ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ತಗ್ಗು ಸೇತುವೆ; ಮಳೆಗೆ ಸಂಚಾರ ಬಂದ್‌

Published 9 ಜೂನ್ 2024, 6:41 IST
Last Updated 9 ಜೂನ್ 2024, 6:41 IST
ಅಕ್ಷರ ಗಾತ್ರ

ಹನೂರು: ಹನೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆಗಳು ಕೆಳಮಟ್ಟದಲ್ಲಿದ್ದು ಮಳೆಗಾಲ ಆರಂಭವಾದರೆ ಇಲ್ಲಿ ವಾಹನಗಳು ಗಂಟೆಗಟ್ಟಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಬೋರೆದೊಡ್ಡಿ ಸಮೀಪದ ಜಡೆತಡಿ ಹಳ್ಳ ತುಂಬಿ ಹರಿದ ಕಾರಣಕ್ಕೆ ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್‌ ಆಗಿದ್ದು, ಇತ್ತೀಚಿಗಿನ ಉದಾಹರಣೆ. ಈ ಭಾಗದಲ್ಲಿ ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತನೆ ಆಗುತ್ತಿರುತ್ತದೆ. 

ಉದ್ದನೂರು-ಬೆಳತ್ತೂರು ಮಾರ್ಗದಲ್ಲಿ, ಲೊಕ್ಕನಹಳ್ಳಿ ತಟ್ಟೆಹಳ್ಳ, ದಾಟುಕಡುವಿನ ಹಳ್ಳ, ಜಡಿತಡಿಹಳ್ಳ, ಮಸ್ಕತ್ತಿ ಹಳ್ಳ, ಟಿಬೆಟ್ ಕ್ಯಾಂಪ್ ನ ಜೆ. ವಿಲೇಜ್‌ನ ತೂತಳ್ಳ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉಯಿಲುನತ್ತದ ಉಡುತೊರೆ ಹಳ್ಳಗಳು ತುಂಬಿ ಹರಿಯುವುದರಿಂದ ಮಳೆಗಾಲದಲ್ಲಿ ಈ ಮಾರ್ಗದ ದಾರಿಗಳು ಸಂಪೂರ್ಣವಾಗಿ ಕಡಿತಗೊಳ್ಳುತ್ತವೆ.

ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು, ಅಂತರರಾಜ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಇದರ ಜತೆಗೆ ಶಾಲಾ ವಾಹನಗಳು, ದಿನನಿತ್ಯ ಕೂಲಿ ಕೆಲಸಗಳಿಗೆ ಜನರು ವಿವಿಧೆಡೆಯಿಂದ ಇಲ್ಲಿಗೆ ಆಗಮಿಸು ತ್ತಾರೆ. ಮಳೆಗಾಲದಲ್ಲಿ ತಳಮಟ್ಟದಲ್ಲಿರುವ ಸೇತುವೆಗಳ ಮೇಲೆ ನೀರು ಹರಿಯುವುದರಿಂದ ನೀರಿನ ಪ್ರಮಾಣ ಕಡಿಮೆಯಾಗುವವರೆಗೂ ಕಾದು ನಿಲ್ಲಬೇಕು.

‘ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಶಾಸಕರು, ಅಧಿಕಾರಿಗಳೇ ಈ ಮಾರ್ಗದಲ್ಲಿ ಸಾಕಷ್ಟು ಬಾರಿ ಓಡಾಡುತ್ತಾರೆ. ಇಲ್ಲಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಗೊತ್ತಿದ್ದರೂ ಸೇತುವೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಿಲ್ಲ. ಇನ್ನು ಎಷ್ಟು ವರ್ಷ ಜನರು ಈ ಬವಣೆ ಅನುಭವಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಪಿ.ಜಿ ಪಾಳ್ಯ ಗ್ರಾಮದ ಮಾದೇವ.

ಗಿಡಗಂಟಿ ತೆರವುಗೊಳಿಸಿ: ಸೇತುವೆ ಬಳಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರ ಜತೆಗೆ ಕಸಕಡ್ಡಿಗಳೆಲ್ಲ ಸೇತುವೆ ಕೆಳಭಾಗಕ್ಕೆ ಸಿಲುಕಿಕೊಳ್ಳುತ್ತವೆ. ಮಳೆ ಬಂದಾಗ ಮಳೆನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಸೇತುವೆ ಮೇಲೆ ಹರಿಯಲು ಆರಂಭಿಸುತ್ತದೆ. ಒಮ್ಮೊಮ್ಮೆ ನೀರಿನ ಪ್ರಮಾಣ ಜಾಸ್ತಿಯಾದಾಗ ಜಮೀನುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಹೀಗಾಗಿ ಮಳೆಗಾಲಕ್ಕೂ ಮುನ್ನ ಸೇತುವೆ ಬಳಿಯಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ. 

ಸಭೆಗಳಲ್ಲಿ ಈ ಬಗ್ಗೆ ದನಿ ಎತ್ತಿದರೆ ‘ಸೇತುವೆಗಳ ಮೇಲ್ದರ್ಜೆಗೆ  ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದು ಹೇಳುತ್ತಾರೆ. ಸೇತುವೆ ನಿರ್ಮಿಸುವುದಿದ್ದರೆ ಬೇಸಿಗೆಯಲ್ಲೇ ನಿರ್ಮಿಸಬಹುದಿತ್ತು. ಈಗ ಮಳೆಗಾಲ ಆರಂಭವಾಗಿದೆ. ಈಗ ಸೇತುವೆ ನಿರ್ಮಾಣ ಹೇಗೆ ಸಾಧ್ಯ? ಜನರು ಕೇಳಿದರೆ ನಿರ್ಮಿಸುತ್ತೇವೆ ಎಂದು ಸುಳ್ಳು ಹೇಳುತ್ತಾರೆ’ ಎಂದು ಗ್ರಾಮ ಪರಿವರ್ತನಾ ಅರಣ್ಯ ಸಮಿತಿ ಅಧ್ಯಕ್ಷ ಎನ್.ಕೃಷ್ಣ ಮೂರ್ತಿ ದೂರಿದರು. 

ತುರ್ತು ಪರಿಸ್ಥಿತಿಯಲ್ಲಿ ಸಂಚಾರ ಕಷ್ಟ

‘ತುರ್ತು ಸಂದರ್ಭದಲ್ಲಿ ಪಿ.ಜಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಟ್ಟರೆ ಹೆಚ್ಚಿನ ಚಿಕಿತ್ಸೆಗೆ ಹನೂರು, ಕಾಮಗೆರೆ ಅಥವಾ ಕೊಳ್ಳೇಗಾಲಕ್ಕೆ ತೆರಳಬೇಕು. ಮಳೆಗಾಲದಲ್ಲಿ ಸೇತುವೆಗಳು ತುಂಬಿ ಹರಿದರೆ ಗೇರುಮಾಳಂ, ಹಾಸನೂರು ಬಳಸಿಕೊಂಡು ಚಾಮರಾಜನಗರಕ್ಕೆ ಹೋಗಬೇಕು. ಇಂಥ ಪರಿಸ್ಥಿತಿಯಲ್ಲಿ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಸಾವು ಸಂಭವಿಸಬಹುದು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ’ ಎಂಬುದು ಸ್ಥಳೀಯರ ಅಳಲು. 

ಶೀಘ್ರ ಕಾಮಗಾರಿ: ಶಾಸಕ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಎಂ.ಆರ್.ಮಂಜುನಾಥ್‌, ‘ತಾಲ್ಲೂಕಿನಲ್ಲಿರುವ ತಳಮಟ್ಟ ಸೇತುವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಲೊಕ್ಕನಹಳ್ಳಿ ಮಾರ್ಗದಲ್ಲಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಚುನಾವಣೆ ಇದ್ದುದ್ದರಿಂದ ವಿಳಂಬವಾಗಿದೆ. ಅಧಿಕಾರಿಗಳ ಬಳಿ ಮಾಹಿತಿ ಪಡೆದು ತುರ್ತಾಗಿ ಕಾಮಗಾರಿ ಆರಂಭಿಸಲು ಸೂಚಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT