶರವಣ ಅವರು ಸೋಮವಾರವೇ ಲಿಖಿತವಾಗಿ ಕ್ಷಮೆ ಕೇಳಿದ್ದರು. ಆದರೂ ಮುಖಂಡರು ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಮಂಗಳವಾರದ ಸಭೆಯಲ್ಲಿ ತಮ್ಮ ಬೇಡಿಕೆಯನ್ನು ಅವರು ಮತ್ತೆ ಪ್ರಸ್ತಾಪಿಸಿದರು. 

ಇದೇ ವಿಚಾರವಾಗಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ಮೂರ್ತಿ ಅವರು ಕೂಡ ನೀಡಿರುವ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದರು. ಕಾರ್ಖಾನೆಯ ಅಧ್ಯಕ್ಷರೊಂದಿಗೆ ಮಾತನಾಡಿ, 15 ದಿನಗಳ ಒಳಗಾಗಿ ಉಪಾಧ್ಯಕ್ಷ ಶರವಣ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದನ್ನು ಲಿಖಿತವಾಗಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು. 

ಇದಕ್ಕೆ ಸಮ್ಮತಿಸಿದ ರೈತ ಮುಖಂಡರು, ಸಭೆಯನ್ನು ಮುಕ್ತಾಯಗೊಳಿಸಲು ಒಪ್ಪಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್‌,  ಎರಡು ರೈತಸಂಘಗಳ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಹೊನ್ನೂರು ಪ್ರಕಾಶ್‌, ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್, ಜ್ಯೋತಿಗೌಡನಪುರ ಸಿದ್ದರಾಜು, ಕಬ್ಬು ಬೆಳಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಬಸವರಾಜು, ಮುಖಂಡರಾದ ಕಿರಗಸೂರು ಶಂಕರ್‌, ಪಟೇಲ್‌ ಶಿವಮೂರ್ತಿ, ಅನಗಳ್ಳಿ ಬಸವರಾಜು, ಗೌಡೇಗೌಡ, ಶೈಲೇಂದ್ರ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು