ಮಂಗಳವಾರ, ಮಾರ್ಚ್ 21, 2023
23 °C
ಚಾಮರಾಜನಗರ, ಮಂಡ್ಯ, ಮೈಸೂರುಗಳಲ್ಲಿ ಕಂಪನಿ ಶಾಖೆ ತೆರೆದು ವ್ಯವಹಾರ

ಸಾಲ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಕಮಿಷನ್‌ ಪಡೆದು ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಕೊಳ್ಳೇಗಾಲ: ಸಾಲ ಕೊಡಿಸುವುದಾಗಿ ನಂಬಿಸಿ ಹಲವಾರು ಜನರಿಂದ ಕಮಿಷನ್‌ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ವರದಿಯಾಗಿದೆ. 

ಎಸ್ಎಂಎಸ್ ಅಸೋಸಿಯೇಟ್ಸ್‌ ಎಂಬ ಕಂಪನಿಯ ಹೆಸರಿನ ಅಡಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಕೊಳ್ಳೇಗಾಲದ ಶಶಿಕಲಾ ಹಾಗೂ ತಮಿಳುನಾಡಿನ ಮೋಹನ್‌ ಸುಂದರಂ ಅವರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಕೊಳ್ಳೇಗಾಲ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಒಂಬತ್ತು ಮಂದಿ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 

ಚಾಮರಾಜನಗರದಲ್ಲಿ ವೈದ್ಯರೊಬ್ಬರು ತಮಗೆ ₹30 ಲಕ್ಷ ವಂಚಿಸಿದ್ದಾರೆ ಎಂದು ಪಟ್ಟಣ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಎಫ್‌ಐಆರ್‌ ಇನ್ನೂ ದಾಖಲಾಗಿಲ್ಲ.  

‘ದೂರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನೀಡಿಲ್ಲ. ದಾಖಲೆ ಒದಗಿಸುವಂತೆ ಕೇಳಿದ್ದೇವೆ. ಸದ್ಯಕ್ಕೆ ಠಾಣಾ ದೂರು ದಾಖಲಿಸಿಕೊಳ್ಳಲಾಗಿದೆ’ ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಮತ್ತೊಬ್ಬ ರೈತರಿಗೆ ₹10 ಲಕ್ಷ ವಂಚಿಸಲಾಗಿದೆ ಎಂದು ಹೇಳಲಾಗಿದೆ.

ಇಬ್ಬರೂ ಆರೋಪಿಗಳು ಸಾಲ ಕೊಡಿಸುವುದಾಗಿ ನಂಬಿಸಿ, ಶೇ 3ರಷ್ಟು ಕಮಿಷನ್‌ ಪಡೆದಿದ್ದಾರೆ ಎನ್ನಲಾಗಿದೆ.‌ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹಲವು ಕಡೆಗಳಲ್ಲಿ ವ್ಯವಹಾರ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. 

ಕೊಳ್ಳೇಗಾಲದ ಪ್ರಕರಣ: ಕೊಳ್ಳೇಗಾಲದಲ್ಲಿ ಎಸ್ಎಂಎಸ್ ಅಸೋಸಿಯೇಟ್ಸ್‌ ಎಂಬ ಸಂಸ್ಥೆ ನಡೆಸುತ್ತಿದ್ದ ಆರೋಪಿಗಳು, ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಕಮಿಷನ್‌ ಪಡೆಯುತ್ತಿದ್ದರು. 

14 ಕಡೆಗಳಲ್ಲಿ ಕಂಪನಿಗಳನ್ನು ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದ ಶಶಿಕಲಾ ಅವರು, ಕೈಸಾಲ, ಮನೆ ಸಾಲ, ಕಾರು ಸಾಲ, ಬೈಕ್‌ ಸಾಲ ನಿವೇಶನ ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿ, ಪರಿಚಿತರಿಂದ ಸಾಲದ ಮೊತ್ತದ ಶೇ 3ರಷ್ಟು ಕಮಿಷನ್‌ ಪಡೆದಿದ್ದಾರೆ. 

ಕಮಿಷನ್‌ ನೀಡಿದರೆ ಎಷ್ಟು ಬೇಕಾದಷ್ಟು ಸಾಲ ಕೊಡಿಸುವುದಾಗಿ ಹೇಳಿದ್ದ ಶಶಿಕಲಾ ಮಾತನ್ನು ನಂಬಿದ್ದ ಚಿಕ್ಕಲಿಂಗಯ್ಯ, ಶಿವರಾಜು, ಶಂಕುತಲಾ, ಕೋಮಲಾಕ್ಷಿ , ಮಲ್ಲಿಕಾರ್ಜುನ, ರಾಚಯ್ಯ, ಮಹೇಶ್, ನಾಗವೇಣಿ, ನಟರಾಜು ಅವರು ಒಟ್ಟು ₹7 ಲಕ್ಷಕ್ಕೂ ಹೆಚ್ಚು ಹಣವನ್ನು ನೀಡಿದ್ದಾರೆ.

‘ಎಸ್ಎಂಎಸ್ ಅಸೋಸಿಯೇಟ್ಸ್‌ನಲ್ಲಿ ಶಶಿಕಲಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೋಹನ್ ಸುಂದರಂ ಅವರು ಬಿಸಿನೆಸ್ ಡೆವಲಪರ್‌ ಮ್ಯಾನೇಜರ್ ಆಗಿ  ಕೆಲಸ ಮಾಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಬಯಲಾದ ಮುಖವಾಡ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಸರಗೂರು ಗ್ರಾಮದ ರತ್ನಮ್ಮ ಎಂಬುವವರು ನಿವೇಶನ ಖರೀದಿಸಲು ಸಾಲ ಪಡೆಯುವುದಕ್ಕಾಗಿ ಕೊಳ್ಳೇಗಾಲದ ಎಸ್‌ಎಂಎಸ್‌ ಅಸೋಸಿಯೇಟ್ಸ್‌ ಅನ್ನು ಸಂಪರ್ಕಿಸಿದ್ದರು. ₹1 ಲಕ್ಷ ಹಣವನ್ನೂ ಕೊಟ್ಟಿದ್ದರು. 

‘ಶಶಿಕಲಾ ಅವರು ಸಾಲ ಕೊಡಿಸಲು ಮೂರು ತಿಂಗಳು ಸಮಯಾವಕಾಶ ಕೇಳಿದ್ದರು. ಮೂರು ತಿಂಗಳ ಬಳಿಕ ರತ್ನಮ್ಮ ವಿಚಾರಿಸಿದಾಗ, ಇನ್ನೂ ಆರು ತಿಂಗಳು ಕಾಯಬೇಕಾಗುತ್ತದೆ ಎಂದು ಹೇಳಿದ್ದರು. ಇದರಿಂದ ಬೇಸತ್ತ ರತ್ನಮ್ಮ ಹಣವನ್ನು ವಾಪಸ್‌ ಕೇಳಿದ್ದಾರೆ. ಅದಕ್ಕೆ, ಹಣ ಕೊಡಲು ಸಾಧ್ಯವಿಲ್ಲ ಎಂದು ಶಶಿಕಲಾ ಉತ್ತರಿಸಿದ್ದಾರೆ. ಆ ಬಳಿಕ ರತ್ನಮ್ಮ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಈ ವಿಚಾರವನ್ನು ತಿಳಿದು ಆರೋಪಿಗಳ ಮಾತು ನಂಬಿ ಹಣಕೊಟ್ಟ ಒಂಬತ್ತು ಮಂದಿ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸಂಬಂಧ ಪಟ್ಟ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ತಾಜುದ್ದೀನ್‌ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು