ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರ್ಯಕಾಂತಿ ಖರೀದಿಗೆ ಅನುಮೋದನೆ | ರೈತ ಸಂಘದ ಹೋರಾಟಕ್ಕೆ ಸಿಕ್ಕ ಫಲ-ಮಹದೇವಪ್ಪ

Published : 25 ಆಗಸ್ಟ್ 2024, 14:14 IST
Last Updated : 25 ಆಗಸ್ಟ್ 2024, 14:14 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ರಾಜ್ಯ ರೈತ ಸಂಘ ಹೋರಾಟದ ಫಲವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ಮುಂದಾಗಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಕಾಂತಿ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ರೈತ ಸಂಘ ಮೇ ತಿಂಗಳಿನಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಅದಕ್ಕೆ ಮಣಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ವಿಂಟಲ್‌ಗೆ ₹7280 ಬೆಂಬಲ ಬೆಲೆ ಯೋಜನೆಯಡಿ ಖರೀದಿ ತೆರೆಯಲು ಅನುಮೋದನೆ ನೀಡಿವೆ ಎಂದು ಹೇಳಿದರು.

ಖರೀದಿ ಕೇಂದ್ರ ತೆರೆಯುವ ಸಂಬಂಧ ಸಂಘದ ವತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಚಳವಳಿ ನಡೆಸಲಾಗಿತ್ತು. ನಂತರ ಜೂನ್ ತಿಂಗಳಲ್ಲಿಯೂ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿಯೂ ಒತ್ತಾಯಿಸಲಾಗಿತ್ತು. ಎಪಿಎಂಸಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿಯೂ ಆಗ್ರಹಿಸಲಾಗಿತ್ತು. ಅದರಂತೆ ಅಧಿಕಾರಿಗಳು ಸಹ ಜಿಲ್ಲಾಡಳಿತಕ್ಕೆ ಖರೀದಿ ಕೇಂದ್ರ ತೆರೆಯುವಂತೆ ಪತ್ರ ಬರೆದಿದ್ದರು. ಈ ಮಧ್ಯೆ ಆ.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ಸಂದರ್ಭ ಹಕ್ಕೊತ್ತಾಯ ಕುರಿತು ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

13,210 ಮೆಟ್ರಿಕ್ ಟನ್ ಸೂರ್ಯಕಾಂತಿಯನ್ನು 90 ದಿನಗಳವರೆಗೆ ಖರೀದಿಸಲು ಅವಕಾಶ ನೀಡಲಾಗಿದೆ. ಈ ಹೋರಾಟದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಹೆಚ್ಚಿದೆ. ಈ ಕಾರಣದಿಂದ ರೈತ ಸಂಘ ಜಿಲ್ಲಾಧಿಕಾರಿಗೆ ಅಭಿನಂದನೆ ತಿಳಿಸುತ್ತಿದೆ ಎಂದು ಹೇಳಿದರು.

ಎರಡರಿಂದ ಮೂರು ದಿನಗಳ ಒಳಗೆ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭವಾಗಲಿದ್ದು, ರೈತರು ದಲ್ಲಾಳಿಗಳ ಮೊರೆ ಹೋಗದೇ ಎಂಎಸ್‍ಪಿ ಅಡಿಯಲ್ಲಿ ₹7280ಗೆ ಮಾರಾಟ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಿ, ಜಮೀನಿನ ಆರ್‌ಟಿಸಿ ದಲ್ಲಾಳಿಗೆ ನೀಡದಂತೆ ಕೋರಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾಧು, ತಾಲ್ಲೂಕು ಉಪಾಧ್ಯಕ್ಷ ನಾಗರಾಜು, ಲೋಕೇಶ್, ಖಜಾಂಚಿ ನಾಗರಾಜಪ್ಪ, ಯುವ ಘಟಕದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಘು, ಹೋಬಳಿ ಸಂಘಟನಾ ಕಾರ್ಯದರ್ಶಿ ರೂಪೇಶ್, ರೇವಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT