ಮಂಗಳವಾರ, ಮಾರ್ಚ್ 2, 2021
24 °C
ವಿಪತ್ತು ಎದುರಿಸಲು 50 ಸ್ವಯಂಸೇವಕರ ತಂಡ ರಾಜ್ಯದಲ್ಲೇ ಮೊದಲು– ಜಿಲ್ಲಾಧಿಕಾರಿ

ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯ ತಂಡಕ್ಕೆ ತರಬೇತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಿಪತ್ತು ಸಂಭವಿಸಿದಾಗ ಕ್ಷಿಪ್ರವಾಗಿ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ನೆಹರು ಯುವ ಕೇಂದ್ರ ಜಂಟಿಯಾಗಿ ರಚಿಸಿರುವ 50 ಮಂದಿ ಸ್ವಯಂ ಸೇವಕರನ್ನೊಳಗೊಂಡ ಜಿಲ್ಲಾ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯ ತಂಡಕ್ಕೆ ತರಬೇತಿ ನೀಡುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ತಾಲ್ಲೂಕಿಗೆ 10 ಜನರಂತೆ 50 ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ತಂಡವನ್ನು ರಚಿಸಿರುವುದು ರಾಜ್ಯದಲ್ಲಿ ಇದೇ ಮೊದಲು. ವಿಪತ್ತಿನ ಸಂದರ್ಭದಲ್ಲಿ ಈ ತಂಡವು ತಕ್ಷಣ ಕಾರ್ಯ ಪ್ರವೃತ್ತವಾಗಲಿದೆ. ಇದರಿಂದಾಗಿ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಪಡೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದರು. 

‘ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದ್ದರೂ, ಅದರಲ್ಲಿರುವ ಸದಸ್ಯರು ಪರಿಹಾರ ಕಾರ್ಯದಲ್ಲಿ ಪರಿಣತರಲ್ಲ. ಸ್ಥಳೀಯವಾಗಿಯೇ ಕೌಶಲ ಹೊಂದಿದ ಸ್ವಯಂ ಸೇವಕರ ತಂಡ ಇದ್ದರೆ, ತುರ್ತು ಸಂದರ್ಭದಲ್ಲಿ ಹಲವು ಜೀವಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಈ ಯೋಜನೆಯನ್ನು ರೂಪಿಸಿದೆ. ಇಂತಹ ಒಂದು ತಂಡ ಇದ್ದರೆ, ಜನರಲ್ಲೂ ಆತ್ಮ ವಿಶ್ವಾಸ ಮೂಡುತ್ತದೆ’ ಎಂದು ಅವರು ಹೇಳಿದರು. 

‘ಕಾಳ್ಗಿಚ್ಚು ಸಂಭವಿಸಿದಾಗ, ಭೂ ಕುಸಿತ, ಪ್ರವಾಹ, ಬರ, ಕಾಲ್ತುಳಿತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಈ ತಂಡವನ್ನು ಬಳಸಿಕೊಳ್ಳಬಹುದು. ಆರಂಭದಲ್ಲಿ ಅವರಿಗೆ ಮೂರು ದಿನಗಳ ತರಬೇತಿ ನೀಡಲಾಗುತ್ತದೆ. ನಂತರ ಎರಡು ದಿನಗಳ ಸುಧಾರಿತ ತರಬೇತಿ ನೀಡಲಾಗುವುದು. ಈಜು, ಡೈವಿಂಗ್, ಬೆಂಕಿ ನಂದಿಸುವಿಕೆ ಯಂತಹ ಅನೇಕ ತರಬೇತಿಯನ್ನು ಕೊಡಲಾಗುತ್ತದೆ. ಈ ಎಲ್ಲವನ್ನು ಆಸಕ್ತಿಯಿಂದ ಕಲಿಯಬೇಕು’ ಎಂದು ಹೇಳಿದರು. 

ಆತ್ಮವಿಶ್ವಾಸ ತುಂಬಿ: ‘‌ಎದುರಾಗಬಹುದಾದ ವಿಪತ್ತುಗಳನ್ನು ಎದುರಿಸಲು ತಂಡವು ಪೂರ್ವಯೋಜಿತ ಸಿದ್ಧತೆಗಳನ್ನು ಕೈಗೊಂಡು, ಜನರಲ್ಲಿ ‌ಆತ್ಮ ವಿಶ್ವಾಸ ಉಂಡು ಮಾಡಬೇಕು’ ಎಂದು ಜಿಲ್ಲಾಧಿಕಾರಿ ಅವರು ಸ್ವಯಂ ಸೇವಕರಿಗೆ ಕರೆ ನೀಡಿದರು. 

ಇಲ್ಲಿ ಪಡೆದ ತರಬೇತಿಯನ್ನು ಸ್ವಯಂ ಸೇವಕರು, ತಮ್ಮ ಊರಿನಲ್ಲಿ ಆಸಕ್ತರಿಗೆ ತಿಳಿಸಬೇಕು. ಕಾರ್ಯ ಚಟುವಟಿಕೆಗಳ ಮೂಲಕ ಗಮನಸೆಳೆದು ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯುವ ನಿಟ್ಟಿನಲ್ಲಿ ಮುಂದಾಗಬೇಕು’ ಎಂದು ಸಲಹೆ ನೀಡಿದರು. 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಡಾ. ಶಿವಕುಮಾರ್, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಡಾ.ಪರಮೇಶ್, ಡಿವೈಎಸ್‌ಪಿ ಅನ್ಸರ್ ಅಲಿ, ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯ ಅಧಿಕಾರಿ ರಾಜೇಶ್ ಕಾರಂತ್ ಇತರರು ಇದ್ದರು.

ಮಾಜಿ ಸೈನಿಕರ ನೆರವು ಪಡೆಯಲು ಸಲಹೆ

‘ಯುವಜನರೊಂದಿಗೆ ಆಸಕ್ತ ಮಾಜಿ ಸೈನಿಕರನ್ನೂ ಸೇರ್ಪಡೆ ಮಾಡಿಕೊಂಡರೆ ಕಾರ್ಯತಂಡ ಇನ್ನಷ್ಟು ಸಬಲವಾಗಲಿದೆ. ಮಾಜಿ ಸೈನಿಕರಿಗೆ ಅನೇಕ ವಿಪತ್ತುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಇರುತ್ತದೆ. ಮಾಜಿ ಸೈನಿಕರಿಗೆ ಸಮಾಜದ ಮೇಲೆ ವಿಶೇಷ ಕಾಳಜಿ ಇದೆ. ಹೀಗಾಗಿ ಯುವಜನರೊಂದಿಗೆ ಅನುಭವವು ಮಿಳಿತವಾಗುವುದರಿಂದ ಕ್ಷಿಪ್ರ ಕಾರ್ಯ ಪಡೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು