ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ: ಬಸವನಾಯಕ

Published 3 ಫೆಬ್ರುವರಿ 2024, 16:24 IST
Last Updated 3 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ‘ತಾಲ್ಲೂಕಿನ ಉಮ್ಮತ್ತೂರು ಉರುಕಾತೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ವಹಿಸಿರುವ ಆದೇಶವನ್ನು ರದ್ದುಪಡಿಸಿ ಮತ್ತು ದೇವಾಲಯದ ಕೀ ಹಾಗೂ ಹುಂಡಿ ಹಣವನ್ನು ಮಂಡಳಿಗೆ ಹಸ್ತಾಂತರಿಸುವಂತೆ ಹೈಕೋರ್ಟ್ ನೀಡಿರುವ ಆದೇಶ ಅಚ್ಚರಿ ತಂದಿದ್ದು, ಆದೇಶದ ವಿರುದ್ಧ ಗ್ರಾಮಸ್ಥರು ಒಟ್ಟಾಗಿ ಮೇಲ್ಮನವಿ ಸಲ್ಲಿಸಿದ್ದೇವೆ’ ಎಂದು ಗ್ರಾಮದ ವಿವಿಧ ಕೋಮುಗಳ ಮುಖಂಡರು ಶನಿವಾರ ಹೇಳಿದರು. 

ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲಾಡಳಿತ ಕೂಡ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ, ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥವಾಗುವವರೆಗೂ ಸರ್ಕಾರವೇ ದೇವಾಲಯದ ಆಡಳಿತ ನಿರ್ವಹಿಸಬೇಕು. ಅನಧಿಕೃತ ಆಡಳಿತ ಮಂಡಳಿಗೆ ಹಸ್ತಾಂತರಿಸಬಾರದು’ ಎಂದು ಆಗ್ರಹಿಸಿದರು. 

‘ಹೆಚ್ಚುವರಿ ಜಿಲ್ಲಾಧಿಕಾರಿಯವರು ಕೀ ಹಸ್ತಾಂತರಿಸುವಂತೆ ಸೂಚಿಸಿದ್ದರೂ, ತಹಶೀಲ್ದಾರ್‌ ಕೊಡುತ್ತಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ. ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆಯೇ ವಿನಾ, ಕೀ ಹಸ್ತಾಂತರಿಸುವಂತೆ ಹೇಳಿಲ್ಲ’ ಎಂದರು. 

ಮುಖಂಡ ಬಸವನಾಯಕ ಮಾತನಾಡಿ, ‘ಜ. 18ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ, ಜ. 29ರಂದು ಗ್ರಾಮದ ‌ಒಂಬತ್ತು ಮಂದಿ ಒಟ್ಟಾಗಿ ಮೇಲ್ಮನವಿ ಸಲ್ಲಿಸಿದ್ದೇವೆ. ಕಳೆದ ವರ್ಷ ರಾಜ್ಯ ಸರ್ಕಾರ ಈ ದೇವಾಲಯವನ್ನು ಮುಜರಾಯಿ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿದಾಗ, ಟ್ರಸ್ಟ್‌ನವರು ದೇವಾಲಯದ ಬೀಗದ ಕೀ ಕೊಡದೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಆಗ ಜಿಲ್ಲಾಡಳಿತ ದೇವಾಲಯದ ಬೀಗ ಒಡೆದು ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು’ ಎಂದರು. 

‘ಈಗ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಆಡಳಿತ ಮಂಡಳಿಯವರು ಕಾನೂನನ್ನು ಗೌರವಿಸಬೇಕು. ಕೀ ನೀಡದಿದ್ದರೆ ಬೀಗ ಒಡೆಯುತ್ತೇವೆ ಎಂದು ಟ್ರಸ್ಟಿಗಳು ಮಾಧ್ಯಮಗಳ ಮುಂದೆ, ತಹಶೀಲ್ದಾರ್‌ ಕಚೇರಿಯಲ್ಲೂ ಹೇಳಿದ್ದಾರೆ. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲೂ ಇಲ್ಲಸಲ್ಲದನ್ನೆಲ್ಲಾ ಬರೆಯುತ್ತಿದ್ದಾರೆ. ಇವೆಲ್ಲವೂ ಜನರಿಗೆ ಪ್ರಚೋದನೆ ಕೊಡುವಂತಹ ಹೇಳಿಕೆಯಾಗಿದೆ. ಬೀಗ ಒಡೆದರೆ ಗ್ರಾಮದಲ್ಲಿ ಅಶಾಂತಿ ಘರ್ಷಣೆ ಉಂಟಾಗುವ ಸಂಭವವಿದೆ. ಇದಕ್ಕೆ ಆಡಳಿತ ಮಂಡಳಿಯವರೇ ಹೊಣೆಗಾರರಾಗುತ್ತಾರೆ’ ಎಂದರು. 

ಅನಧಿಕೃತ ಟ್ರಸ್ಟ್‌: ಉಮ್ಮತ್ತೂರು ಉರುಕಾತೇಶ್ವರಿ ದೇವಾಲಯ ಆಡಳಿತ ಮಂಡಳಿಯೇ ಅನಧಿಕೃತ. ದೇವಾಲಯ ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಸರ್ಕಾರಕ್ಕೆ ಸೇರಿದ್ದು ಎನ್ನುವುದಕ್ಕೆ, ದೇವಸ್ಥಾನದ ಜಾಗ ಪಂಚಾಯಿತಿಯ ಅಸೆಸ್‌ಮೆಂಟ್‌ನಲ್ಲಿದೆ. ಅಲ್ಲದೇ, ಆಡಳಿತ ಮಂಡಳಿ ಇದ್ದರೂ, ಹುಂಡಿ ಹಣವೆಲ್ಲ ತಹಶೀಲ್ದಾರ್‌ ಖಾತೆಗೆ ಜಮೆಯಾಗುತ್ತಿದೆ. ಟ್ರಸ್ಟ್‌ ರಚನೆ ಮಾಡಿದಾಗ ಪಕ್ಕದ ದೇಮಹಳ್ಳಿ, ಕುದೇರು ಗ್ರಾಮದವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತು. ಪ್ರತಿ ತಿಂಗಳ ಮೊದಲ ಮಂಗಳವಾರದಂದು ದೇವಿಯ ದರ್ಶನ ಮಾಡಲು, ಪೂಜೆ ಸಲ್ಲಿಸಲು ನೂರಾರು ಜನರು ಬರುತ್ತಾರೆ. ಅಲ್ಲಿ ಬರುವ ಹಣವನ್ನು ಪಡೆಯುವುದಕ್ಕಾಗಿ ಆಡಳಿತ ಮಂಡಳಿ ರಚಿಸಲಾಗಿದೆ’ ಎಂದು ಬಸವ ನಾಯಕ ಆರೋಪಿಸಿದರು. 

ಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ರೇವಣ್ಣ, ಒಕ್ಕಲಿಗ ಸಮಾಜದ ಎಸ್.ಪ್ರಭುಸ್ವಾಮಿ, ದಲಿತ ಸಮಾಜದ ಸಿದ್ದರಾಜು, ಕುಂಬಾರ ಸಮಾಜದ ಸಿದ್ಧರಾಜು, ಉಪ್ಪಾರ ಸಮಾಜದ ಮಹೇಶ್ ಉಪಸ್ಥಿತರಿದ್ದರು.

ಶೇ 90ರಷ್ಟು ಲಿಂಗಾಯತರು ಟ್ರಸ್ಟ್‌ಗೆ ವಿರೋಧ

ಗ್ರಾಮದ ವೀರಶೈವ ಮುಖಂಡ ಪುಟ್ಟಣ್ಣ ಮಾತನಾಡಿ ‘ಗ್ರಾಮದಲ್ಲಿರುವ ಲಿಂಗಾಯತ ಸಮುದಾಯದ ಶೇ 90ರಷ್ಟು ಮಂದಿ ಆಡಳಿತ ಮಂಡಳಿಯ ವಿರುದ್ಧ ಇದ್ದೇವೆ. ಅವರನ್ನು ವಿರೋಧಿಸಿದ್ದಕ್ಕೆ ನನ್ನ ಮೇಲೆಯೇ ಎಂಟು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸಮುದಾಯದ ಬಹುತೇಕರು ದೇವಾಲಯ ಮುಜರಾಯಿ ಇಲಾಖೆಯ ವಶದಲ್ಲೇ ಇರಲಿ ಎಂದು ಬಯಸುತ್ತಿದ್ದಾರೆ’ ಎಂದರು.  ‘ಸರ್ಕಾರ ದೇವಾಲಯವನ್ನು ವಶಕ್ಕೆ ಪಡೆಯುವುದಕ್ಕೂ ಮೊದಲು ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಯವರು ಗ್ರಾಮಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದಾಗ ಬೆರಳೆಣಿಕೆಯಷ್ಟು ಮಂದಿ ಟ್ರಸ್ಟ್‌ಗೆ ಸೇರಬೇಕೆಂದು ಒತ್ತಾಯಿಸಿದರೆ ಲಿಂಗಾಯತರೂ ಸೇರಿದಂತೆ ಎಲ್ಲ ಕೋಮಿನ ಜನರೂ ಮುಜರಾಯಿಗೆ ಸೇರಬೇಕು ಎಂದು ಆಗ್ರಹಿಸಿದ್ದರು. ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿಯೇ ರಾಜ್ಯ ಸರ್ಕಾರ ದೇವಾಲಯವನ್ನು ಮುಜರಾಯಿ ಅಧೀನಕ್ಕೆ ಪಡೆದುಕೊಂಡಿತ್ತು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT