ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಿನಾಥಂ ಶಾಲೆಯಲ್ಲಿ ಶಿಕ್ಷಕರು, ಕೊಠಡಿ ಕೊರತೆ

ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ; ಪೋಷಕರ ಆತಂಕ
Last Updated 7 ಫೆಬ್ರುವರಿ 2023, 5:21 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಗಡಿಯಲ್ಲಿರುವ ಗೋಪಿನಾಥಂ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದು, ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಷಕರಲ್ಲಿದೆ.

ಪ್ರಾಥಮಿಕ ಶಾಲೆಯಲ್ಲಿ 306 ವಿದ್ಯಾರ್ಥಿಗಳಿದ್ದಾರೆ. ತಮಿಳು ಮಾಧ್ಯಮಕ್ಕೆ ಸೀಮಿತವಾಗಿದ್ದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷದ ಹಿಂದೆ ಕನ್ನಡ ಮಾಧ್ಯಮ ಹಾಗೂ ಕಳೆದ ವರ್ಷ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭವಾಗಿದೆ.

‘ಕಿರಿಯ ಪ್ರಾಥಮಿಕ ಶಾಲೆಗೆ ಕನ್ನಡ, ಇಂಗ್ಲಿಷ್ ಭಾಷಾ ಶಿಕ್ಷಕರೇ ಇಲ್ಲ. ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ, ವಿಜ್ಞಾನ ಶಿಕ್ಷಕರಿಲ್ಲದಿರುವುದರಿಂದ ಬೋಧನೆ–ಕಲಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂಬುದು ಪೋಷಕರ ಅಳಲು.

ಪ್ರೌಢಶಾಲೆಯಲ್ಲಿ 89 ಮಕ್ಕಳಿದ್ದಾರೆ. ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ ಹಾಗೂ ಚಿತ್ರಕಲಾ ಶಿಕ್ಷಕರಿಲ್ಲ. ಈ ಭಾಗದ ಹಲವು ಗ್ರಾಮಗಳ ಮಕ್ಕಳಿಗೆ ಈ ಶಾಲೆಯೇ ಆಧಾರ. ಪ್ರತಿಯೊಂದಕ್ಕೂ ಪ್ರತ್ಯೇಕ ಕೊಠಡಿಗಳು ಬೇಕು. ಆದರೆ, ಎರಡು ಮಾಧ್ಯಮಗಳ ಮಕ್ಕಳನ್ನು ಒಂದೇ ಕಡೆ ಕೂರಿಸಿ ಪಾಠ ಮಾಡಲಾಗುತ್ತಿದೆ.

ಪ್ರೌಢಶಾಲೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕ್ರೀಡಾ ಸಾಮಗ್ರಿ ಇಡಲು ಕೊಠಡಿಗಳಿಲ್ಲ.

ಅರ್ಧಕ್ಕೆ ಸ್ಥಗಿತಗೊಂಡ ಕಾಮಗಾರಿ

ಶಾಲೆಯಲ್ಲಿ ಕೊಠಡಿ ಕೊರತೆ ನೀಗಿಸಲು ಪ್ರೌಢಶಾಲೆಯಲ್ಲಿ 2008ರಲ್ಲಿ ನಿರ್ಮಿತಿ ಕೇಂದ್ರದಿಂದ ಒಂದು ಕೊಠಡಿ ನಿರ್ಮಾಣ ಶುರುವಾಗಿದ್ದು, ಅರ್ಧಕ್ಕೆ ನಿಂತಿದೆ. ಶಾಲೆಯು ಗ್ರಾಮದ ಹೊರವಲಯದಲ್ಲಿರುವುದರಿಂದ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ನಿತ್ಯ ಮದ್ಯದ ಖಾಲಿ ಬಾಟಲಿಗಳನ್ನು ವಿದ್ಯಾರ್ಥಿಗಳು ವಿಲೇವಾರಿ ಮಾಡಬೇಕಾಗಿದೆ.

‘ಮದ್ಯದ ಬಾಟಲಿ ತೆಗೆಯುವಂತೆ ಮಕ್ಕಳಿಗೆ ಹೇಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಅದು ಅನಿವಾರ್ಯ’ ಎಂದು ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

--

ಶಿಕ್ಷಕರು, ಕೊಠಡಿ ಕೊರತೆ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿಯವರು ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
- ಅಯ್ಯನ್ ದೊರೆ, ಎಸ್‌ಡಿಎಂಸಿ ಅಧ್ಯಕ್ಷ

--

ಪ್ರೌಢಶಾಲೆಯಲ್ಲಿ ಭಾಷಾ ಶಿಕ್ಷಕರಾಗಿ ಹಿರಿಯ ಪ್ರಾಥಮಿಕ ಶಾಲೆಯ ಭಾಷಾ ಶಿಕ್ಷಕರನ್ನೇ ನಿಯೋಜಿಸಲಾಗಿದೆ.. ಮುಂದಿನ ವರ್ಷದಿಂದ ಕಾಯಂ ಶಿಕ್ಷಕರ ನಿಯೋಜನೆಯಾಗಲಿದೆ
- ಶಿವರಾಜು, ಬಿಇಒ, ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT