ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ವಾಡಿ: 22 ತಿಂಗಳ ಬಳಿಕ ಮಾರಮ್ಮನ ದರ್ಶನ, ಕಣ್ತುಂಬಿಕೊಂಡ ಭಕ್ತರು

ಸುಳ್ವಾಡಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ; ಶಾಸಕ, ಡಿಸಿ ಭಾಗಿ
Last Updated 24 ಅಕ್ಟೋಬರ್ 2020, 16:59 IST
ಅಕ್ಷರ ಗಾತ್ರ

ಹನೂರು: ವಿಷ ಪ್ರಸಾದ ದುರಂತದ ಕಾರಣದಿಂದ 22 ತಿಂಗಳುಗಳಿಂದ ಮುಚ್ಚಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಶನಿವಾರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ತಾಲ್ಲೂಕಿನ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಭಕ್ತರು ಮಾರಮ್ಮ ದೇವಿಯನ್ನು ಕಣ್ತುಂಬಿಕೊಂಡರು.

ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿರುವ ದೇವಸ್ಥಾನದಲ್ಲಿ, ನಾಲ್ಕು ದಿನಗಳಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದವು. ಶನಿವಾರ ಬೆಳಿಗ್ಗೆ 108 ಕುಂಭಾಭಿಷೇಕ, ಕಳಶಾಭಿಷೇಕಗಳು ನಡೆದವು. ಮಧ್ಯಾಹ್ನ ಮಾರಮ್ಮ ದೇವಿಗೆ ಮಹಾ ಮಂಗಳಾರತಿ ಆದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಶಾಸಕ ಆರ್.ನರೇಂದ್ರ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಕೂಡ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಸ್ಥಳೀಯರಲ್ಲಿ ಸಂತಸ: ಸುಧೀರ್ಘ 22 ತಿಂಗಳ ಬಳಿಕ ದೇವಾಲಯ ತೆರೆದಿರುವುದು ಸ್ಥಳೀಯರಲ್ಲಿ ಸಂತಸ ಉಂಟು ಮಾಡಿದೆ. ಮೊದಲ ದಿನವೇ ಮಾರಮ್ಮನ ದರ್ಶನ ಪಡೆಯಲು ಮಾರ್ಟಳ್ಳಿ, ಕೋಟೆಪೋದೆ, ಬಿದರಳ್ಳಿ, ವಡ್ಡರದೊಡ್ಡಿ, ಸಂದನಪಾಳ್ಯ, ನಾಲರೋಡ್ ಸೇರಿದಂತೆ ತಾಲ್ಲೂಕಿನ ವಿವಿಧೆಡೆಗಳಿಂದ ನೂರಾರು ಭಕ್ತರು ಬಂದಿದ್ದರು.

‘ಇಷ್ಟು ದಿನಗಳ ಇದ್ದ ದುಗುಡ, ಆತಂಕ ಇಂದು ಮಾಯವಾಗಿದೆ. ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಅಮಾಯಕರು ಸಾಯುವಂತಾಯಿತು. ಆ ದೇವಿ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾಳೆ. ದುರಂತದಲ್ಲಿ ಬದುಕುಳಿದಿರುವ ಜನರಿಗೆ ಆ ದೇವಿ ಶಕ್ತಿ ನೀಡಲಿ. ಇಷ್ಟು ದಿನಗಳ ಬಳಿಕ ದೇವಿಯ ದರ್ಶನ ಪಡೆದಿದ್ದು ಅತ್ಯಂತ ಖುಷಿಯಾಗಿದೆ’ ಎಂದು ಸುಳ್ವಾಡಿ ಗ್ರಾಮದವರೇ ಆದ ಮಾರಮ್ಮ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

2018ರ ಡಿಸೆಂಬರ್‌ 14ರಂದು ನಡೆದ ದೇವಾಲಯದಲ್ಲಿ ಗೋಪುರಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಕ್ತರಿಗೆ ವಿಷ ಬೆರೆಸಿದ ಪ್ರಸಾದ ನೀಡಲಾಗಿತ್ತು. ಇದನ್ನು ಸೇವಿಸಿದ 17 ಮಂದಿ ಮೃತಪಟ್ಟು, 110ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ನಂತರ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡಿತ್ತು.

ಮಹದೇಶ್ವರ ಬೆಟ್ಟದಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ, ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆರ್ಚಕ ಪ್ರೋ.ಮಲ್ಲಣ್ಣ, ಕೊಳ್ಳೇಗಾಲ ತಹಶೀಲ್ದಾರ್ ಕೆ. ಕುನಾಲ್, ಹನೂರು ತಹಶೀಲ್ದಾರ್ ಜಿ.ಎಚ್.ನಾಗರಾಜು ಇದ್ದರು.

ಸೇವೆಗಳಿಗೆ ತಾತ್ಕಾಲಿಕ ನಿರ್ಬಂಧ

ದರ್ಶನದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ನಾಲ್ಕು ದಿನಗಳಿಂದ ಎಲ್ಲ ರೀತಿಯ ಪ್ರಾಯಶ್ಚಿತ್ತ, ಹೋಮ ಹವನಗಳು ಸಾಂಪ್ರಾದಾಯಿಕವಾಗಿ ನಡೆದಿವೆ.ಹಿಂದೆ ಸಂಭವಿಸಿದ ದುರ್ಘಟನೆಯನ್ನು ಮರೆತು ಇಂದಿನಿಂದ ಹೊಸ ಆಶಯದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗಲಿವೆ. ಕೋವಿಡ್ ಇರುವುದರಿಂದ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ವಿಶೇಷ ಪೂಜೆ ಸದ್ಯಕ್ಕೆ ಇರುವುದಿಲ್ಲ. ಭಕ್ತರು ಬೆಳಗಿನ ಸಮಯದಲ್ಲಿ ಪ್ರಸಾದ ಕೇಳುವ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ಹಾಗೂ ಯಾವುದೇ ರೀತಿಯ ದಾಸೋಹ ಇರುವುದಿಲ್ಲ. ದೇವಾಲಯಲ್ಲಿ ಭಕ್ತರು ಮಾಡುವ ಪಂಕ್ತಿ ಸೇವೆಗೂ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ’ ಎಂದು ಹೇಳಿದರು.

‘ದೇವಾಲಯಕ್ಕೆ ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ಆದರೆ, ಕೋವಿಡ್ ಕಾರಣದಿಂದಾಗಿ ತಮಿಳುನಾಡಿನ ಭಕ್ತರು ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಹಾಗೂ ಈಗ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಧಾರ್ಮಿಕ ಪರಿಷತ್‌ನ ಮಾರ್ಗದರ್ಶನಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಪ್ರತಿದಿನ ದೇವಾಲಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT