ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿ ಮೀರಿದ ಭಾರ, ಸಾಗಣೆಗಿಲ್ಲ ಕಡಿವಾಣ

ಬೆಳ್ಳಂ ಬೆಳಗ್ಗೆ ಸಂಚರಿಸುವ ಲಾರಿ, ಟಿಪ್ಪರ್‌ಗಳು, ಪೊಲೀಸರ ಜಾಣ ಕುರುಡು–ಆರೋಪ
Last Updated 13 ಜೂನ್ 2021, 3:26 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಯಮಕ್ಕಿಂತ ಹೆಚ್ಚು ಮಣ್ಣು, ಕಲ್ಲು, ಮರದ ದಿಮ್ಮಿಗಳು ಹಾಗೂ ಎಂ.ಸ್ಯಾಂಡ್‍ ಅನ್ನು ಲಾರಿ ಹಾಗೂ ಟಿಪ್ಪರ್‌ಗಳಲ್ಲಿ ತುಂಬಿಸಿಕೊಂಡು ಸಾಗಿಸಲಾಗುತ್ತಿದ್ದು, ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ನೋಡಿಕೊಂಡೂ ಸುಮ್ಮನಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಹಳ್ಳಿಗಳ ಮುಖ್ಯ ರಸ್ತೆಗಳಲ್ಲಿ ನಿತ್ಯವೂ ಈ ಅಕ್ರಮ ಸಾಗಣೆ ರಾಜಾರೋಷವಾಗಿ ನಡೆಯುತ್ತಿದ್ದು, ನಿಯಮ ಪಾಲನೆಯ ಬಗ್ಗೆ ನಿಗಾ ಇಡಬೇಕಾದವರು ಸುಮ್ಮನಿದ್ದಾರೆ ಎಂಬುದು ಅವರ ದೂರು.

ಲಾರಿ, ಟಿಪ್ಪರ್‌ಗಳಲ್ಲಿ ಅದರ ಬಾಡಿಯ ಮಟ್ಟಕ್ಕೆ ಲೋಡು ಹಾಕಿಕೊಳ್ಳಬಹುದು. ಅದಕ್ಕಿಂತ ಹೆಚ್ಚು ಹಾಕಿದರೆ ಅದು ನಿಯಮ ಉಲ್ಲಂಘನೆಯಾಗುತ್ತದೆ. ಪೊಲೀಸರು ಇಲ್ಲವೇ ಆರ್‌ಟಿಒ ಅಧಿಕಾರಿಗಳು ಅಂತಹ ಲಾರಿಗಳನ್ನು ತಡೆದು ದಂಡ ವಿಧಿಸಿ, ಪ್ರಕರಣ ದಾಖಲಿಸುವುದಕ್ಕೆ ಅವಕಾಶ ಇದೆ.

‘ಬಹುತೇಕ ಲಾರಿಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ನಗರ,ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲು, ಮಣ್ಣು ಸೇರಿದಂತೆ ಅನೇಕ ವಸ್ತುಗಳನ್ನು ಬಾಡಿ ಮಟ್ಟಕ್ಕಿಂತ ಮೇಲಕ್ಕೆ ತುಂಬಿಕೊಂಡು ಹೋಗುವ ಟಿಪ್ಪರ್‌ಗಳ ಭರಾಟೆ ಹೆಚ್ಚಾಗಿದೆ. ಕೆಲವರು ಅತೀ ವೇಗವಾಗಿ ಲಾರಿಗಳನ್ನು ಓಡಿಸುತ್ತಾರೆ. ಇದರಿಂದ ಸಣ್ಣಪುಟ್ಟ ವಾಹನಗಳು ರಸ್ತೆಗೆ ಬರಲು ಹೆದರುವಂತಾಗಿದೆ’ ಎಂದು ಕಾರು ಚಾಲಕ ಶಿವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ಹೆಚ್ಚು ಓಡಾಟ: ಮಿತಿಗಿಂತ ಹೆಚ್ಚು ಭಾರದ ಸಾಗಣೆ ಬೆಳಗಿನ ಹೊತ್ತು ನಡೆಯುತ್ತದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 7ರವರೆಗೆ ಲಾರಿ ಟಿಪ್ಪರ್‌ಗಳ ಇವುಗಳ ಹೆಚ್ಚಿರುತ್ತದೆ.

‘ಬೆಂಗಳೂರಿನಿಂದ ಪ್ರತಿನಿತ್ಯ ಎಂ.ಸ್ಯಾಂಡ್ ಅನ್ನು ನಿಯಮಮೀರಿ ತುಂಬಿಕೊಂಡು ಬರುವ ಟಿಪ್ಪರ್‌ಗಳುಸತ್ತೇಗಾಲ ಮೂಲಕ ಬಂದು ಸುತ್ತ ಮುತ್ತಲಿನ ಗ್ರಾಮಗಳಿಗೆ ಬರುತ್ತಿವೆ. ಕೆಲವು ಟಿಪ್ಪರ್‌ಗಳು ನಿಯಮದಂತೆ ಮಣ್ಣು, ಕಲ್ಲು, ಎಂ.ಸ್ಯಾಂಡ್‍ಗಳನ್ನು ತುಂಬಿಕೊಂಡು ಬರುತ್ತವೆ’ ಎಂಬುದು ಜನರ ಮಾತು.

ರಸ್ತೆಗಳು ಹಾಳು: ಮಿತಿಗಿಂತ ಹೆಚ್ಚು ಭಾರದ ವಾಹನಗಳು ಓಡಾಡುವುದರಿಂದ ರಸ್ತೆಗಳಿಗೂ ಹಾನಿಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ರಸ್ತೆಗಳು ಹೆಚ್ಚು ಭಾರವನ್ನು ಸಹಿಸುವ ಸಾಮರ್ಥ್ಯ ಹೊಂದಿಲ್ಲ. ಇಂತಹ ರಸ್ತೆಗಳಲ್ಲಿ ಭಾರದ ಟಿಪ್ಪರ್‌ಗಳು ಸಾಗಿದರೆ, ರಸ್ತೆಯಲ್ಲಿ ಹಳ್ಳಕೊಳ್ಳಗಳು ಸೃಷ್ಟಿಯಾಗುತ್ತವೆ.

‘ಹಳ್ಳಿಗಳ ರಸ್ತೆಯಂತೂ ಈಗಾಗಲೇ ಹಳ್ಳಕೊಳ್ಳಗಳಿಂದ ಕೂಡಿದೆ. ಕೆಲವು ರಸ್ತೆಗಳು ಈ ಟಿಪ್ಪರ್‌ಗಳ ಹಾವಳಿಯಿಂದ ಮತ್ತಷ್ಟು ಹಾಳಾಗಿದೆ. ಹೀಗಾದರೆ ಗ್ರಾಮೀಣ ಪ್ರದೇಶದ ಜನರ ರಸ್ತೆಗಳ ಗತಿಯೇನು’ ಎಂದು ಜಿನಕನಹಳ್ಳಿ ಗ್ರಾಮದ ಬಾಬು ಅವರು ಪ್ರಶ್ನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ನಾಗರಾಜು ಅವರು, ‘ನಿಯಮಕ್ಕಿಂತ ಹೆಚ್ಚು ಮಣ್ಣು, ಕಲ್ಲು, ಎಂ.ಸ್ಯಾಂಡ್‍ಗಳನ್ನು ಟಿಪ್ಪರ್‌ನಲ್ಲಿ ತುಂಬಿಕೊಂಡು ಬಂದರೆ ಆ ವಾಹನವನ್ನು ತಡೆದು ತಪಾಸಣೆ ಮಾಡಿ ಪ್ರಕರಣ ದಾಖಲು ಮಾಡುತ್ತೇವೆ. ನಂತರ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಅವರು ಬಂದು ನೋಡಿ ದಂಡ ವಿಧಿಸುತ್ತಾರೆ’ ಎಂದು ಹೇಳಿದರು.

ವಿದ್ಯುತ್ ತಂತಿ ಕಟ್, ಅಪಘಾತಕ್ಕೆ ಆಹ್ವಾನ

‘ಹಳ್ಳಿಗಳಲ್ಲಿ ಮೊದಲೇ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಕಬ್ಬಿನ ಲಾರಿಗಳು ಕಬ್ಬನ್ನು ನಿಯಮ ಮೀರಿ ಹೆಚ್ಚಾಗಿ ಜಮೀನುಗಳಿಂದ ತುಂಬಿಕೊಂಡು ಬರುತ್ತಾರೆ. ಮನೆಗಳ ವಿದ್ಯುತ್ ತಂತಿಗಳು ಜೋತು ಬಿದ್ದ ಸಂದರ್ಭದಲ್ಲಿ ಕಬ್ಬಿನ ಲಾರಿಗಳು ವಿದ್ಯುತ್ ತಂತಿಗಳನ್ನು ಕಿತ್ತುಕೊಂಡು ಹೋಗಿವೆ. ಆಗ ಮನೆಯವರು ದಿನವಿಡೀ ವಿದ್ಯುತ್ ಇಲ್ಲದೆ ಪರದಾಡುವಂತಹ ನಿದರ್ಶನಗಳನ್ನು ನಿತ್ಯವೂ ನೋಡುತ್ತಿದ್ದೇವೆ. ಕೆಲವು ಬಾರಿ ಕಬ್ಬಿನ ಲಾರಿಗಳಲ್ಲಿ ಲೋಡು ಒಂದೇ ಕಡೆ ವಾಲಿಕೊಂಡು ಇರುತ್ತದೆ. ಇಂತಹ ಸ್ಥಿತಿಯಲ್ಲಿ ಅನೇಕ ಬಾರಿ ಲಾರಿಗಳು ಮಗುಚಿ ಬಿದ್ದು ಅನಾಹುತ ಸಂಭವಿಸಿವೆ. ಮಿತಿಗಿಂತ ಹೆಚ್ಚು ಭಾರ ಹಾಕಿರುವ ಲಾರಿ, ಟಿಪ್ಪರ್‌ಗಳನ್ನು ಓಡಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಶಂಕನಪುರದ ರಾಚಪ್ಪಾಜಿ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT