ಬುಧವಾರ, ಮಾರ್ಚ್ 3, 2021
18 °C

ಶಾಲೆ ಆರಂಭ: 27ರಂದು ಆರೋಗ್ಯ ಸಚಿವರೊಂದಿಗೆ ಚರ್ಚೆ–ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಮಾತ್ರ ಅಲ್ಲದೇ ಉಳಿದ ತರಗತಿಗಳ ಮಕ್ಕಳಿಗೂ ಶಾಲೆ ಆರಂಭಿಸುವ ಸಂಬಂಧ ಬುಧವಾರ (ಜ. 27) ಆರೋಗ್ಯ ಸಚಿವ ಡಾ.ಎಸ್‌.ಸುಧಾಕರ್‌ ಹಾಗೂ ಇತರ ಇಲಾಖೆಗಳ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸೋಮವಾರ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗ ಆರಂಭಿಸಲಾಗಿರುವ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಹಾಗೂ ವಿದ್ಯಾಗಮ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅರ್ಧ ದಿನ ನಡೆಸುತ್ತಿರುವ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳನ್ನು ಇಡೀ ದಿನಕ್ಕೆ ವಿಸ್ತರಿಸಬೇಕು, ಪ್ರಥಮ ಪಿಯುಸಿ, 8ನೇ, 9ನೇ ತರಗತಿಗಳನ್ನು ತಕ್ಷಣವೇ ಆರಂಭಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆಯೂ ಬೇಡಿಕೆ ಬಂದಿದೆ’ ಎಂದು ಹೇಳಿದರು. 

‘ಬುಧವಾರ ಆರೋಗ್ಯ ಸಚಿವ ಸುಧಾಕರ್‌ ಅವರ ಸಮಯವನ್ನು ಕೇಳಿದ್ದೇವೆ. ಆರೋಗ್ಯ ಇಲಖೆ, ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧ ಒಟ್ಟ ಇಲಾಖೆಯವರು ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು. 

2 ತಿಂಗಳು ವಿಸ್ತರಣೆ: ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ ಎಂದೇನಿಲ್ಲ. ಆಗಸ್ಟ್‌ನಲ್ಲಿ ಮೂರು ತಿಂಗಳು ವಿದ್ಯಾಗಮ ಕಾರ್ಯಕ್ರಮ ಮಾಡಿದ್ದೆವು. ಚಂದನ ವಾಹಿನಿಯ ಮೂಲಕ ಪಾಠಗಳು ನಡೆದಿವೆ. ಯುಟ್ಯೂಬ್‌, ಆನ್‌ಲೈನ್‌ ಪಾಠಗಳನ್ನೂ ಮಾಡಲಾಗಿದೆ. ಆದರೆ, ಈ ವರ್ಷ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ನಡೆದಿಲ್ಲ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಪರೀಕ್ಷೆ ಮಾಡುತ್ತಿದ್ದೆವು. ಈ ಬಾರಿ ಅದನ್ನು ಒಂದೂವರೆ ತಿಂಗಳು ಕಾಲ ವಿಸ್ತರಿಸಿದ್ದೇವೆ. ಮೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹಾಗೂ ಜೂನ್‌ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಎರಡು ತಿಂಗಳು ಹೆಚ್ಚು ಸಮಯ ಸಿಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು