ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಹೆಚ್ಚಿದ ಪ್ರವಾಸಿಗರು; ಚೇತರಿಸಿದ ಪ್ರವಾಸೋದ್ಯಮ

ಸೂರ್ಯನಾರಾಯಣ ವಿ.
Published 19 ಫೆಬ್ರುವರಿ 2024, 4:31 IST
Last Updated 19 ಫೆಬ್ರುವರಿ 2024, 4:31 IST
ಅಕ್ಷರ ಗಾತ್ರ

ಚಾಮರಾಜನಗರ: 2023ನೇ ಸಾಲಿನಲ್ಲಿ ಜಿಲ್ಲೆಯ ಪರಿಸರ, ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 

2021–22ರಲ್ಲಿ ಕೋವಿಡ್‌ ಕಾರಣಕ್ಕೆ ನಿರ್ಬಂಧಗಳು ಇದ್ದುದರಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. 

ಗಡಿ ಜಿಲ್ಲೆ ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಬಂಡೀಪುರ, ಬಿಆರ್‌ಟಿ, ಭರಚುಕ್ಕಿ ಜಲಪಾತ, ಹೊಗೆನಕಲ್‌ ಜಲಪಾತ, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಕನಕಗಿರಿ, ಹುಲುಗುನಮುರುಡಿ ವೆಂಕಟರಮಣಸ್ವಾಮಿ ವಲಯ, ಶಿವನಮುದ್ರ ಸಮೂಹ ದೇವಾಲಯಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. 

ಪ್ರವಾಸೋದ್ಯಮ ಇಲಾಖೆಯು ಪ್ರಮುಖ ಏಳು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ವಿವರಗಳನ್ನು ಕಲೆ ಹಾಕಿದ್ದು, ಎರಡು ತಾಣಗಳನ್ನು ಬಿಟ್ಟರೆ ಉಳಿದ ಐದು ಸ್ಥಳಗಳಿಗೆ 2022ಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಹೋಲಿಸಿದರೆ, ಕಳೆದ ವರ್ಷ ಹೆಚ್ಚು ಜನರು ಭೇಟಿ ನೀಡಿದ್ದಾರೆ. 

ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಬಂಡೀಪುರ, ಕನಕಗಿರಿ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಗಳಿಗೆ ಭೇಟಿ ನೀಡಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಬಂಡೀಪುರಕ್ಕೆ ಹೆಚ್ಚು:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ ಶೇ 30.39ರಷ್ಟು ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ಮಾಡಿದ್ದರು. ಆ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. 

2022ರಲ್ಲಿ 1.24 ಲಕ್ಷ ಪ್ರವಾಸಿಗರು ಬಂಡೀಪುರ ಅರಣ್ಯದ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 1.62 ಲಕ್ಷಕ್ಕೆ ಏರಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಶೇ 6.8ರಷ್ಟು ಹೆಚ್ಚಳವಾಗಿದೆ. ಬಿಳಿಗಿರಿರಂಗನಬೆಟ್ಟಕ್ಕೆ ಬಂದವರ ಸಂಖ್ಯೆ ಶೇ 5.58ರಷ್ಟು ಜಾಸ್ತಿಯಾಗಿದೆ. ಪವಾಡಪುರುಷ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಶೇ 4.76ರಷ್ಟು ಏರಿಕೆ ಕಂಡಿದೆ. ಕನಕಗಿರಿ ಜೈನ ಕ್ಷೇತ್ರಕ್ಕೆ ಭೇಟಿ ನೀಡಿದವರು ಶೇ 5.12ರಷ್ಟು ಜಾಸ್ತಿಯಾಗಿದ್ದಾರೆ. 

ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ದೇವಾಲಯಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.  

‘ದೇವಾಲಯಗಳಿಗೆ ಭೇಟಿ ನೀಡಿದವರ ಸಂಖ್ಯೆಯನ್ನು ನಿಖರವಾಗಿ ದಾಖಲು ಮಾಡಲು ಸಾಧ್ಯವಾಗುವುದಿಲ್ಲ. ದೇವಾಲಯಗಳ ಆಡಳಿತ ಮಂಡಳಿ ನೀಡಿರುವ ಅಂಕಿ ಅಂಶಗಳ ಆಧಾರದಲ್ಲಿ ನಮೂದಿಸಲಾಗುತ್ತದೆ. ಹಾಗಾಗಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದವರ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ತಮನ್ ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. 

ಸೌಲಭ್ಯ ಕಲ್ಪಿಸಿ:

‘ಜಿಲ್ಲೆಯಲ್ಲಿ ಅತ್ಯುತ್ತಮ ಪ್ರವಾಸಿ ತಾಣಗಳಿದೆ. ಆದರೆ ಸೌಲಭ್ಯಗಳು ಸಾಲದು. ಭೇಟಿ ನೀಡುವವರಿಗೆ ಕನಿಷ್ಠ ಮೂಲ ಸೌಕರ್ಯಗಳಲ್ಲಿ ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.

ಮಳೆ ಕೊರತೆ ಕಾರಣಕ್ಕೆ ಭರಚುಕ್ಕಿ ಮತ್ತು ಹೊಗೆನಕಲ್‌ ಜಲಪಾತಗಳಿಗೆ ಕಳೆದ ವರ್ಷ ಭೇಟಿ ನೀಡಿದವರ ಸಂಖ್ಯೆ ಕಡಿಮೆಯಾಗಿದೆ.
ತಮನ್‌ ಎಸ್‌.ಪಾಟೀಲ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಕಳೆಗುಂದಿದ ಜಲಪಾತಗಳು
ಪ್ರತಿ ವರ್ಷ ಮಳೆಗಾಲದಲ್ಲಿ ಜಿಲ್ಲೆಯ ಪ್ರಸಿದ್ಧ ಜಲಪಾತಗಳಾದ ಭರಚುಕ್ಕಿ ಮತ್ತು ಹೊಗೆನಕಲ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಕಳೆದ ವರ್ಷ ಮಳೆ ಕೊರತೆ ಇದ್ದುದರಿಂದ ಕಾವೇರಿ ನದಿ ಮೈತುಂಬಿ ಹರಿಯಲಿಲ್ಲ. ಹೀಗಾಗಿ ಜಲಪಾತಗಳಿಗೂ ಜೀವ ಕಳೆ ಬಂದಿರಲಿಲ್ಲ.  2022ರಲ್ಲಿ ಹೊಗೆನಕಲ್‌ ಜಲಪಾತದಕ್ಕೆ 57813 ಮಂದಿ ಭೇಟಿ ನೀಡಿದ್ದರು. ಕಳೆದ ವರ್ಷ ಈ ಸಂಖ್ಯೆ 51482ಕ್ಕೆ ಇಳಿದಿತ್ತು. ಶೇಕಡವಾರು ಲೆಕ್ಕಚಾರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ 10.95 ರಷ್ಟು ಇಳಿಕೆಯಾಗಿದೆ.  2022ರಲ್ಲಿ ಭರಚುಕ್ಕಿ ಜಲಪಾತದ ಜಲವೈಭವವನ್ನು 4.80 ಲಕ್ಷ ಮಂದಿ ಕಣ್ತುಂಬಿಕೊಂಡಿದ್ದರು. 2023ರಲ್ಲಿ ಪ್ರವಾಸಿಗರ ಸಂಖ್ಯೆ 4.47ಲಕ್ಷಕ್ಕೆ ಕುಸಿದಿದೆ. ಅಂದರೆ ಶೇ 6.95ರಷ್ಟು ಇಳಿಕೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT