ಗುರುವಾರ , ಅಕ್ಟೋಬರ್ 29, 2020
19 °C

ವರದಕ್ಷಿಣೆ ಕಿರುಕುಳ; ಮಹಿಳೆ ಸಾವು– ಪತಿ, ಅತ್ತೆ, ಮಾವ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವರದಕ್ಷಿಣೆ ಕಿರುಕುಳದಿಂದಾಗಿ ತಾಲ್ಲೂಕಿನ ಅಂಕನಶೆಟ್ಟಿಪುರದಲ್ಲಿ ಗೃಹಿಣಿಯೊಬ್ಬರು ಸೋಮವಾರ ಮೃತಪಟ್ಟಿದ್ದು, ಪೊಲೀಸರು ಆಕೆಯ ಗಂಡ, ಅತ್ತೆ ಹಾಗೂ ಮಾವ ಅವರನ್ನು ಬಂಧಿಸಿದ್ದಾರೆ. 

ತ್ರಿವೇಣಿ (21) ಮೃತಮಟ್ಟ ಮಹಿಳೆ. ಆಕೆಯ ಪತಿ ರಾಜೇಂದ್ರ, ಅತ್ತೆ ಭಾಗ್ಯಮ್ಮ ಹಾಗೂ ಮಾವ ಮಹದೇವಶೆಟ್ಟಿ ಬಂಧಿತರು.

ತ್ರಿವೇಣಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆಯಾಗಿದ್ದಾರೆಯೇ ಎಂಬುದು ಇನ್ನೂ ಸ್ಟಷ್ಟವಾಗಿಲ್ಲ. ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಆಕೆಯ ತವರು ಮನೆಯವರು ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.  

ತಿ.ನರಸೀಪುರದ ಮೂಗೂರಿನವರಾದ ತ್ರಿವೇಣಿ ಅವರು ಒಂದು ವರ್ಷ ನಾಲ್ಕು ತಿಂಗಳ ಹಿಂದೆ ರಾಜೇಂದ್ರ ಅವರನ್ನು ಮದುವೆಯಾಗಿದ್ದರು. ಇಬ್ಬರ ನಡುವೆ ಹೆಚ್ಚು ಹೊಂದಾಣಿಕೆ ಇರಲಿಲ್ಲ. ಆಗಾಗ ಜಗಳ ಆಗುತ್ತಿತ್ತು. ರಾಜೇಂದ್ರ ಅವರು ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ವರದಕ್ಷಿಣೆಗಾಗಿ ರಾಜೇಂದ್ರ ಹಾಗೂ ಅವರ ತಂದೆ, ತಾಯಿ ಕಿರುಕುಳವನ್ನೂ ನೀಡುತ್ತಿದ್ದರು ಎಂದು ಆಕೆಯ ಸಂಬಂಧಿಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಸೋಮವಾರ ತ್ರಿವೇಣಿ ಅವರು ಮೃತಪಟ್ಟಿದ್ದಾರೆ. ಬಂದ್‌ ಇದ್ದುದರಿಂದ ಅವರ ಅಣ್ಣ ತಡವಾಗಿ ಸಂಜೆ ದೂರು ನೀಡಿದ್ದಾರೆ’ ಎಂದು ಸಬ್‌ಇನ್‌ಸ್ಪೆಕ್ಟರ್‌ ದೇವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ದೃಢಪಡಲಿದೆ' ಎಂದು ಅವರು ಮಾಹಿತಿ ನೀಡಿದರು. 

ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಅನ್ಸರ್‌ ಅಲಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ‌ನಂಜಪ್ಪ, ಸಬ್ ಇನ್‌ಸ್ಪೆಕ್ಟರ್‌ ದೇವಿ, ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರು ಶವಾಗಾರಕ್ಕೆ ಭೇಟಿ ನೀಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು