ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಟಿಬೆಟ್‌ ನಿರಾಶ್ರಿತರ ಸ್ಫೂರ್ತಿಯುತ ಹೋರಾಟ

ಒಡೆಯರಪಾಳ್ಯ: ಸೋಂಕು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ, ಮೂರು ಕ್ವಾರಂಟೈನ್‌ ಕೇಂದ್ರಗಳ ಸ್ಥಾಪನೆ
Last Updated 3 ಜೂನ್ 2021, 4:52 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಒಡೆಯರಪಾಳ್ಯದ ಬಳಿ ಇರುವ ಟಿಬೆಟ್‌ನ ನಿರಾಶ್ರಿತರ ಶಿಬಿರದ ಆಡಳಿತವು ಸರ್ಕಾರ ಅಥವಾ ಜಿಲ್ಲಾಡಳಿತದ ನೆರವನ್ನು ನೆಚ್ಚಿಕೊಳ್ಳದೇ ತನ್ನದೇ ಸಂಪನ್ಮೂಲ ಬಳಸಿಕೊಂಡು‌ ಕೋವಿಡ್‌ 2ನೇ ಅಲೆಯ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ.

ಹೊರಗಿನಿಂದ ಬಂದವರಿಂದ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ಮೂರು ಪ್ರತ್ಯೇಕ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಾಗಿದೆ. ಹೊರಗಿನಿಂದ ಬಂದವರು ಕೋವಿಡ್‌ ಪರೀಕ್ಷೆ ಮಾಡಿಸಿ ನೆಗೆಟಿವ್‌ ವರದಿ ತರುವುದು ಕಡ್ಡಾಯ. ಆ ನಂತರವಷ್ಟೇ ಶಿಬಿರದಲ್ಲಿರುವ ಗ್ರಾಮಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಶಿಬಿರದಲ್ಲಿ 22 ಗ್ರಾಮಗಳಿದ್ದು (ವಿಲೇಜ್) 3,200 ಜನರು ವಾಸ ಮಾಡುತ್ತಿದ್ದಾರೆ. ಕೋವಿಡ್ ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಇಲ್ಲಿನ ಅಧಿಕಾರಿಗಳು, ಎರಡನೇ ಅಲೆಯನ್ನೂ ಯಶಸ್ವಿಯಾಗಿ ನಿಭಾಯಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇದುವರೆಗೆ ಶಿಬಿರದ ಯಾರೂ ಕೋವಿಡ್‌ನಿಂದಾಗಿ ಪ್ರಾಣಕಳೆದುಕೊಂಡಿಲ್ಲ.

ಕೋವಿಡ್ ಮೊದಲನೇ ಅಲೆಯಲ್ಲಿ 11 ಪ್ರಕರಣಗಳು ಕಾಣಿಸಿಕೊಂಡಿದ್ದವು. ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಲಿದೆ ಎಂಬ ಆರೋಗ್ಯ ಇಲಾಖೆಯ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ, ಅದರ ನಿಯಂತ್ರಣಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪರಿಣಾಮ ಸೋಂಕು ಕಂಡು ಬಂದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಮೂರು ಕ್ವಾರಂಟೈನ್ ಕೇಂದ್ರ: ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯುವ ಸಲುವಾಗಿ ಶಾಲೆ, ಆಸ್ಪತ್ರೆ ಹಾಗೂ ಸಮುದಾಯ ಭವನಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಎರಡನೇ ಅಲೆಯಲ್ಲಿ ಇದುವರೆಗೆ 137 ಮಂದಿಗೆ ಸೋಂಕು ದೃಢಪಟ್ಟಿದ್ದು, 97 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 40 ಸಕ್ರಿಯ ಪ್ರಕರಣಗಳಿವೆ.

‘ಶಿಬಿರಕ್ಕೆ ರಾಷ್ಟ್ರದ ವಿವಿಧೆಡೆಗಳಿಂದ ಹಾಗೂ ಹಲವು ಜಿಲ್ಲೆಗಳಿಂದ ಜನರು ಬರುತ್ತಾರೆ. ಅವರೆಲ್ಲರೂ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವುದು ಕಡ್ಡಾಯ. ವರದಿ ನೆಗೆಟಿವ್ ಇದ್ದರೆ, ಅವರು ಯಾವ ಗ್ರಾಮದವರು ಎಂಬುದರ ಬಗ್ಗೆ ಮಾಹಿತಿ ಪಡೆದು, ಆ ಗ್ರಾಮಕ್ಕೆ ಮಾಹಿತಿ ನೀಡುತ್ತೇವೆ. ವರದಿ ಪಾಸಿಟಿವ್ ಇದ್ದರೆ ಅವರನ್ನು ಐಸೊಲೇಷನ್‌/ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ.ಎರಡನೇ ಅಲೆಯಲ್ಲಿ ಇದುವರೆಗೆ ಇಬ್ಬರಿಗೆ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಂಕಿತರ ಆರೋಗ್ಯ ತಪಾಸಣೆಯನ್ನು ದಿನಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ಅವರಿಗೆ ಉಪಹಾರದ ವ್ಯವಸ್ಥೆಯನ್ನು ಇಲ್ಲಿನ ಆಸ್ಪತ್ರೆ ವತಿಯಿಂದಲೇ ಪೂರೈಸಲಾಗುತ್ತಿದೆ’ ಎಂದು ದಾಡೇಲಿಂಗ್ ಆಸ್ಪತ್ರೆಯ ಕಾರ್ಯದರ್ಶಿ ಮಿಂಗ್ಮಾರ್ ಸೇರಿನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

1,100 ಜನರಿಗೆ ಲಸಿಕೆ
ಶಿಬಿರದಲ್ಲಿರುವ3,200 ಜನರ ಪೈಕಿ 60ಕ್ಕಿಂತ ಹೆಚ್ಚು ವಯಸ್ಸಾದ 700 ಮಂದಿಗೆ ಮೊದಲನೇ ಹಾಗೂ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. 45 ರಿಂದ 59 ವಯಸ್ಸಿನವರಿಗೆ 400 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು 18ರಿಂದ 44 ವಯಸ್ಸಿನವನ್ನು ಗುರುತಿಸಲಾಗಿದ್ದು ಅವರೆಲ್ಲರಿಗೂ 800 ಲಸಿಕೆ ಅಗತ್ಯವಿದೆ ಎಂದು ಮಿಂಗ್ಮಾರ್ ಸೇರಿನಿ ಅವರು ಮಾಹಿತಿ ನೀಡಿದರು.

**
ಇಲ್ಲಿನ ಆಸ್ಪತ್ರೆಯಲ್ಲಿ 4 ಆಕ್ಸಿಜನ್ ಕನ್ಸ್ಂಟೇಟರ್ಗಳಿವೆ. ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇಲ್ಲಿಯೇ ಆಮ್ಲಜನಕ ನೀಡುವ ಕಾರ್ಯ ಮಾಡಲಾಗುತ್ತಿದೆ.
-ಮಿಂಗ್ಮಾರ್ ಸೇರಿನಿ, ಕಾರ್ಯದರ್ಶಿ, ದಾಂಡೇಲಿಂಗ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT