ಭಾನುವಾರ, ಮೇ 22, 2022
22 °C
ಊಟಿ: 30 ಸಾವಿರಕ್ಕೂ ಹೆಚ್ಚು ಹೂಕುಂಡಗಳ ಸಿದ್ಧತೆ, ಕೋವಿಡ್‌–19 ಜಾಗೃತಿ ಸಂದೇಶ

ಗುಂಡ್ಲುಪೇಟೆ | ಪ್ರವಾಸಿಗರಿಗಿಲ್ಲ ಪುಷ್ಪಗಳ ಕಣ್ತುಂಬುವ ಭಾಗ್ಯ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ಪ್ರತಿ ವರ್ಷ ಮೇ ತಿಂಗಳ ಮೂರನೇ ವಾರದಲ್ಲಿ (ಸಾಮಾನ್ಯವಾಗಿ ಮೇ 15ರಿಂದ 19) ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ವರ್ಷವೂ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್‌–19 ಲಾಕ್‌ಡೌನ್‌ ಕಾರಣಕ್ಕೆ ಪ್ರದರ್ಶನ ರದ್ದಾಗಿದೆ. 

ಹಾಗಿದ್ದರೂ, ಸಿಬ್ಬಂದಿ ಹೂವಿನ ಗಿಡಗಳನ್ನು ಒಪ್ಪವಾಗಿ ಜೋಡಿಸಿ ಸಿದ್ಧತೆ ಮಾಡಿಕೊಂಡಿದ್ದರು. ವಿವಿಧ ಜಾತಿಯ ಫಲಪುಷ್ಪಗಳು ಕಣ್ಮನ ಸೆಳೆಯುತ್ತಿವೆ. ಆದರೆ, ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಲ್ಲ. ಅದೇ ಊಟಿ ಮಾತ್ರವಲ್ಲದೇ ಜಿಲ್ಲೆಯ ಕೂನೂರಿನ ಸೀಮ್ಸ್ ಪಾರ್ಕ್, ಗೂಡಲೂರಿನಲ್ಲಿ ನಡೆಯ ಬೇಕಿದ್ದ ಪ್ರದರ್ಶನಗಳೂ ರದ್ದಾಗಿವೆ.

ಈ ವರ್ಷದ ಪ್ರದರ್ಶನಕ್ಕಾಗಿ 35 ಸಾವಿರಕ್ಕೂ ಹೆಚ್ಚು ಹೂವಿನ ತೊಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಆರ್ಕಿಡ್, ಲಿಲ್ಲಿಯಾ, ರೋಸ್, ಮಾರ್ನಿಂಗ್ ಗ್ಲೋರಿ, ಪ್ರಾನ್ಸಿ ಸೇರಿದಂತೆ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಸಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಈ ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಕೋವಿಡ್‌–19 ಬಗ್ಗೆ ಜಾಗೃತಿ ಮೂಡಿಸಲು ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ವೈರಸ್‌ ಚಿತ್ರವನ್ನು ವಿವಿಧ ಹೂ ಕುಂಡಗಳನ್ನು ಬಳಸಿ ಚಿತ್ರಿಸಲಾಗಿದ್ದು, ಮನೆಯಲ್ಲೇ ಇರಿ ಎಂಬ ಸಂದೇಶವನ್ನೂ ಆಕರ್ಷಕ ಹೂಕುಂಡಗಳಿಂದ ಬರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ವೈರಲ್‌ ಆಗಿವೆ.

ಬಟಾನಿಕಲ್ ಗಾರ್ಡನ್ ಮತ್ತು ರೋಸ್ ಗಾರ್ಡನ್‌ಗಳಲ್ಲಿ ಜೋಡಿಸಿಟ್ಟ ಆಕರ್ಷಕ ಪುಷ್ಪಗಳ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇವುಗಳನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಪ್ರವಾಸಿಗರು, ಪುಷ್ಪ ಕುತೂಹಲ ಹೊಂದಿರುವವರು ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜೀವನದ ಮೇಲೆ ಪರಿಣಾಮ
ಊಟಿ ನಗರ ಒಂದರಲ್ಲೇ 3,800ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಇವುಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ರೂಪಿಸಿಕೊಂಡಿದ್ದವರ ಸಂಖ್ಯೆಯೂ ಹೆಚ್ಚಿತ್ತು. ಆದರೆ, ಕೋವಿಡ್‌–19 ಮಹಾಮಾರಿ ಎಲ್ಲರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. 

ಪುಷ್ಪ ಪ್ರದರ್ಶನ ರದ್ದಾಗಿರುವುದರಿಂದ ಇವುಗಳನ್ನು ವಿಡಿಯೊ ಮತ್ತು ಆಲ್ಬಂ ಮಾಡಿ ಬಿಡುಗಡೆ ಮಾಡುವುದಾಗಿ ಅಲ್ಲಿನ ತೋಟಗಾರಿಕೆ ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು