ಬುಧವಾರ, ಮಾರ್ಚ್ 3, 2021
18 °C

ಹನೂರು | ಗ್ರಾಮ ಪಂಚಾಯಿತಿ ಅಧಿಕಾರ; ಧರ್ಮಸ್ಥಳದಲ್ಲಿ ಸದಸ್ಯರ ಆಣೆ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು (ಚಾಮರಾಜನಗರ): ಇಲ್ಲಿನ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲಿತ ಸದಸ್ಯರು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯದ ಆವರಣದಲ್ಲಿ ಆಣೆ ಪ್ರಮಾಣ ಮಾಡುತ್ತಿರುವ ಎರಡು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಣ್ಣೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಚೆನ್ನಾಲಿಂಗನಹಳ್ಳಿ, ಜಿ.ಕೆ.ಹೊಸೂರು, ಶಿವಪುರ ಗ್ರಾಮಗಳು ಒಳಪಟ್ಟಿವೆ. 15 ಸ್ಥಾನಗಳನ್ನು ಹೊಂದಿರುವ ಇಲ್ಲಿನ ಪಂಚಾಯಿತಿಗೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿತ ತಲಾ ಐವರು ಆಯ್ಕೆಯಾಗಿದ್ದಾರೆ.

ಗ್ರಾಮಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಒಟ್ಟು ಎಂಟು ಮತಗಳ ಅಗತ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿ ಮಾಡಿಕೊಂಡು ಗ್ರಾಮಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಯತ್ನ ನಡೆಸಿದ್ದರು. ಇತ್ತೀಚೆಗೆ ಇವರು ಪ್ರವಾಸಕ್ಕೂ ತೆರಳಿದ್ದರು.

ಬಿಜೆಪಿ ಬೆಂಬಲಿತ ಐವರು ಹಾಗೂ ಜೆಡಿಎಸ್ ಬೆಂಬಲಿತ ನಾಲ್ವರು ಗ್ರಾಮಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಮುಂಭಾಗ ಕರ್ಪೂರ ಹೊತ್ತಿಸಿ ಅದರತ್ತ ಕೈ ಚಾಚಿ ಆಣೆ, ಪ್ರಮಾಣ ಮಾಡಿದ್ದಾರೆ. ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. 

‘ಎರಡೂವರೆ ವರ್ಷದ ಅವಧಿಯಲ್ಲಿ ಬಸವಣ್ಣ ಅವರಿಗೆ 10 ತಿಂಗಳು, ಮಮತಾರಾಣಿ ಎಂಬುವವರಿಗೆ 12 ತಿಂಗಳು ಹಾಗೂ ಕೊನೆಯ 8 ತಿಂಗಳು ಶಭಾನ ಖಾನ್ ಎಂಬುವವರಿಗೆ ಅಧ್ಯಕ್ಷ ಸ್ಥಾನ ನೀಡುವುದು ಮತ್ತು ಉಪಾಧ್ಯಕ್ಷ ಸ್ಥಾನ 18 ತಿಂಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ, ಉಳಿದ 10 ತಿಂಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ. ಹೀಗೆ ಐದು ವರ್ಷವೂ ಅಧಿಕಾರ ನಡೆಸಲು ಎರಡು ಪಕ್ಷಗಳ ಬೆಂಬಲಿತ ಸದಸ್ಯರು ಪ್ರಮಾಣ ಮಾಡಬೇಕು. ಜೆಡಿಎಸ್ ಬೆಂಬಲಿತ ಮತ್ತೊಬ್ಬ ಸದಸ್ಯ ಜಿ. ರಮೇಶ್ ನಮ್ಮ ಜೊತೆ ಪ್ರವಾಸಕ್ಕೆ ಬಂದಿಲ್ಲ. ಚುನಾವಣೆ ದಿನ ಅವರು ನಮಗೆ ಬೆಂಬಲ ಸೂಚಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ಕೆ.ಎಂ.ಬಸವರಾಜಪ್ಪ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು