ಗುರುವಾರ , ಆಗಸ್ಟ್ 11, 2022
26 °C

8 ರಂದು ಸ್ವಯಂ ಪ್ರೇರಿತ ಬಂದ್‌ಗೆ ಸಂಘಟನೆಗಳ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ಸಂಘಟನೆಗಳು ಮಂಗಳವಾರ (ಡಿ.8) ಕರೆ ನೀಡಿರುವ ಭಾರತ ಬಂದ್‌ಗೆ ಜಿಲ್ಲೆಯ ರೈತ, ದಲಿತ, ಪ್ರಗತಿಪರ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸಿದ್ದು, ನಗರದಲ್ಲಿ ಸ್ವಯಂ ಪ್ರೇರಿತ ಬಂದ್‌ ಆಚರಿಸಲು ನಿರ್ಧರಿಸಿವೆ.

ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿ, ಬಂದ್‌ಗೆ ಬೆಂಬಲ ನೀಡಲು ತೀರ್ಮಾನಿಸಿವೆ. ಬಂದ್‌ಗೆ ಬೆಂಬಲ ನೀಡುವಂತೆ ಸಾರ್ವಜನಿಕರು ಹಾಗೂ ವರ್ತಕರಲ್ಲಿ ಮನವಿ ಮಾಡಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸ್ವಾತಂತ್ರ್ಯ ಕುರಿತ ಜನರ ಸಂಘಟನೆ (ಪಿಯುಸಿಎಲ್) ರಾಜ್ಯ ಕಾರ್ಯದರ್ಶಿ ಕೆ.ವೆಂಕಟರಾಜು ಅವರು, ‘ಲಕ್ಷಾಂತರ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ನೂರಾರು ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿವೆ. ಜಿಲ್ಲಾ ಕೇಂದ್ರದಲ್ಲೂ ಬಂದ್‌ಗೆ ಬೆಂಬಲ ನೀಡಲು ತೀರ್ಮಾನಿಸಲಾಗಿದೆ. ಸಮಯ ಬಹಳ ಕಡಿಮೆ ಇರುವುದರಿಂದ ಜಿಲ್ಲೆಯಾದ್ಯಂತ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ನಗರದಲ್ಲಿ ಮಾತ್ರ ಬಂದ್‌ ಆಚರಿಸಲು ತೀರ್ಮಾನಿಸಿದ್ದೇವೆ’ ಎಂದರು. 

‘ಎಲ್ಲ ವರ್ತಕರು, ಆಟೊ ಹಾಗೂ ಇತರ ವಾಹನಗಳ ಚಾಲಕರು, ಹೋಟೆಲ್‌ಗಳು, ಬಾರ್‌ಗಳ ಮಾಲೀಕರು ಸೇರಿದಂತೆ ವಿವಿಧ ವ್ಯವಹಾರಗಳನ್ನು ನಡೆಸುವವರು ಈ ಬಂದ್‌ಗೆ ಬೆಂಬಲ ನೀಡಬೇಕು. ಒಂದು ದಿನದ ಮಟ್ಟಿಗೆ ಅನನುಕೂಲ ಆದರೂ ತೊಂದರೆ ಇಲ್ಲ. ದೇಶದಾದ್ಯಂತ ನಡೆಯುತ್ತಿರುವ ದೊಡ್ಡ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು. 

‘ಮಂಗಳವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಚಾಮರಾಜನಗರದಲ್ಲಿ ಬಂದ್‌ ಆಚರಿಸಲಾಗುವುದು. ಪ್ರತಿಭಟನೆ ನಡೆಸುವುದಿಲ್ಲ. ಎಲ್ಲರೂ ಇದಕ್ಕೂ ಸಹಕರಿಸಬೇಕು’ ಎಂದು ಪ್ರಗತಿಪರ ಸಂಘಟನೆಗಳ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ‌ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು. 

ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಸಿದ್ದರಾಜು, ಎಸ್‌ಜೆಪಿಯ ಜಿ.ಎಂ.ಗಾಡ್ಕರ್‌, ದಸಂಸ (ಸಂಯೋಜಕ) ಜಿಲ್ಲಾ ಅಧ್ಯಕ್ಷ ಕೆ.ಎಂ.ನಾಗರಾಜ್‌, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್‌ ಅಹಮದ್‌, ಎಸ್‌ಡಿಪಿಐ ಮುಖಂಡ ಸೈಯದ್‌ ಆರಿಫ್‌, ಜನ ಹಿತಾಸಕ್ತಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್‌ ರಾಮಸಮುದ್ರ, ಛಲವಾದಿ ಮಹಾಸಭಾದ ಅಧ್ಯಕ್ಷ ಕೆ.ಆರ್‌.ನಾರಾಯಣ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಅಧ್ಯಕ್ಷ ಕಫೀಲ್‌ ಮತ್ತಿತರರು ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.