ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಚುನಾವಣಾ ತರಬೇತಿಗೆ ಬಂದಿದ್ದ ಸಿಬ್ಬಂದಿ ಸಾವು

Last Updated 18 ಏಪ್ರಿಲ್ 2023, 16:01 IST
ಅಕ್ಷರ ಗಾತ್ರ

ಹನೂರು: ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಚುನಾವಣಾ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಭಾಗವಹಿಸಿದ್ದ ಜಗದೀಶ (40) ಎಂಬುವವರು ಮೆಟ್ಟಿಲು ಹತ್ತುವಾಗ ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಆದರೆ, ಬೆಳಿಗ್ಗೆಯೇ ಅವರು ಜಾರಿ ಬಿದ್ದಿದ್ದು, ಸಂಜೆಯ ಹೊತ್ತಿಗೆ ಅವರು ಬದುಕಿದ್ದಾರೆ ಎಂದು ಹೇಳಲಾಗಿತ್ತು. ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ, ವೈದ್ಯರು ಮೃತ‍ಪಟ್ಟಿದ್ದಾರೆ ಎಂದು ಘೋಷಿಸಿದರು.

ಆಗಿದ್ದೇನು?: ಮಂಗಳವಾರ ಪಟ್ಟಣದಲ್ಲಿ ಎಆರ್‌ಒ ಹಾಗೂ ಪಿಆರ್‌ಒಗಳಿಗೆ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಗೆ ಖಜಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್‌ ಅವರು ಬಂದಿದ್ದರು. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮೆಟ್ಟಿಲು ಹತ್ತುತ್ತಿದ್ದಾಗ ಎಡವಿ ಬಿದ್ದದ್ದರು. ಅವರ ಗಲ್ಲ ಹಾಗೂ ತಲೆಯ ಹಿಂಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಸಿಬ್ಬಂದಿ ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ನಿಸ್ತೇಜವಾಗಿ ಮಲಗಿದ್ದ ಜಗದೀಶ್‌ ಅವರನ್ನು ನೋಡಿದ್ದರಲ್ಲದೆ, ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಘಟನೆಯ ಬಗ್ಗೆ ಮಾಹಿತಿಯನ್ನೂ ಪಡೆದಿದ್ದರು.

ಮಧ್ಯಾಹ್ನ ಹೋಲಿಕ್ರಾಸ್ ಆಸ್ಪತ್ರೆಯಿಂದ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಶವಾಗಾರದಲ್ಲಿ ದೇಹವನ್ನು ಇರಿಸಲಾಗಿತ್ತು. ಜಗದೀಶ್‌ ಅವರ ತಾಯಿ ಕೈಯನ್ನು ಮುಟ್ಟಿದಾಗ, ಅವರು ಕೈಕಾಲು ಅಲ್ಲಾಡಿಸಿದರು ಎಂದು ಹೇಳಲಾಗಿದೆ. ತಕ್ಷಣ ಅವರು ವೈದ್ಯರ ಗಮನಕ್ಕೆ ತಂದರು. ತಾಲ್ಲೂಕಿನ ಪ್ರಭಾರ ವೈದ್ಯಾಧಿಕಾರಿ ಡಾ.ಪ್ರಕಾಶ್ ನಾಡಿಮಿಡಿತವನ್ನು ಪರಿಶೀಲಿಸಿದಾಗ ವ್ಯಕ್ತಿಯು ಬದುಕಿರುವುದು ಗೊತ್ತಾಯಿತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ಕಳುಹಿಸಲಾಯಿತು.

‘ವ್ಯಕ್ತಿ ಮೆಟ್ಟಿಲು ಹತ್ತುವಾಗ ಕೆಳಗೆ ಬಿದ್ದಿದ್ದರು. ಗಲ್ಲ ಮತ್ತು ತಲೆಯಲ್ಲಿ ತೀವ್ರ ಸ್ರಾವವಾಗಿದ್ದರಿಂದ ಗಾಬರಿಯಾಗಿ ಕೋಮಾ ಸ್ಥಿತಿಗೆ ಮರಳಿರುವ ಸಾಧ್ಯತೆ ಇದೆ. ಮಧ್ಯಾಹ್ನದವರೆಗೂ ವ್ಯಕ್ತಿಗೆ ಪ್ರಜ್ಞೆಯೂ ಇರಲಿಲ್ಲ. ನಾನು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ ನಾಡಿಮಿಡಿತ ಪರೀಕ್ಷಿಸಿದಾಗ ಬದುಕಿರುವುದು ಗೊತ್ತಾಗಿದೆ’ ಎಂದರು.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ‘ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ಇಸಿಜಿ ಮಾಡಲಾಗಿತ್ತು. ಅದು ಫ್ಲ್ಯಾಟ್‌ ಬಂದಿದೆ. ನಾಡಿ ಮಿಡಿತವೂ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆ ಬಳಿಕವೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಸಂಜೆ ಹೊತ್ತಿಗೆ ನಾಡಿಮಿಡಿತ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳಿದ್ದರು. ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ತರುವಾಗಲೇ ಜಗದೀಶ್‌ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ಘೋಷಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT