ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 10 ತಿಂಗಳಲ್ಲಿ 29 ಬಾಲಕಾರ್ಮಿಕರು ಪತ್ತೆ

ಬಡತನದ ಕಾರಣಕ್ಕೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪೋಷಕರು
Published 28 ಫೆಬ್ರುವರಿ 2024, 5:57 IST
Last Updated 28 ಫೆಬ್ರುವರಿ 2024, 5:57 IST
ಅಕ್ಷರ ಗಾತ್ರ

ಚಾಮರಾಜನಗರ: ಬಡತನದ ಕಾರಣಕ್ಕೆ ಆ ಬಾಲಕನಿಗೆ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಶಿಕ್ಷಣ ಮೊಟಕುಗೊಳಿಸಿ ನಗರದ ಗ್ಯಾರೇಜ್‌ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ಕಾರ್ಮಿಕ ಇಲಾಖೆಯ ಮಧ್ಯಪ್ರವೇಶ‌ದಿಂದ ಬಾಲಕ ಮತ್ತೆ ಶಾಲೆಯ ಮುಖ ನೋಡುವಂತಾಗಿದೆ. ಈಗ ವಸತಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. 

ಹನೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯದ್ದೂ ಇದೇ ಕಥೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಮಿಕ ಇಲಾಖೆ ಅಧಿಕಾರಿಗಳು ಇಟ್ಟಿಗೆ ಕಾರ್ಖಾನೆಗೆ ದಾಳಿ ಮಾಡಿ, ಬಾಲಕಿಯನ್ನು ಕೆಲಸದಿಂದ ಬಿಡಿಸಿ ಪುನರ್ವಸತಿ ಕಲ್ಪಿಸಿದ್ದಾರೆ. 

10 ತಿಂಗಳ ಅವಧಿಯಲ್ಲಿ ಕಾರ್ಮಿಕ ಇಲಾಖೆಯು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿದ್ದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿರುವ ಎರಡು ಉದಾಹರಣೆಗಳಿವು. 

2023ರ ಏಪ್ರಿಲ್‌ 1ರಿಂದ 2024ರ ಜ.31ರವರೆಗೆ ಜಿಲ್ಲೆಯಲ್ಲಿ 29 ಬಾಲ ಕಾರ್ಮಿಕರನ್ನು ಗುರುತಿಸಲಾಗಿದ್ದು, ಈ ಪೈಕಿ 18 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.   

‘ಬಾಲ ಕಾರ್ಮಿಕರು ಪತ್ತೆಯಾದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆಯಾ ಇಲಾಖೆಗಳಿಂದ ಇರುವ ಸೌಲಭ್ಯಗಳನ್ನು ಅವರಿಗೆ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಹನೂರು ತಾಲ್ಲೂಕಿನ ಪ್ರಕರಣದಲ್ಲಿ ಬಾಲಕಿಯ ಕುಟುಂಬಕ್ಕೆ ಮನೆ ಇರಲಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮನೆಯನ್ನೂ ಮಂಜೂರು ಮಾಡಲಾಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಸವಿತ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಗದ ಮುಕ್ತಿ: ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಲವು ಸ್ವಯಂ ಸೇವಾ ಸಂಸ್ಥೆಗಳು ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಸಾಧ್ಯವಾಗಿಲ್ಲ. 

‘ಬಡತನದ ಕಾರಣಕ್ಕೆ ಪೋಷಕರು ಮಕ್ಕಳನ್ನು ಕೆಲಸಕ್ಕೆ ಸೇರಿಸುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಈ ಮಕ್ಕಳಿಗೆ ತಂದೆ ಅಥವಾ ತಾಯಿ ಇರುವುದಿಲ್ಲ. ಒಬ್ಬರೇ ಪೋಷಕರು ನೋಡಿಕೊಳ್ಳಬೇಕಾಗುತ್ತದೆ. ಜೀವನ ಸಾಗಿಸುವುದಕ್ಕಾಗಿ ದುಡಿಯುವುದು ಅನಿವಾರ್ಯ ಎಂಬ ಸ್ಥಿತಿ ಇರುತ್ತದೆ. ನಾವು ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ಸಿಕ್ಕಿದರೆ, ಅಥವಾ ನಮಗೆ ಯಾರಾದರೂ ಮಾಹಿತಿ ನೀಡಿದರೆ, ಮಕ್ಕಳನ್ನು ಉದ್ಯೋಗದಿಂದ ಬಿಡಿಸಿ ಶಾಲೆಗೆ ಸೇರಿಸುತ್ತೇವೆ.  ಕುಟುಂಬಕ್ಕೆ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದು ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕ ಮಹೇಶ್‌ ಹೇಳಿದರು.  

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಲಾಭ: ಚಾಮರಾಜನಗರ ಮತ್ತು ಹನೂರು ತಾಲ್ಲೂಕಿನಲ್ಲಿ ಪತ್ತೆಯಾಗಿದ್ದ ಬಾಲ ಕಾರ್ಮಿಕರಿಬ್ಬರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದರು. ಹೀಗಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ಲಾಭವೂ ಅವರಿಗೆ ಸಿಕ್ಕಿದೆ. ಈ ಯೋಜನೆ ಅಡಿಯಲ್ಲಿ ಕಾರ್ಮಿಕ ಇಲಾಖೆಯು ಇಬ್ಬರೂ ಮಕ್ಕಳ ಕುಟುಂಬಕ್ಕೆ ಅಗತ್ಯವಿರುವ ಸಾಮಗ್ರಿಗಳು, ದಿನಸಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಿದೆ. 

‘ಪರಿಶಿಷ್ಟ ಸಮುದಾಯವರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಉಳಿದವರಿಗೆ ಈ ಸೌಲಭ್ಯಗಳು ಸಿಗುವುದಿಲ್ಲ. ಆದರೆ, ಮಕ್ಕಳ ಶಿಕ್ಷಣದ ವ್ಯವಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ಸವಿತ ಮಾಹಿತಿ ನೀಡಿದರು. 

ಎಷ್ಟು ಪ್ರಕರಣಗಳು?

2022–23ನೇ ಸಾಲಿನಲ್ಲಿ 242 ಕಡೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಾಲ್ವರು ಬಾಲ್ಯಾವಸ್ಥೆ ಕಾರ್ಮಿಕರು 18 ಮಂದಿ ಕಿಶೋರಾವಸ್ಥೆ ಕಾರ್ಮಿಕರು ಸೇರಿದಂತೆ 22 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. 15 ಪ್ರಕರಣಗಳಲ್ಲಿ ದೂರು ದಾಖಲಾಗಿದೆ.  2023ರ ಏಪ್ರಿಲ್‌ 1ರಿಂದ 2024ರ ಜನವರಿ 31ರವರೆಗೆ 10 ತಿಂಗಳ ಅವಧಿಯಲ್ಲಿ 523 ಕಡೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಮೂವರು ಬಾಲ್ಯಾವಸ್ಥೆ ಕಾರ್ಮಿಕರು 26 ಕಿಶೋರಾವಸ್ಥೆ ಕಾರ್ಮಿಕರು ಸೇರಿದಂತೆ 29 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. 17 ಪ‍್ರಕರಣಗಳು ದಾಖಲಾಗಿವೆ.

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ ಕಾರ್ಮಿಕರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಗಮನಕ್ಕೆ ತರಬೇಕು.
–ಎಂ.ಸವಿತ, ಜಿಲ್ಲಾ ಕಾರ್ಮಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT