ಸೋಮವಾರ, ಆಗಸ್ಟ್ 8, 2022
24 °C
ಕರ್ತವ್ಯ ನಿರ್ವಹಿಸುತ್ತಿದ್ದ ಸಂಸ್ಥೆಗೆ ₹29.43 ಲಕ್ಷ ವಂಚನೆ

ಹಣ, ಚಿನ್ನ ದುರುಪಯೋಗ: ಮುತ್ತೂಟ್ ಪೈನಾನ್ಸ್‌ನ ಇಬ್ಬರು ನೌಕರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಫೈನಾನ್ಸ್‌ನ ಲಾಕರ್‌ನಲ್ಲಿ ಇಟ್ಟಿದ್ದ ₹ 6 ಲಕ್ಷ ನಗದು ಹಾಗೂ ಗ್ರಾಹಕರು ಗಿರವಿ ಇಟ್ಟಿದ್ದ 316 ಗ್ರಾಂ ಚಿನ್ನ ಹಾಗೂ 240 ಗ್ರಾಂ ತೂಕದ ನಕಲಿ ಚಿನ್ನವನ್ನು ಬೇರೆ ಗ್ರಾಹಕರ ಹೆಸರಿನಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಬ್ರ್ಯಾಂಚ್‌ನಲ್ಲೇ ಗಿರವಿ ಇಟ್ಟು, ₹29.43 ಲಕ್ಷ ದುರುಪಯೋಗ ಪಡಿಸಿಕೊಂಡಿದ್ದ ನಗರದ ಮುತ್ತೂಟ್‌ ಫೈನಾನ್ಸ್‌ನ ಇಬ್ಬರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. 

ಕಾಳನಹುಂಡಿಯ ಕಿರಣ್‌ ಹಾಗೂ ಬಿಸಿಲವಾಡಿಯ ಮೋಹನಕುಮಾರ್‌ ಅವರು ಬಂಧಿತರು. ಅವರ ಬಳಿಯಿಂದ ₹4.10 ಲಕ್ಷ ನಗದು ಹಾಗೂ 316 ಗ್ರಾಂ ಚಿನ್ನ ಹಾಗೂ 240 ಗ್ರಾಂ ನಕಲಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. 

ಕಿರಣ್‌ ಹಾಗೂ ಮೋಹನಕುಮಾರ್‌ ಅವರು ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ‌ರುವ ಮುತ್ತೂಟ್‌ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬ್ರ್ಯಾಂಚ್‌ನ ಸುರಕ್ಷಾ ಲಾಕರ್‌ನ ಉಸ್ತುವಾರಿಯನ್ನು ಇವರು ನೋಡಿಕೊಳ್ಳುತ್ತಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಬ್ರ್ಯಾಂಚ್‌ನ ಮ್ಯಾನೇಜರ್‌ ವರ್ಗವಾಗಿದ್ದರು. ಹೊಸ ಮ್ಯಾನೇಜರ್‌ ಬರುವವರೆಗೆ ಇವರಿಬ್ಬರಿಗೇ ಶಾಖೆಯ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. 

ಇತ್ತೀಚೆಗೆ ಮಹಿಳಾ ಬ್ರ್ಯಾಂಚ್‌ ಮ್ಯಾನೇಜರ್‌ ಹೊಸದಾಗಿ ಬಂದಿದ್ದರು. ಅವರು ಅಧಿಕಾರ ಸ್ವೀಕರಿಸಿದ ನಂತರ ಇರುವ ಚಿನ್ನ ಹಾಗೂ ನಗದಿನ ಲೆಕ್ಕ ಪರಿಶೋಧನೆ ನಡೆಸಬೇಕಾಗಿತ್ತು. ಈ ಸಂದರ್ಭದಲ್ಲಿ ಇವರಿಬ್ಬರೂ ಹಣ ದುರುಪಯೋಗ ಮಾಡಿರುವುದು ಗೊತ್ತಾಗಿದೆ.

ಈ ಸಂಬಂಧ ಮುತ್ತೂಟ್‌ ಫೈನಾನ್ಸ್‌ನ ಕ್ಲಸ್ಟರ್‌ ಅಧಿಕಾರಿ  ಬಸವರಾಜು ಅವರು ಇದೇ 1ರಂದು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕಾಗಿ ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ಮಹೇಶ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. 

ಎಸ್‌ಪಿ ದಿವ್ಯಾ ಸಾರಾ ಥಾಮಸ್‌, ಎಎಸ್‌ಪಿ ಸುಂದರ್ ರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಮಹೇಶ್‌ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಪಿಎಸ್‌ಐ ಸುರೇಶ್ ಭೋಪಣ್ಣ, ಎಎಸ್ಐಗಳಾದ ಶಿವಸ್ವಾಮಿ, ಚೆಲುವರಾಜು ಸಿಬ್ಬಂದಿ ಶಿವಕುಮಾರ್, ಸುರೇಶ್ ಎಚ್.ವಿ, ಶಾಂತರಾಜ್, ಕೃಷ್ಣಮೂರ್ತಿ, ಶಂಕರ್, ಮಹದೇವಸ್ವಾಮಿ, ಸೀನನಾಯ್ಕ, ಜಿ.ಡಿ.ರವಿ, ಮಹೇಶ, ಬಸವರಾಜು, ಮಹೇಶ ಅವರು ತನಿಖಾ ತಂಡದಲ್ಲಿದ್ದರು.

ರಮ್ಮಿ ಆಡಿ ದುಡ್ಡು ಕಳೆದುಕೊಂಡರು!

‘ಆರೋಪಿಗಳು ಫೈನಾನ್ಸ್‌ ಸಂಸ್ಥೆಗೆ ಮೂರು ರೀತಿಯಲ್ಲಿ ಮೋಸ ಮಾಡಿದ್ದಾರೆ. ಲಾಕರ್‌ನಲ್ಲಿದ್ದ ನಗದು ಹಣ ತೆಗೆದುಕೊಂಡಿದ್ದಾರೆ. ಈಗಾಗಲೇ ಗಿರವಿ ಇಟ್ಟಿದ್ದ 316 ಗ್ರಾಂ ಚಿನ್ನವನ್ನು ಬೇರೆ ಗ್ರಾಹಕರ ಹೆಸರಿನಲ್ಲಿ ಮತ್ತೆ ಗಿರವಿ ಇಟ್ಟಂತೆ ತೋರಿಸಿ ಹಣ ಪಡೆದ್ದಿದ್ದಾರೆ. ಇನ್ನೊಂದು 240 ಗ್ರಾಂ ನಕಲಿ ಚಿನ್ನವನ್ನು ಗಿರವಿ ಇಟ್ಟು ಹಣ ತೆಗೆದುಕೊಂಡಿದ್ದಾರೆ’ ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಒಟ್ಟು ಮೌಲ್ಯ ₹29.43 ಲಕ್ಷ ಆಗುತ್ತದೆ. ಇಬ್ಬರೂ ಆನ್‌ಲೈನ್‌ನಲ್ಲಿ ರಮ್ಮಿ ಆಡಿ, ಬಹುತೇಕ ಎಲ್ಲ ಹಣವನ್ನೂ ಕಳೆದುಕೊಂಡಿದ್ದಾರೆ. ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಸತತವಾಗಿ ತನಿಖೆ ಹಾಗೂ ಶೋಧ ಕಾರ್ಯದ ನಂತರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಚಿನ್ನ ಇಟ್ಟ ಗ್ರಾಹಕರಿಗೆ ಏನೂ ಸಮಸ್ಯೆಯಾಗದು. ಫೈನಾನ್ಸ್‌ಗೆ ₹29 ಲಕ್ಷ ನಷ್ಟವಾಗಿದೆ’ ಎಂದು ಅವರು ಮಾಹಿತಿ ನೀಡಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು