ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆರಡು ಕೇರ್ ಕೇಂದ್ರ; 1,500 ಹಾಸಿಗೆ ವ್ಯವಸ್ಥೆ

ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿಕೆ
Last Updated 1 ಆಗಸ್ಟ್ 2020, 15:44 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಈಗ ಕೋವಿಡ್‌–19 ಹರಡುತ್ತಿರುವ ಪ್ರಮಾಣವನ್ನು ಗಮನಿಸಿದರೆ ಇನ್ನು 30 ದಿನಗಳಲ್ಲಿ 1,800 ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಗುಣಮುಖರಾಗುತ್ತಿರುವ ಪ್ರಮಾಣವನ್ನು ಲೆಕ್ಕ ಹಾಕಿದರೆ, ಆ ಸಂದರ್ಭದಲ್ಲಿ 700–800 ಸಕ್ರಿಯ ಪ್ರಕರಣಗಳಿರಬಹುದು. ಹಾಗಾಗಿ, ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತ ಹೆಚ್ಚುವರಿ ಕೋವಿಡ್ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಫೇಸ್‌ಬುಕ್‌ ಲೈವ್‌ನಲ್ಲಿ ಶನಿವಾರ ಮಾತನಾಡಿದ ಅವರು, ‘ಸದ್ಯ 650 ಹಾಸಿಗೆ ಸಾಮರ್ಥ್ಯದ ವ್ಯವಸ್ಥೆ ನಮ್ಮಲ್ಲಿ ಇದೆ. ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳಲ್ಲೂ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇಲ್ಲಿ 400–450 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲು ಅವಕಾಶ ಇದೆ.ಸಂತೇಮರಹಳ್ಳಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ಸಿದ್ಧವಾಗುತ್ತಿದೆ. ಒಟ್ಟಾರೆಯಾಗಿ 1,500 ಹಾಸಿಗೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸೌಲಭ್ಯಗಳ ಕೊರತೆಯಿಲ್ಲ. ವೈದ್ಯರು, ನರ್ಸ್‌ಗಳು ಹಾಗೂ ಹೌಸ್‌ಕೀಪಿಂಗ್ ಸೇರಿದಂತೆ ಎಲ್ಲಾ ಸಿಬ್ಬಂದಿ ಲಭ್ಯರಿದ್ದಾರೆ. ಜಿಲ್ಲೆಯ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಏಳು ದಿನಕ್ಕೆ ದುಪ್ಪಟ್ಟು ಆಗುತ್ತಿದ್ದವು. ಈಗ ಅದು 12 ದಿನಕ್ಕೆ ಇಳಿದಿದೆ. ಗುಣಮುಖರಾಗುತ್ತಿರುವರ ಸಂಖ್ಯೆ ಶೇ 62ರಷ್ಟಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 12ರಷ್ಟಿದ್ದರೆ, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ 1ರಷ್ಟು ಮಾತ್ರ ಇದೆ. ಸಾವಿನ ಪ್ರಮಾಣವೂ ಶೇ 1ರಷ್ಟಿದೆ’ ಎಂದು ಮಾಹಿತಿ ನೀಡಿದರು.

‘ಏಳು ತಿಂಗಳಿನ ಮಗುವಿನಿಂದ ಹಿಡಿದು 70 ವರ್ಷದವರೆಗಿನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶ್ರವಣದೋಷ ಹೊಂದಿರುವ ಹಾಗೂ ದೃಷ್ಟಿ ದೋಷ ಹೊಂದಿರುವ ತಲಾ ಒಬ್ಬರು, 10 ಮಂದಿ ಗರ್ಭಿಣಿಯರು (ಇಬ್ಬರಿಗೆ ಶಸ್ತ್ರಕ್ರಿಯೆ ಮೂಲಕ, ಒಬ್ಬರಿಗೆ ಸಹಜ ಹೆರಿಗೆಯಾಗಿದೆ) ಕ್ಷಯರೋಗಿಗಳು ಹಾಗೂ ಇಬ್ಬರು ಎಚ್ಐವಿ ಸೋಂಕಿತರು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಆತ್ಮಸ್ಥೈರ್ಯ ಹೆಚ್ಚಿಸಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ವಿವರಿಸಿದರು.

‘ಇದುವರೆಗೆ 23,428 ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ ಜುಲೈ ತಿಂಗಳಿನಲ್ಲೇ 8000ಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದೇವೆ. ವಾರದಿಂದ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಮಾಡಲಾಗಿದ್ದು, 5,000 ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಒಂದು ಗಂಟೆಯೊಳಗೆ ಫಲಿತಾಂಶ ಬರುತ್ತಿದೆ. ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಿರುವುದರಿಮದ ಸೋಂಕಿತರ ಪ್ರಮಾಣವೂ ಹೆಚ್ಚಾಗಿದೆ’ ಎಂದು ಹೇಳಿದರು.

‘ಕೆಮ್ಮು, ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಗೆ ಒಳಪಡಬೇಕು’ ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT