ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟದಿಂದ ರೈತರ ಪಾದಯಾತ್ರೆಗೆ ಬೆಂಬಲ

Published 20 ಜನವರಿ 2024, 4:34 IST
Last Updated 20 ಜನವರಿ 2024, 4:34 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ರೈತರು, ಕಾಡಂಚಿನ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಇದೇ 23ರಿಂದ ಮಹದೇಶ್ವರ ಬೆಟ್ಟದಿಂದ ಜಿಲ್ಲಾ ಕೇಂದ್ರದವರೆಗೆ ಕೈಗೊಂಡಿರುವ ಪಾದಯಾತ್ರೆಗೆ ಸಂಘದ ಚಾಮರಾಜನಗರ ತಾಲ್ಲೂಕು ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಸಂಚಾಲಕ ನಟರಾಜ್‌ ಬಂದೀಗೌಡನಹಳ್ಳಿ, ‘ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಾಗಾಗಿ, ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ತಾಲ್ಲೂಕು ಘಟಕ ಸಂಪೂರ್ಣವಾಗಿ ಇದರಲ್ಲಿ ಭಾಗಿಯಾಗಲಿದೆ. ತಾಲ್ಲೂಕಿನಿಂದ ಪ್ರತಿ ದಿನ 300 ಮಂದಿ ಭಾಗವಹಿಸಲಿದ್ದಾರೆ’ ಎಂದರು. 

‘23ರಂದು ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ಆರಂಭವಾಗಲಿದ್ದು, 26ಕ್ಕೆ ಬೆಳಿಗ್ಗೆ ಚಾಮರಾಜನಗರ ತಲುಪಲಿದೆ’ ಎಂದು ಅವರು ಹೇಳಿದರು. 

ಬೇಡಿಕೆಗಳು: ‘ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಹಾಡಿ/ಗ್ರಾಮಗಳಲ್ಲಿ ವಾಸವಿರುವ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಜನರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು. ಬೆಟ್ಟದ ವ್ಯಾಪ್ತಿಯಲ್ಲಿ ಬೆಳೆಯುವ ವಿಶಿಷ್ಠ ದೊಡ್ಡ ರಾಗಿ, ಅವರೆ, ಸಾಸಿವೆ ತಳಿಗಳೀಗೆ ಜಿ– ಟ್ಯಾಗ್‌ ಮಾಡಬೇಕು. ಬರದಿಂದ ಬಾಧಿತರಾಗಿರುವ ರೈತರಿಗೆ ತುರ್ತಾಗಿ ₹25 ಸಾವಿರ ‍ಪರಿಹಾರ ನೀಡಬೇಕು’ ಎಂದರು.    

‘ಇದರೊಂದಿಗೆ ಸಾವಯವ/ಸಹಜ ವಿಧಾನದಲ್ಲಿ ಬೆಳೆದ ಬೆಳೆಗಳ ಖರೀದಿ ಮಾಡುವಾಗ ಘೋಷಿತ ಎಂಎಸ್‌ಪಿಗಿಂತ ಶೇ 30 ಹೆಚ್ಚುವರಿ ಬೆಲೆ ಕೊಟ್ಟು ಖರೀದಿ ಮಾಡಬೇಕು. ಜಿಲ್ಲೆಯಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಬೆಟ್ಟದ ಗುಡ್ಡದಿಂದ ಕಣಿವೆಯ ತನಕ ವ್ಯಾಪಿಸುವ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸಬೇಕು. ಎಲ್ಲ ಕೆರೆಗಳನ್ನು ತುಂಬಿಸಬೇಕು. ನರೇಗಾ ಯೋಜನೆಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100ರಿಂದ 200ಕ್ಕೆ ಏರಿಸಬೇಕು. ಬಸ್‌ ಸೌಕರ್ಯಗಳಿಲ್ಲದ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಚಂಗಡಿ ಗ್ರಾಮ ಪುನರ್ವಸತಿ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘದ ಮುಖಂಡರಾದ ಶರವಣ ಕುಮಾರ್‌ ಟಿ.ಕೆ.ಮೋಳೆ, ಮಲ್ಲೇಶ್‌ ಮೇಲಾಜಿಪುರ, ಪಾಪು ಕಲ್ಪುರ, ಕಮರವಾಡಿ ಶಿವಸ್ವಾಮಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT