ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎರಡು ದಿನ ವಾರಾಂತ್ಯ ಕರ್ಫ್ಯೂ

ಬಸ್‌, ರೈಲು ಸಂಚಾರ, ತುರ್ತು ಪ್ರಯಾಣಕ್ಕೆ ಅವಕಾಶ, ಅಗತ್ಯ ವಸ್ತುಗಳು ಲಭ್ಯ
Last Updated 25 ಜೂನ್ 2021, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ವಾರದ ಐದು ದಿನಗಳ ಕಾಲ ಕೋವಿಡ್‌ ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಮಾಡಿದ್ದ ಸರ್ಕಾರ, ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ.

ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಏಳು ಗಂಟೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೆ ಬಂದಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಕೋವಿಡ್‌ ಕರ್ಫ್ಯೂಗಾಗಿ ಜಿಲ್ಲಾಡಳಿತ ಪ್ರತ್ಯೇಕ ನಿಯಮಗಳನ್ನು ಪ್ರಕಟಿಸಿಲ್ಲ. ಆದರೆ, ರಾಜ್ಯ ಸರ್ಕಾರ ಈಗಾಗಲೇ ರೂಪಿಸಿರುವ ನಿಯಮಗಳಂತೆ ಎರಡೂ ದಿನಗಳ ಕಾಲ ತುರ್ತು ಸೇವೆಗಳು ಲಭ್ಯವಿರಲಿವೆ. ಔಷಧಿ ಅಂಗಡಿಗಳು ಇಡೀ ದಿನ ತೆರೆದಿರಲಿವೆ.

ಉಳಿದಂತೆ ಹಣ್ಣು, ತರಕಾರಿ, ದಿನಸಿ, ಮಾಂಸ, ಹಾಲಿನ ಕೇಂದ್ರಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಬಹುದಾಗಿದೆ.ಹೋಟೆಲ್‌ಗಳು, ಮದ್ಯದ ಅಂಗಡಿಗಳು ಕೂಡ ಮಧ್ಯಾಹ್ನ 2 ಗಂಟೆಗೆ ತೆರೆಯಬಹುದಾದರೂ ಪಾರ್ಸೆಲ್‌ಗೆ ಮಾತ್ರ ಅವಕಾಶ.

ಜನರು ಅನಗತ್ಯವಾಗಿ ಸಂಚರಿಸುವಂತಿಲ್ಲ. ಆದರೆ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ, ಕೋವಿಡ್‌ ಲಸಿಕೆ ಪಡೆಯುವುದಕ್ಕಾಗಿ ಸಂಚರಿಸಬಹುದು. ಕರ್ತವ್ಯ ನಿರತ ಸರ್ಕಾರಿ ಸಿಬ್ಬಂದಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಗುರುತಿನ ಚೀಟಿ ತೋರಿಸಿ ಓಡಾಡಬಹುದು.

ಬಸ್‌, ರೈಲು ಸಂಚಾರ: ಬಸ್‌ ಹಾಗೂ ರೈಲುಗಳ ಸಂಚಾರ ಶನಿವಾರ ಮತ್ತು ಭಾನುವಾರ ಇರಲಿದೆ.

‘ಶನಿವಾರ ಮತ್ತು ಭಾನುವಾರವೂ ಬಸ್‌ ಸಂಚಾರ ಇರಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಹಾಕಲಾಗುವುದು. ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೆಚ್ಚು ಪ್ರಯಾಣಿಕರು ಇರುವ ಸಾಧ್ಯತೆ ಕಡಿಮೆ. ಹಾಗಾಗಿ, ಬಸ್‌ಗಳ ಸಂಖ್ಯೆ ಕಡಿಮೆ ಇರಬಹುದು’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ಗಳ ಓಡಾಟ ಹೆಚ್ಚಳ: ಈ ಮಧ್ಯೆ, ಸೋಮವಾರದಿಂದ (ಜೂನ್‌ 21) ಅನ್‌ಲಾಕ್‌ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ತಾಲ್ಲೂಕು, ಹೋಬಳಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಮೈಸೂರು ಬಿಟ್ಟು ಇತರ ಜಿಲ್ಲೆಗಳ ನಡುವೆಯೂ ಸಾರಿಗೆ ಬಸ್‌ಗಳು ಓಡಾಡುತ್ತಿದೆ.

‘ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈಗ ಪ್ರತಿ ದಿನ 85ರಿಂದ 90 ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಗಳಿಗೂ ಬಸ್‌ ಓಡಿಸುತ್ತಿದ್ದೇವೆ’ ಎಂದು ಶ್ರೀನಿವಾಸ ಅವರು ಮಾಹಿತಿ ನೀಡಿದರು.

ರೈಲು ಸಂಚಾರ ಪುನರಾರಂಭ

ಈ ಮಧ್ಯೆ, ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಶುಕ್ರವಾರದಿಂದ ಪುನರಾರಂಭವಾಗಿದೆ.

ಮೈಸೂರು–ಚಾಮರಾಜನಗರ ಪ್ಯಾಸೆಂಜರ್‌ ರೈಲು ಹಾಗೂ ಚಾಮರಾಜನಗರ–ತಿರುಪತಿ ರೈಲುಗಳು ಸಂಚಾರ ಆರಂಭಿಸಿವೆ.

ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT