ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ದಸರಾ ಮೆರವಣಿಗೆಗೆ ಸ್ತಬ್ಧಚಿತ್ರಗಳ ಮೆರುಗು

ಜಿಲ್ಲಾ ಪಂಚಾಯಿತಿ, ನಗರಸಭೆ, ಸೆಸ್ಕ್‌ನಿಂದ ಮೂರು ಸ್ಪಬ್ಧಚಿತ್ರಗಳ ನಿರ್ಮಾಣ
Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾದ ಅಂಗವಾಗಿ ಜಿಲ್ಲೆಯಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರಕಲಿದ್ದು, ಸಂಜೆ ಜಿಲ್ಲಾಡಳಿತ ಭವನದಿಂದ ಚಾಮರಾಜೇಶ್ವರ ದೇವಸ್ಥಾನದವರೆಗೆ ನಡೆಯಲಿರುವ ಕಲಾತಂಡಗಳ ಮೆರವಣಿಗೆ ಸ್ತಬ್ಧಚಿತ್ರಗಳು ಮೆರುಗು ನೀಡಲಿವೆ.

ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸೆಸ್ಕ್‌ಗಳು ರೂಪಿಸಿರುವ ಮೂರು ಸ್ಪಬ್ಧ ಚಿತ್ರಗಳು ಮೆರವಣಿಯೊಂದಿಗೆ ಸಾಗಲಿವೆ.

ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಕಲ್ಪನೆ ಅಡಿಯಲ್ಲಿ ಪ್ಲಾಸ್ಟಿಕ್‌ ಮುಕ್ತ ಪರಿಸರದ ಕಲ್ಪನೆಯನ್ನುಟ್ಟುಕೊಂಡ ಸ್ಪಬ್ಧಚಿತ್ರವನ್ನು ರೂಪಿಸುತ್ತಿದ್ದರೆ, ನಗರಸಭೆಯು ಸ್ವಚ್ಛ ನಗರದ ನಿರ್ಮಾಣದಲ್ಲಿ ಒಳಚರಂಡಿಯ ಮಹತ್ವವನ್ನು ಸಾರುವ ಸಂದೇಶವನ್ನು ಸ್ಪಬ್ಧಚಿತ್ರದ ಮೂಲಕ ಕಟ್ಟಿಕೊಡಲಿದೆ. ಸೆಸ್ಕ್‌ ಕೂಡ ಸ್ತಬ್ಧಚಿತ್ರದ ತಯಾರಿಕೆಯಲ್ಲಿದ್ದು, ಇದು, ಇಲಾಖೆಯ ಯೋಜನೆಗಳು ಹಾಗೂ ವಿದ್ಯುತ್‌ ಉಳಿಸುವ ಸಂದೇಶವನ್ನು ಜನತೆಗೆ ರವಾನಿಸಲಿದೆ.

ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆಯ ಸ್ಪಬ್ಧಚಿತ್ರಗಳನ್ನು ರಾಮಸಮುದ್ರದ ಎಸ್‌.ಹರೀಶ್‌ಕುಮಾರ್‌ ಮತ್ತು ಎಂ.ನಂಜುಂಡಸ್ವಾಮಿ ಅವರು ತಯಾರಿಸುತ್ತಿದ್ದಾರೆ. ಮೂರ್ನಾಲ್ಕು ದಿನಗಳಿಂದ 10 ಮಂದಿಯ ತಂಡ ಸ್ಪಬ್ಧಚಿತ್ರದ ತಯಾರಿಕೆಯಲ್ಲಿ ನಿರತವಾಗಿದೆ.ಜಿಲ್ಲಾ ಪಂಚಾಯಿತಿಯ ಸ್ಪಬ್ಧಚಿತ್ರದ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಸ್ವಚ್ಛ ಭಾರತದ ಅಭಿಯಾನದ ಅಂಗವಾಗಿ ಪ್ಲಾಸ್ಟಿಕ್‌ ಮುಕ್ತ ಪರಿಸರದ ಬಗ್ಗೆ ನಮ್ಮ ಸ್ಪಬ್ಧಚಿತ್ರ ಜಾಗೃತಿ ಮೂಡಿಸಲಿದೆ. ಇದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣರಾವ್‌ ಅವರ ಕಲ್ಪನೆ. ಅವರೇ ಮುತುವರ್ಜಿ ವಹಿಸಿ ಸ್ಪಬ್ಧಚಿತ್ರದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೌಚಾಲಯಗಳ ಬಳಕೆ, ಮಳೆನೀರು ಸಂಗ್ರಹ, ಕಾಡಿನ ಮಹತ್ವ, ಪ್ಲಾಸ್ಟಿಕ್‌ ಬಳಕೆ ಬೇಡ... ಮುಂತಾದ ಸಂದೇಶಗಳನ್ನು ಸ್ತಬ್ಧಚಿತ್ರ ಸಾರಲಿವೆ ಎಂದು ಅವರು ಮಾಹಿತಿ ನೀಡಿದರು.

‘ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ನಿವಾಸಿಗಳು ತಮ್ಮ ಮನೆಯ ಶೌಚಾಲಯ ಹಾಗೂ ಸ್ನಾನದ ಮನೆಯ ಸಂಪರ್ಕವನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಅರಿವು ಮೂಡಿಸಲು, ಕಡ್ಡಾಯವಾಗಿ ಒಳ ಚರಂಡಿ ಸಂಪರ್ಕ ಕಲ್ಪಿಸಿಕೊಳ್ಳಿ ಎಂಬ ಸಂದೇಶವಿರುವ ಸ್ತಬ್ದ ಚಿತ್ರ ತಯಾರಿಸಲು ಸೂಚಿಸಲಾಗಿದೆ. ಇದರಲ್ಲಿ ಜಲಶಕ್ತಿ ಯೋಜನೆ, ಮಳೆ ನೀರು ಸಂಗ್ರಹದ ಸದುಪಯೋಗ, ಸ್ವಚ್ಛತೆಯ ಅರಿವಿನ ವಿಚಾರಗಳು ಅಡಕವಾಗಿರುತ್ತದೆ. ಅಂದಾಜು₹90 ಸಾವಿರ ವೆಚ್ಚದಲ್ಲಿ ನಿರ್ಮಿಸಲು ಸೂಚಿಸಲಾಗಿದೆ’ ಎಂದು ನಗರಸಭೆ ಆಯುಕ್ತ ಎಂ. ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂದಾಜು ₹ 5 ಲಕ್ಷ: ‘ಎರಡು ಸ್ತಬ್ಧಚಿತ್ರಗಳ ತಯಾರಿಕೆಗೆ ಅಗತ್ಯವಿರುವ ಎಲ್ಲ ಪರಿಕರಗಳ ಸಂಗ್ರಹ, ಗುಣಮಟ್ಟದ ಬಣ್ಣಗಳ ಬಳಕೆ, ಬಿದಿರಿನ ಬಂಬು, ಅಗತ್ಯವಿರುವ ಬಟ್ಟೆ ಹಾಗೂ ಕೆಲಸ ಮಾಡುವವರ ವೇತನ ಸೇರಿದಂತೆ ಅಂದಾಜು ₹ 5 ಲಕ್ಷ ಖರ್ಚು ಆಗಲಿದೆ. ಈಗಾಗಲೇ, ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆ ಆಡಳಿತದವರಿಗೆ ಸರಕಿನ ಬೆಲೆ ತಿಳಿಸಿದ್ದೇವೆ’ ಎಂದು ಕಲಾವಿದಹರೀಶ್ ಕುಮಾರ್ ಅವರು ಹೇಳಿದರು.

ಪರಿಸರ ಸ್ನೇಹಿ ವಸ್ತುಗಳ ಬಳಕೆ

‘ಶೌಚಾಲಯಗಳ ಬಳಕೆ, ಮಳೆ ನೀರು ಸಂಗ್ರಹ, ಪ್ಲಾಸ್ಟಿಕ್‌ ನಿಷೇಧ ಈ ಮೂರು ವಿಷಯಗಳನ್ನು ಇಟ್ಟುಕೊಂಡು ಜಿಲ್ಲಾ ಪಂಚಾಯಿತಿಯ ಸ್ತಬ್ಧ ಚಿತ್ರ ತಯಾರಿಸಲಾಗುತ್ತಿದೆ. ಸ್ವಚ್ಛ ವಾತಾವರಣಕ್ಕಾಗಿ ಒಳಚರಂಡಿಯ ಬಳಕೆ ಪರಿಕಲ್ಪನೆಯಲ್ಲಿ ಸ್ತಬ್ದ ಚಿತ್ರ ತಯಾರಿಸುವಂತೆ ನಗರಸಭೆ ಸೂಚಿಸಿದೆ. ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೇ ಬಟ್ಟೆ, ಬಿದಿರು ಸೇರಿದಂತೆಇನ್ನಿತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತಿದೆ’ ಎಂದು ಹರೀಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ಹೇಳಿದರು.

***

ಪ್ಲಾಸ್ಟಿಕ್‌ ನಿಷೇಧ ಪರಿಕಲ್ಪನೆಯನ್ನು ಇಟ್ಟುಕೊಂಡು ಸ್ಪಬ್ಧಚಿತ್ರ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಲಾಗಿದೆ

– ಬಿ.ಎಚ್‌.ನಾರಾಯಣರಾವ್‌, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT