ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವೇಮನ ಜಯಂತಿ ಸರಳ ಆಚರಣೆ

Last Updated 19 ಜನವರಿ 2021, 15:24 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಾಯೋಗಿ ವೇಮನರ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಬಿ. ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರು ದೀಪ ಬೆಳಗಿಸಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಕೆ.ಬಿ. ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ, ‘ವೇಮನರು ಸಮಾಜದಲ್ಲಿನ ಕಂದಾಚಾರ, ಅಸ್ಪೃಶ್ಯತೆ ವಿರೋಧಿಸಿ ಜನಸಾಮಾನ್ಯರಿಗೆ ತಮ್ಮ ಕಾವ್ಯಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ತಮ್ಮ ಬರಹಗಳ ಮೂಲಕ ಜನಸಾಮಾನ್ಯರನ್ನು ತಲುಪಿದ್ದಾರೆ. ಸಮಾಜದಲ್ಲಿನ ಮೇಲು ಕೀಳು ಭಾವನೆಯನ್ನು ಹೋಗಲಾಡಿಸಿ ಸಕಾರಾತ್ಮಕ ಬದುಕಿಗೆ ಉತ್ತೇಜಿಸುವ ಅಂಶಗಳು ವೇಮನ ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಅವರು ಮಾತನಾಡಿ ‘ವೇಮನರ ಸರಳತೆ, ಜೀವನ ಶೈಲಿ, ಆಚಾರ ವಿಚಾರ, ಚಿಂತನೆಗಳು ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿವೆ. ವೇಮನರ ಆದರ್ಶ ತತ್ವಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ’ ಎಂದು ಸಲಹೆ ಮಾಡಿದರು.

ಮುಖಂಡ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ, ‘ವೇಮನ ಅವರು ರಚಿಸಿರುವ ಪದ್ಯಗಳು ಇಂದು ಹೋರಾಟದ ಹಾಡುಗಳಾಗಿವೆ. ಮನುಕುಲದ ಉದ್ಧಾರದ ಕುರಿತು ಹೇಳುತ್ತಿವೆ. ಮನುಷ್ಯ ಹುಟ್ಟಿದಾಗ ಅವನಿಗೆ ಹೆಸರು ಇರುವುದಿಲ್ಲ, ಉಸಿರು ಮಾತ್ರ ಇರುತ್ತದೆ. ಉಸಿರು ನಿಂತಾಗ ಮಾನವ ಮಾಡಿದ ಒಳ್ಳೆಯ ಕೆಲಸಗಳ ಹೆಸರು ಮಾತ್ರ ಉಳಿಯುತ್ತದೆ ಎಂಬ ಮಹತ್ವದ ಸಂದೇಶ ಸಾರಿದ್ದಾರೆ’ ಎಂದರು.

ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ ಅವರು ವೇಮನರು ರಚಿಸಿದ ಆತ್ಮ ಶುದ್ಧಿ ಇರದ ಆಚಾರವೇತಕೆ? ಮಡಕೆ ಶುದ್ಧಿ ಇರದ ಅಡುಗೆ ಏತಕೆ? ಚಿತ್ತ ಶುದ್ಧಿ ಇರದ ಶಿವನ ಪೂಜೆ ಯಾಕೆ? ಎಂಬ ಕವಿತೆ ಹಾಡಿ ಗಮನ ಸೆಳೆದರು.

ಮುಖಂಡರಾದ ಕೆ. ವೀರಭದ್ರಸ್ವಾಮಿ, ಜಿ. ಬಂಗಾರು, ಆಲೂರು ನಾಗೇಂದ್ರ, ಗು.ಪುರುಷೋತ್ತಮ್, ತಹಶೀಲ್ದಾರ್ ಚಿದಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ಗಿರೀಶ್, ಆಹಾರ ಇಲಾಖೆಯ ಉಪನಿರ್ದೇಶಕ ಸಿ.ಎನ್. ರುದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT