ಮಂಗಳವಾರ, ಜನವರಿ 28, 2020
23 °C

ಲಕ್ಷ್ಮಿ ದೇವಸ್ಥಾನದ ಹುಂಡಿಗೆ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸೋಮವಾರ‌ಪೇಟೆಯ ಶಿರಗಳ್ಳಿ ಲಕ್ಷ್ಮಿ ದೇವಸ್ಥಾನದ ಹುಂಡಿಗೆ ದುಷ್ಕರ್ಮಿಗಳು ಗುರುವಾರ ರಾತ್ರಿ ಕನ್ನ ಹಾಕಿದ್ದಾರೆ. 

ದೇವಸ್ಥಾನದ ಬಳಿಯ ಮರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ದೇವಸ್ಥಾನದ ಒಳಗಡೆ ಇದ್ದ ಡಿವಿಆರ್‌ ಸಾಧನವನ್ನೂ ಕದ್ದೊಯ್ದಿದ್ದಾರೆ. 

‘ದೇವಸ್ಥಾನದ ಕಾಣಿಕೆ ಡಬ್ಬವನ್ನು ಒಡೆದಿರುವ ಕಳ್ಳರು, ಅದರಲ್ಲಿದ್ದ ಹಣವನ್ನು ಹೊತ್ತೊಯ್ದಿದ್ದಾರೆ. ₹ 5– 8 ಸಾವಿರದಷ್ಟು ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ರಾಮಸಮುದ್ರ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುನೀಲ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೆಳಿಗ್ಗೆ ಅರ್ಚಕರು ಪೂಜೆಗಾಗಿ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅರ್ಚಕರು ದೂರು ನೀಡಿದ್ದಾರೆ’ ಎಂದರು. 

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಗೂ ನುಗ್ಗಿದ ಕಳ್ಳರು: ಸಮೀಪದಲ್ಲೇ ಇರುವ ಯೂನಿವರ್ಸ್‌ ಶಾಲೆಯ ಕೊಠಡಿಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು, ಕಪಾಟಿನ ಬೇಗ ಒಡೆದಿದ್ದಾರೆ. ದಾಖಲೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. 

‘ಶಾಲೆಯಲ್ಲಿ ಬೆಲೆ ಬಾಳುವ ವಸ್ತುಗಳು ಏನೂ ಹೋಗಿಲ್ಲ. ಈ ಬಗ್ಗೆ ದೂರು ದಾಖಲಾಗಿಲ್ಲ’ ಎಂದು ಸುನೀಲ್‌ ಹೇಳಿದ್ದಾರೆ.

ಇದೇ ದೇವಸ್ಥಾನದಲ್ಲಿ 4 ತಿಂಗಳ ಹಿಂದೆಯೂ ಕಳ್ಳತನದ ಯತ್ನ ನಡೆದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು