ಮಹದೇವ್ ಹೆಗ್ಗವಾಡಿಪುರ
ಸಂತೇಮರಹಳ್ಳಿ: ಒಂದು ಕಾಲದಲ್ಲಿ ರೇಷ್ಮೆ ಕೃಷಿಗೆ ಹೆಸರಾಗಿದ್ದ ಚಾಮರಾಜನಗರದಲ್ಲಿ ಈಗ ರೇಷ್ಮೆ ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ. ಹಿಪ್ಪುನೇರಳೆ ಬೆಳೆಯುವ ಪ್ರದೇಶವೂ ಕುಗ್ಗಿದೆ. ರೇಷ್ಮೆ ಕೃಷಿ/ಹಿಪ್ಪುನೇರಳೆ ಬೇಸಾಯವನ್ನು ಉತ್ತೇಜನ ನೀಡುವ ಸಲುವಾಗಿ ಇಲಾಖೆಯು ತಾಲ್ಲೂಕಿನ ಮಂಗಲದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ರೇಷ್ಮೆ ಹುಳುಗಳ ಮರಿಗಳನ್ನು ಚಾಕಿ ಸಾಕಾಣಿಕೆ ಮಾಡಿ ರೇಷ್ಮೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದೆ.
ರೇಷ್ಮೆ ಹುಳುವಿನ ಮೊಟ್ಟೆಗಳನ್ನು ಖರೀದಿಸಿ, ಅದನ್ನು ಮರಿಗಳನ್ನಾಗಿ ಮಾಡುವುದಕ್ಕೆ ತಿಂಗಳು ಸಮಯ ಬೇಕು. ಈ ಕೆಲಸವನ್ನು ಇಲಾಖೆಯೇ ಮಾಡಿ, ಮರಿಗಳನ್ನು ಸಾಕಿ ಎರಡನೇ ಜ್ವರದ ನಂತರ ವಿತರಿಸುತ್ತಿದೆ. ಇದರಿಂದ ದೊಡ್ಡ ಕೆಲಸ ಉಳಿದಿದೆ. ಇದರ ಪ್ರಯೋಜನವನ್ನು ಹಲವು ರೈತರು ಪಡೆಯುತ್ತಿದ್ದು, ಹಿಪ್ಪುನೇರಳೆ ಬೆಳೆಯುವ ಪ್ರದೇಶ ವಿಸ್ತರಣೆಗೆ ಮುಂದಾಗುತ್ತಿದ್ದಾರೆ.
₹1,750 ಖರ್ಚು: ಕೇಂದ್ರದಲ್ಲಿರುವ ಒಂಬತ್ತು ಎಕರೆ ಪೈಕಿ ಒಂದು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಪಂಪ್‌ಸೆಟ್ ಮೂಲಕ ನೀರು ಸ್ಥಳೀಯ ನಾಟಿ ಸೊಪ್ಪನ್ನೇ ಬೆಳೆಸಲಾಗುತ್ತಿದೆ. ಮೈಸೂರಿನ ಎನ್‌ಎಸ್‌ಎಸ್‌ಟಿ ಕೇಂದ್ರದಲ್ಲಿ ಸಿಎಸ್‌ಆರ್ ತಳಿಯ ಮೊಟ್ಟೆಗಳನ್ನು ಕೇಂದ್ರಕ್ಕೆ ತಂದು ಚಾಕಿ ಮಾಡಲಾಗುತ್ತದೆ. ನೂರು ಮೊಟ್ಟೆಗೆ ₹1,500 ದರ ಇದೆ. ರೈತರು ಬೇಡಿಕೆ ಇಟ್ಟಷ್ಟು ಮೊಟ್ಟೆಯನ್ನು ತರುತ್ತಾರೆ. ಮೊಟ್ಟೆ 10ನೇ ದಿನಕ್ಕೆ ಮರಿಯಾಗುತ್ತದೆ. ನಂತರ 10 ದಿನಗಳವರೆಗೆ ಚಾಕಿ ಮಾಡಿ 1 ಮತ್ತು 2ನೇ ಜ್ವರದವರೆಗೆ ದಿನಗಳು ಕಳೆದ ಮೇಲೆ ರೈತರಿಗೆ ನೀಡುತ್ತಾರೆ. ಚಾಕಿ ಸಾಕಣಿಕೆ ಮಾಡಿದ್ದಕ್ಕೆ ರೈತರು ₹250 ಶುಲ್ಕ ನಿಗದಿ ಪಡಿಸಬೇಕು.
ರೈತರು ಮುಂದಿನ ಹಂತದ ಜ್ವರದಿಂದ 21 ದಿನಗಳವರೆಗೆ ಮರಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಮರಿಗಳು ದೊಡ್ಡದಾಗಿ ಗೂಡು ಕಟ್ಟುವ ಹಂತಕ್ಕೆ ಬಂದು ರೈತರು ಚಂದ್ರಿಕೆಗೆ ಬಿಟ್ಟಾಗ ರೇಷ್ಮೆ ಗೂಡು ಮಾರಾಟಕ್ಕೆ ಸಿದ್ಧವಾಗುತ್ತದೆ. ರೈತರು ನೂರು ಮೊಟ್ಟೆಗೆ ನಿಗದಿಪಡಿಸಿರುವ ದರವನ್ನು ಮಾತ್ರ ನೀಡಬೇಕಾಗಿದೆ. ಚಾಕಿ ಮತ್ತು 2ನೇ ಜ್ವರದವರೆಗೆ ಮರಿಗಳನ್ನು ರೇಷ್ಮೆ ಸಾಕಾಣಿಕೆ ಕೇಂದ್ರದಲ್ಲಿ ಸಾಕಾಣಿಕೆ ಮಾಡಿ ನೀಡಲಾಗುತ್ತದೆ.
ಉತ್ತಮ ಇಳುವರಿ: ಮಂಗಲ, ಯಡಿಯೂರು, ಕರಿನಂಜನಪುರ, ಮುಕ್ಕಡಹಳ್ಳಿ, ಕೆರೆಹಳ್ಳಿ, ಹರವೆ ಗ್ರಾಮಗಳ ರೈತರು ಪ್ರತಿ ತಿಂಗಳು ಇಲ್ಲಿಗೆ ಆಗಮಿಸಿ ರೇಷ್ಮೆ ಮರಿಗಳನ್ನು ಖರೀದಿಸುತ್ತಾರೆ.
‘ಇಲ್ಲಿ ಸಾಕಾಣಿಕೆ ಮಾಡಿ ಖರೀದಿಸಿದ ಮರಿಗಳಿಂದ ಹೆಚ್ಚಿನ ಇಳುವರಿ ಬರುತ್ತಿದ್ದು, ನೂರು ಮೊಟ್ಟೆಗೆ 85 ಕೆಜಿಯಿಂದ 100 ಕೆಜಿವರೆಗೆ ಸಿಗುತ್ತಿದೆ. ಹೀಗಾಗಿ ರೈತರು ಹೆಚ್ಚಿನ ಬೇಡಿಕೆ ಸಲ್ಲಿಸುತ್ತಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ರೈತರಿಗೆ ಚಾಕಿ ಮಾಡಿದ ಮರಿಗಳನ್ನು ನೀಡುವುದರ ಜತೆಗೆ, ಚಳಿ, ಮಳೆ ಹಾಗೂ ಬಿಸಿಲು ಸಮಯದಲ್ಲಿ ಹೇಗೆ ಮರಿಗಳನ್ನು ಕಾಪಾಡಿಕೊಳ್ಳಬೇಕು. ಯಾವ ಸಮಯದಲ್ಲಿ ಸೊಪ್ಪು ನೀಡಬೇಕು ಎಂಬುದರ ಬಗ್ಗೆ ರೈತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಾರೆ.
ಉತ್ತಮ ಬೇಡಿಕೆ ಇದೆ
‘ನಮ್ಮ ರೇಷ್ಮೆ ಚಾಕಿ ಕೇಂದ್ರದಲ್ಲಿ ಮರಿಗಳನ್ನು ಉತ್ತಮವಾಗಿ ಸಾಕಾಣಿಕೆ ಮಾಡಿಕೊಡುವುದರಿಂದ ರೈತರಿಂದ ಉತ್ತಮ ಬೇಡಿಕೆ ಮತ್ತು ಸ್ಪಂದನೆ ಇದೆ. ಖಾಸಗಿಯಾಗಿ ಸಾವಿರಗಟ್ಟಲೆ ಹಣ ನೀಡಿ ವ್ಯಯ ಮಾಡುವ ಬದಲು ರಿಯಾಯಿತಿ ದರದಲ್ಲಿ ರೇಷ್ಮೆ ಮರಿಗಳನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ’ ಎಂದು ಕ್ಷೇತ್ರದ ರೇಷ್ಮೆ ನಿರೀಕ್ಷಕ ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಎರಡು ತಿಂಗಳಿಗೊಮ್ಮೆ ಚಾಕಿ ಸಾಕಾಣಿಕೆ ಕೇಂದ್ರದಲ್ಲಿ ಮರಿಗಳನ್ನು ಪಡೆಯುತ್ತಿದ್ದೇವೆ. ಉತ್ತಮ ಇಳುವರಿ ಬರುತ್ತಿದೆ. 150 ಮೊಟ್ಟೆಗೆ 140 ಕೆಜಿವರೆಗೂ ಗೂಡು ಮಾರಾಟ ಮಾಡಿದ್ದೇವೆ. ಇದಕ್ಕಾಗಿ 1 ಎಕರೆಯಲ್ಲಿ ಹಿಪ್ಪುನೇರಳೆ ಬರೆದಿದ್ದೇವೆ’ ಎಂದು ಕರಿನಂಜನಪುರ ಗ್ರಾಮದ ರೈತ ಮಹಿಳೆ ಭಾಗ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.