ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ತಂತ್ರ ಬಳಸಿ ಮುಷ್ಕರ ಹತ್ತಿಕ್ಕುವ ಯತ್ನ: ನೌಕರರ ಆರೋಪ‍

ಬೇಡಿಕೆ ಈಡೇರಿಸುವವರೆಗೆ ಹೋರಾಟ ಹೋರಾಟ ಮುಂದುವರಿಯಲಿದೆ– ಸ್ಪಷ್ಟನೆ
Last Updated 11 ಏಪ್ರಿಲ್ 2021, 13:36 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಚಾಲಕರು, ನಿರ್ವಾಹಕರನ್ನು ಬೆದರಿಸಿ ಬಸ್‌ಗಳನ್ನು ಓಡಿಸುತ್ತಿದ್ದಾರೆ. ವರ್ಗಾವಣೆ, ವಜಾ ಮುಂತಾದ ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ’ ಎಂದು ಸಾರಿಗೆ ನೌಕರರ ಒಕ್ಕೂಟದ ಜಿಲ್ಲಾ ಘಟಕ ಆರೋಪಿಸಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರತಿನಿಧಿ ಬಿ.ರಾಜೇಶ ಅವರು, ‘ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಬೇರೆ ಬೇರೆ ರೀತಿಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ನಮ್ಮ ಬೇಡಿಕೆ ಈಡೇರುವವೆಗೆ ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ, ಉದ್ಯೋಗ, ಸಾಹಿತ್ಯ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಕೆಎಸ್‌ಆರ್‌ಟಿಸಿ ನೌಕರರು ಕೂಡ ಕೊಡುಗೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೂ, ಸರ್ಕಾರ ನಮ್ಮ ದುಡಿಮೆಗೆ ತಕ್ಕ ವೇತನ ನೀಡದೆ ವಂಚಿಸುತ್ತಿದೆ’ ಎಂದು ಅವರು ದೂರಿದರು.

‘ನಮ್ಮ ಹೋರಾಟವನ್ನು ಸರ್ಕಾರ ತ‍ಪ್ಪು ಎಂದಿಲ್ಲ. ಹಾಗಿದ್ದರೂ, ಬೇಡಿಕೆ ಮಾತ್ರ ಈಡೇರಿಸುತ್ತಿಲ್ಲ. ಬೇರೆ ನಿಗಮ ಮಂಡಳಿಗಳಿಗೆ ಹೋಲಿಸಿದರೆ ನಮ್ಮ ನಿಗಮದಲ್ಲಿ ಸಂಪಾದನೆ ಹೆಚ್ಚು. ಶೇ 80ರಷ್ಟು ಆದಾಯ ಇಲ್ಲಿ ಸಂಗ್ರಹವಾಗುತ್ತದೆ. ಶೇ 20ರಷ್ಟನ್ನು ಸರ್ಕಾರ ಕೊಟ್ಟರೆ ಸಾಕು. ಆದರೆ ಅದನ್ನು ಮಾಡುತ್ತಿಲ್ಲ’ ಎಂದರು.

‘ಸಾರಿಗೆ ಸಚಿವರು ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಬೇಕಿತ್ತು. ನೌಕರರ ಅಹವಾಲುಗಳನ್ನು ಕೇಳಬೇಕಿತ್ತು. ಆದರೆ, ಅವರು ಅದಕ್ಕೆ ಆದ್ಯತೆ ನೀಡದೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ’ ಎಂದು ರಾಜೇಶ ಅವರು ದೂರಿದರು.

ಸಂಘಟನೆಗಳ ಬೆಂಬಲ

ಸಾರಿಗೆ ನೌಕರರು ನಡೆಸುತ್ತಿರುವ ಹೋರಾಟಕ್ಕೆ ರೈತ ಸಂಘ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಾಜವಾದಿ ಜನತಾಪಾರ್ಟಿಯ ಮುಖಂಡ ಜಿ.ಎಂ.ಗಾಡ್ಕರ್‌, ‘ಮುಷ್ಕರ ಹೂಡಿರುವ ನೌಕರರನ್ನು ಮಾತುಕತೆಗೆ ಕರೆಯದೆ, ಅವರ ವಿರುದ್ಧ ಎಸ್ಮಾ ಜಾರಿ, ಸೇವೆಯಿಂದ ವಜಾ, ವರ್ಗಾವಣೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದು ಮೂರ್ಖತನದ ಪರಾಮಾವಧಿ. ಕೆಎಸ್‌ಆರ್‌ಟಿಸಿ ನೌಕರರಿಗೆ ಅನ್ಯಾಯವಾಗುವುದಕ್ಕೆ ನಾವು ಬಿಡುವುದಿಲ್ಲ. ಸರ್ಕಾರ ತಕ್ಷಣ ನೌಕರರ ಸಭೆ ಕರೆದು ಚರ್ಚಿಸಬೇಕು. ಅವರ ಬೇಡಿಕೆ ಈಡೇರಿಸಬೇಕು’ ಎಂದರು.

ಪ್ರಜಾ ಪರಿವರ್ತನಾ ವೇದಿಕೆಯ ಸಿ.ಎಂ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ರೈತ, ಕಾರ್ಮಿಕ, ದಲಿತ ವಿರೋಧಿಗಳಾಗಿವೆ. ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಇವರು ಸ್ಪಂದಿಸುತ್ತಿಲ್ಲ. ಅದರ ಬದಲಿಗೆ ಮುಷ್ಕರವನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಸಾರಿಗೆ ನೌಕರರ ಹೋರಾಟಕ್ಕೆ ಜಿಲ್ಲೆಯ ರೈತ, ಕನ್ನಡಪರ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ’ ಎಂದರು.

ತಟ್ಟೆ ಚಳವಳಿಗೆ ಕರೆ

ರೈತ ಸಂಘದ ಮುಖಂಡ ಹೊನ್ನೂರು ಬಸವಣ್ಣ ಮಾತನಾಡಿ, ‘ಸಾರಿಗೆ ಇಲಾಖೆಯಲ್ಲಿ 40 ವರ್ಷಗಳಿಂದ ಒಬ್ಬ ನಾಯಕನ ಕೊರತೆವಿತ್ತು. ಅ ಸ್ಥಾನವನ್ನು ರಾಜ್ಯ ರೈತದ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತುಂಬಿದ್ದಾರೆ. ಅದಕ್ಕಾಗಿ ಸರ್ಕಾರಕ್ಕೆ ಉರಿ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಸಾರಿಗೆ ನೌಕರರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ. ನೌಕರರ ಹೋರಾಟಕ್ಕೆ ರೈತ ಸಂಘದ ಸಂಪೂರ್ಣಬೆಂಬಲ ಇದೆ’ ಎಂದರು.

ನೌಕರರು ಕುಟುಂಬ ಸಮೇತರಾಗಿ ಸೋಮವಾರ ತಟ್ಟೆ ಚಳವಳಿ ನಡೆಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಅವರು ಕರೆ ನೀಡಿದ್ದಾರೆ. ಅದರಂತೆ ಸೋಮವಾರ ಜಿಲ್ಲಾಡಳಿತ ಭವನದ ಮುಂದೆ ಚಳವಳಿ ನಡೆಸಲಾಗುವುದು ಎಂದು ಅವರು ಹೇಳಿದರು.

ರೈತ ಮುಖಂಡ ಮಹದೇವಸ್ವಾಮಿ, ಚಾಲಕ ಮತ್ತು ಕಂಡಕ್ಟರ್ ನಾಗೇಂದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT