ಮಂಗಳವಾರ, ಮೇ 26, 2020
27 °C
ಹೆಳವರ ಹುಂಡಿಯಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ್ದ ಮಳವಳ್ಳಿಯ ಸೋಂಕಿತ ವ್ಯಕ್ತಿ

ಚಾಮರಾಜನಗರ: ಸೋಮವಾರಪೇಟೆಯ ಇಬ್ಬರ ಕ್ವಾರಂಟೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಳವರ ಹುಂಡಿಯಲ್ಲಿ ನಡೆದಿದ್ದ ಮದುವೆಯಲ್ಲಿ ಭಾಗವಹಿಸಿದ್ದ ನಗರದ ಸೋಮವಾರಪೇಟೆಯ ಇಬ್ಬರನ್ನು ಜಿಲ್ಲಾ ಆರೋಗ್ಯ ಇಲಾಖೆಯು ಶನಿವಾರ ಕ್ವಾರಂಟೈನ್‌ನಲ್ಲಿರಿಸಿದೆ. 

ಮಳವಳ್ಳಿಯ ಸೋಂಕಿತ ವ್ಯಕ್ತಿ ಆ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಈ ಹಿಂದೆ ಹೇಳಲಾಗಿತ್ತು. ‘ಅವರು ಮದುವೆಯಲ್ಲಿ ಭಾಗವಹಿಸಿಲ್ಲ, ಬದಲಿಗೆ ಮದುವೆ ನಡೆದ ಮನೆಯ ಪಕ್ಕದ ಮನೆಯಲ್ಲಿದ್ದ ತಮ್ಮ ಅಜ್ಜಿಯನ್ನು ನೋಡಲು ಅವರು ಬಂದಿದ್ದರು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶುಕ್ರವಾರ ಸ್ಪಷ್ಟನೆ ನೀಡಿದ್ದರು. 

ಆದರೆ, ಸೋಂಕಿತ ವ್ಯಕ್ತಿ ಮದುವೆಯಲ್ಲಿ ಊಟ ಮಾಡಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಶನಿವಾರ ಲಭ್ಯವಾಗಿದ್ದು, ಅವರ ಜೊತೆಗೆ ಸೋಮವಾರಪೇಟೆಯ ಇಬ್ಬರು ಊಟಕ್ಕೆ ಕುಳಿತಿದ್ದಾರೆ ಎಂದು ಗೊತ್ತಾಗಿದೆ. ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಮವಾರಪೇಟೆಗೆ ತೆರಳಿ, ಇಬ್ಬರನ್ನು ಆಂಬುಲೆನ್ಸ್‌ ಮೂಲಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವ ತಾಲ್ಲೂಕಿನ ಹಾಸ್ಟೆಲ್‌ ಒಂದಕ್ಕೆ ಕರೆದೊಯ್ದಿದ್ದಾರೆ. 

ಆಗಿದ್ದೇನು?: ಇದೇ 20ರಂದು ಸೋಮವಾರಪೇಟೆ ಯುವತಿಯ ಮದುವೆಯು ಹೆಳವರಹುಂಡಿಯ ಯುವಕನೊಂದಿಗೆ, ವರ‌ನ ಮನೆಯಲ್ಲಿ ನಡೆದಿತ್ತು. ಯುವತಿ ಕುಟುಂಬದವರು ಹಾಗೂ ಹತ್ತಿರದ ಸಂಬಂಧಿಗಳು ಸೇರಿದಂತೆ 30 ಮಂದಿ ಮದುವೆಯಲ್ಲಿ ಭಾಗವಹಿಸಿದ್ದರು. 

ಮಳವಳ್ಳಿಯ ಸೋಂಕಿತ ವ್ಯಕ್ತಿ ಆ ಮದುವೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಯು ಜಿಲ್ಲೆಯ ಜನರಲ್ಲಿ ಆತಂಕ ಉಂಟು ಮಾಡಿತ್ತು. ಶುಕ್ರವಾರ ಸೋಮವಾರಪೇಟೆ ಹಾಗೂ ಹೆಳವರಹುಂಡಿಗೆ ಆರೋಗ್ಯ ಅಧಿಕಾರಿಗಳು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದರು. ಸೋಂಕಿತ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದ್ದರು. ಆ ಸಂದರ್ಭದಲ್ಲಿ ತಾವು ಮದುವೆಯಲ್ಲಿ ಭಾಗವಹಿಸಿಲ್ಲ, ಪಕ್ಕದ ಮನೆಗೆ ಭೇಟಿ ನೀಡಿದ್ದೆ ಎಂದು ಸೋಂಕಿತ ವ್ಯಕ್ತಿ ಹೇಳಿದ್ದರು. ಇದನ್ನೇ ನಂಬಿದ್ದ ಜಿಲ್ಲಾಡಳಿತ ‘ಅವರು ಮದುವೆಯಲ್ಲಿ ಭಾಗವಹಿಸಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು. 

ಮದುವೆ ಮನೆಯಲ್ಲಿ ಊಟ: ಆದರೆ, ಸೋಮವಾರಪೇಟೆಯ ಕೆಲವು ನಿವಾಸಿಗಳು ಶನಿವಾರ ಮಾಧ್ಯಮಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಸೋಂಕಿತ ವ್ಯಕ್ತಿಯು ಮದುವೆ ಮನೆಯಲ್ಲಿ ಊಟ ಮಾಡಿರುವ ಚಿತ್ರವನ್ನು ತೋರಿಸಿದ್ದರು. ಬೀದಿಯ ಜನರಲ್ಲಿ ಆತಂಕ ಉಂಟಾಗಿದ್ದು, ಏನಾದರೂ ಕ್ರಮ ಕೈಗೊಳ್ಳಿ ಎಂದು ಅವರು ಮನವಿ ಮಾಡಿದ್ದರು. 

ಸೋಂಕಿತ ಕುಳಿತಿದ್ದ ಟೇಬಲ್‌ನಲ್ಲೇ ಸೋಮವಾರಪೇಟೆಯರು ಕುಳಿತಿರುವುದು ಚಿತ್ರದಲ್ಲಿ ಸ್ಪಷ್ಟವಾಗಿತ್ತು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ, ‘ನಾವು ಶುಕ್ರವಾರ ಸೋಂಕಿತ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದ್ದೆವು. ಮದುವೆಯಲ್ಲಿ ಭಾಗವಹಿಸಿಲ್ಲ ಎಂದು ಅವರು ಹೇಳಿದ್ದರು. ಆದರೆ, ‌ಈಗ ಅವರು ಊಟ ಮಾಡಿದ್ದಾರೆ ಎಂದು ಗೊತ್ತಾಗಿದೆ. ಹಾಗಾಗಿ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದೇವೆ. ಗಂಟಲ ಮಾದರಿಯ ಪರೀಕ್ಷೆಯನ್ನೂ ನಡೆಸುತ್ತೇವೆ’ ಎಂದರು. 

ಆತಂಕ ಬೇಡ: ‘ಸೋಮವಾರಪೇಟೆಯ ಇಬ್ಬರು ಕೋವಿಡ್‌–19 ರೋಗಿಯೊಂದಿಗೆ ನೇರ ಸಂಪರ್ಕಕ್ಕೆ ಬಂದಿಲ್ಲ. ಅವರ ಮಧ್ಯೆ ಇನ್ನಿಬ್ಬರು ಕುಳಿತಿದ್ದಾರೆ. ಹಾಗಾಗಿ, ಇವರು ದ್ವಿತೀಯ ಸಂಪರ್ಕ ಆಗುತ್ತಾರೆ. ಸೋಂಕು ಹರಡುವ ಸಾಧ್ಯತೆ ಕ್ಷೀಣ. ಆತಂಕ ಪಡಬೇಕಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

ಸುಳ್ಳು ಮಾಹಿತಿ ನೀಡಿದರೇ ?
ಸೋಮವಾರಪೇಟೆಯವರು ಕೂಡ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ ಊರಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಳವಳ್ಳಿಯ ವ್ಯಕ್ತಿ ವಧು– ವರನನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ ಎಂದು ಸೋಮವಾರಪೇಟೆಯ ಕೆಲವರು ಹೇಳುತ್ತಿದ್ದಾರೆ. 

ಈ ಮಧ್ಯೆ, ಮದುವೆಯಲ್ಲಿ ಭಾಗವಹಿಸಿಲ್ಲ ಎಂದು ಸೋಂಕಿತ ವ್ಯಕ್ತಿ ಜಿಲ್ಲೆಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದರೇ ಎಂಬ ಅನುಮಾನ ಉಂಟಾಗಿದೆ.

ಅಧಿಕಾರಿಗಳು ವಿಚಾರಣೆ ಮಾಡಿದ ಸಂದರ್ಭದಲ್ಲಿ ಊಟ ಮಾಡಿದ ವಿಷಯವನ್ನು ಅವರು ಹೇಳಿಲ್ಲ. ಈಗ ಊಟ ಮಾಡಿರುವ ವಿಚಾರ ಬಹಿರಂಗವಾಗಿರುವುದರಿಂದ, ಅವರು ವಧು–ವರನನ್ನು ಭೇಟಿ ಮಾಡಿದ್ದಾರೆಯೇ ಅಥವಾ ಮದುವೆ ಮನೆಯಲ್ಲಿ ಇನ್ನಿತರರ ಜೊತೆ ಬೆರೆತಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.

‘ಕೇಳುವಾಗ ವಾಸ್ತವಾಂಶಗಳನ್ನು ತಿಳಿಸಿದೇ ಇದ್ದರೆ ನಮಗೆ ಗೊತ್ತಾಗುವುದು ಹೇಗೆ? ವಧು–ವರನನ್ನು ಭೇಟಿಯಾಗಿಲ್ಲ ಎಂದು ಅವರು ಹೇಳುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

99 ಜನರ ವರದಿ ನೆಗೆಟಿವ್
ಈ ಹಿಂದೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಗಂಟಲಿನ ದ್ರವ ಮಾದರಿಗಳ ಪೈಕಿ 99 ಜನರ ವರದಿ ನೆಗೆಟಿವ್ ಬಂದಿದೆ.

‘ಶನಿವಾರ 102 ಜನರ ಗಂಟಲಿನ ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಟ್ಟು 110 ಜನರ ವರದಿ ಬರಬೇಕಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು