ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

Published 7 ಜುಲೈ 2024, 14:33 IST
Last Updated 7 ಜುಲೈ 2024, 14:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರ ಸಫಾರಿಗೆ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದರಿಂದ ತಪ್ಪಲಿನಲ್ಲಿ ಪ್ರವಾಸಿಗರು ಬೆಟ್ಟಕ್ಕೆ ತೆರಳಲು ಗಂಟೆಗಟ್ಟಲೇ ಕಾದರೆ, ಬಂಡೀಪುರ ಸಫಾರಿ ಟಿಕೆಟ್ ಪಡೆಯಲು ಕಾಯುವಂತಾಯಿತು.

ಆಷಾಢ ಮಾಸ ಹಾಗೂ ಭಾನುವಾರ ರಜಾ ದಿನವಾದ ಕಾರಣ ಕೇರಳ, ತಮಿಳುನಾಡು, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು  ಪ್ರವಾಸಿಗರು ಆಗಮಿಸಿದ್ದರು. ಬೆಳಿಗ್ಗೆ 12 ಗಂಟೆ ವೇಳೆಗೆ ಅಧಿಕ ಜನರು ಆಗಮಿಸಿದ ಕಾರಣ ಜನದಟ್ಟಣೆ ಉಂಟಾಯಿತು. ಕೆಎಸ್‍ಆರ್‌ಟಿಸಿ ಬಸ್ ಮೂಲಕ ಬೆಟ್ಟಕ್ಕೆ ಹೋಗಬೇಕಾದ್ದರಿಂದ ಪ್ರವಾಸಿಗರು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ತೆರಳಿದರು. ಬೆಟ್ಟದಲ್ಲಿ ಪ್ರವಾಸಿಗರ ದಟ್ಟಣೆಯಿತ್ತು.

ಗೋಪಾಲಸ್ವಾಮಿಗೆ ವಿಶೇಷ ಪೂಜೆ: ಆಷಾಢ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟರು ಗೋಪಾಲಸ್ವಾಮಿಗೆ ವಿವಿಧ ಬಗೆಯ ಹೂವಿಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ದೇವರ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ಬೆಟ್ಟ-ಗುಡ್ಡವೆಲ್ಲ ಹಸಿರುಮಯ ಆಗಿರುವುದರಿಂದ ಗೋಪಾಲಸ್ವಾಮಿ ಬೆಟ್ಟದಲ್ಲಿ ತಣ್ಣನೆಯ ವಾತಾವರಣದ ಜೊತೆಗೆ ಕಣ್ಣಾಯಿಸಿದ ಕಡೆಯೆಲ್ಲಾ ಹಸಿರು ಗೋಚರಿಸುತ್ತದೆ.  ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಫೋಟೊ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಸಫಾರಿಗೂ ಹೆಚ್ಚು ಮಂದಿ ಲಗ್ಗೆ: ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಫಾರಿಗೂ ಅಧಿಕ ಸಂಖ್ಯೆಯ ಪ್ರವಾಸಿಗರು ಬಂದಿದ್ದರು. ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಕ್ಯಾಂಪಸ್‌ನಲ್ಲಿ ಹೆಚ್ಚು ಜನರಿದ್ದ ಕಾರಣ ಅನೇಕ ಮಂದಿ ಸಫಾರಿ ಟಿಕೆಟ್ ಸಿಗದೆ ವಾಪಸ್ಸಾದರು. ‘ಸಫಾರಿ ವೇಳೆ ಆನೆ, ಜಿಂಕೆ, ನವಿಲು ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಸಿಕ್ಕಿವೆ’ ಎಂದು ಪ್ರವಾಸಿಗರೊಬ್ಬರು ತಿಳಿಸಿದರು.

ಹುಲಿ ದರ್ಶನ ಕಡಿಮೆ: ‘ಬೇಸಿಗೆಯಲ್ಲಿ ಸಫಾರಿಗೆ ತೆರಳುತ್ತಿದ್ದ ವೇಳೆ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ನೀಡುತ್ತಿದ್ದವು. ಆದರೆ ಇದೀಗ ಬಂಡೀಪುರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕೆರೆ-ಕಟ್ಟೆ ತುಂಬಿದ್ದು, ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ. ಎಲ್ಲೆಡೆ ನೀರು ಸಿಗುತ್ತಿರುವ ಕಾರಣ ಹುಲಿಗಳು ಸಫಾರಿ ವಲಯ ಬಿಟ್ಟು ಹೊರ ಹೋಗಿದ್ದು, ಕಾಣಸಿಗುತ್ತಿಲ್ಲ’ ಎಂದು ಸಫಾರಿ ಚಾಲಕರೊಬ್ಬರು ತಿಳಿಸಿದರು.

ಬೇಸಿಗೆಯಲ್ಲಿ ಎಲ್ಲಾ ಕೆರೆಗಳು ಬತ್ತಿದ್ದವು. ಸೋಲಾರ್ ನಿಂದ ಚಾಲನೆಯಾಗುವ ಕೊಳವೆಬಾವಿಗಳಲ್ಲಿನ ಕೆರೆಗಳಲ್ಲಿ ನೀರು ಇದ್ದದ್ದರಿಂದ ಹುಲಿಗಳು ಬಾಯಾರಿಕೆ ಮತ್ತು ದಣಿವರಿಸಿಕೊಳ್ಳಲು ನೀರಿರುವ ಕೆರೆಗಳಲ್ಲಿ ಹೆಚ್ಚು ಕಂಡುಬರುತ್ತಿದ್ದವು. ಆದರೆ ಎಲ್ಲಾ ಕೆರೆಗಳಲ್ಲಿ ನೀರು ಇರುವುದರಿಂದ ಹುಲಿಗಳು ಕಾಣಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ’ ಎನ್ನುತ್ತಾರೆ ಇಲಾಖೆ ಸಿಬ್ಬಂದಿಗಳು.

ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಟಿಕೆಟ್‌ಗಾಗಿ ಸರದಿಯಲ್ಲಿ ನಿಂತಿರುವ ಪ್ರವಾಸಿಗರು
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಟಿಕೆಟ್‌ಗಾಗಿ ಸರದಿಯಲ್ಲಿ ನಿಂತಿರುವ ಪ್ರವಾಸಿಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT