ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ತಡೆಗೆ ಮುಂಜಾಗ್ರತೆಯೇ ಮದ್ದು: ಡಿಎಚ್‌ಒ

ರಾಷ್ಟ್ರೀಯ ಡೆಂಗಿ ದಿನಾಚರಣೆ: ಜಾಗೃತಿ ಜಾಥಾ, ಮಾನವ ಸರಪಳಿ ನಿರ್ಮಾಣ
Published 17 ಮೇ 2024, 4:15 IST
Last Updated 17 ಮೇ 2024, 4:15 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯು ನಗರದಲ್ಲಿ ಗುರುವಾರ ಜಾಗೃತಿ ಜಾಥಾ ಹಾಗೂ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಡೆಂಗಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಿತು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿಗೆ ಜಾಥಾಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ಅವರು ಹಸಿರು ನಿಶಾನೆ ತೋರಿದರು. 

ನಂತರ ಮಾತನಾಡಿದ ಅವರು, ‘ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಡೆಂಗಿ ಜ್ವರದ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು. ಡೆಂಗಿಗೆ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಹಾಗಾಗಿ ರೋಗ ಬರದಂತೆ ತಡೆಯಬೇಕು. ಕಾಯಿಲೆ ನಿಯಂತ್ರಣ ಸರ್ಕಾರ ಅಥವಾ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ’ ಎಂದರು. 

ಹಗಲು ಹೊತ್ತಿನಲ್ಲಿ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿಯಾಗುವುದು ಡೆಂಗಿಯ ಲಕ್ಷಣ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಡೆಂಗಿ ಉಲ್ಭಣದಿಂದ ದೇಹದ ಜೀವಕೋಶಗಳು ನಾಶವಾಗುತ್ತವೆ. ರಕ್ತ ಪರೀಕ್ಷೆಯಿಂದ ರೋಗ ಪತ್ತೆ ಹಚ್ಚಬಹುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ’ ಎಂದರು.

ಡೆಂಗಿ ಜ್ವರ ವರ್ಷಪೂರ್ತಿ ಕಾಣಿಸಿಕೊಳ್ಳುತ್ತದೆ. ಆದರೆ, ಮಳೆಗಾಲದ ಸಂದರ್ಭದಲ್ಲಿ ಹೆಚ್ಚು. ಮನೆ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ನೀರು ಶೇಖರಣೆಯನ್ನು ಪ್ರತಿ ಮೂರು ದಿನಕ್ಕೊಮ್ಮೆ ಖಾಲಿ ಮಾಡಿ ಹೊಸ ನೀರನ್ನು ತುಂಬಿಸಿಕೊಳ್ಳುವ ಮೂಲಕ ಸೊಳ್ಳೆಯಿಂದ ರಕ್ಷಣೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್‍ಕುಮಾರ್, ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣ್, ಸರ್ಕಾರಿ ನರ್ಸಿಂಗ್ ಶಾಲೆಯ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಜಾಥಾ ಹಾಗೂ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT