ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಆಗ್ಬೇಕು– ಸಚಿವೆ ಶಶಿಕಲಾ ಜೊಲ್ಲೆ ಮುಂದೆ ವರ್ಷಾ ಮಾತು!

ಚಾಮರಾಜನಗರದ ಕೊತ್ತಲವಾಡಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ, ಅನಾಥ ಮಗುವಿಗೆ ಸಾಂತ್ವನ
Last Updated 19 ಜೂನ್ 2021, 13:40 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ನಿಂದ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡ ತಾಲ್ಲೂಕಿನ ಕೊತ್ತಲವಾಡಿಯ ಐದು ವರ್ಷ ವಯಸ್ಸಿನ ವರ್ಷಾ ಮತ್ತು ಆಕೆಯ ಪಾಲಕರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ವರ್ಷಾಳ ಪರಿಸ್ಥಿತಿ, ಆಕೆಯನ್ನು ದತ್ತು ಪಡೆದುಕೊಂಡ ಚಿಕ್ಕಮ್ಮ ರಶ್ಮಿ, ಚಿಕ್ಕಪ್ಪ ಮಹದೇವಸ್ವಾಮಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಂಡು ಸಚಿವೆ ಭಾವುಕರಾದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಈ ಭೇಟಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ಬಾಲಕಿಯನ್ನು ಕಂಡರೆ ಕರಳು ಹಿಂಡಿದಂತೆ ಆಗುತ್ತದೆ’ ಎಂದು ಹೇಳಿದರು.

ಬೆಳಿಗ್ಗೆ ಮನೆಗೆ ಬಂದ ಸಚಿವೆ ಜೊಲ್ಲೆ ಅವರನ್ನು ಬಾಲಕಿ ವರ್ಷಾ ಗುಲಾಬಿ ಹೂ ನೀಡಿ ಸ್ವಾಗತಿಸಿದಳು. ವರ್ಷಾ ಜೊತೆ ಸ್ವಲ್ಪ ಹೊತ್ತು ಕುಶಲೋಪರಿ ಮಾತನಾಡಿದರು. ತಮ್ಮ ಪಕ್ಕ ಕುಳ್ಳಿರಿಸಿ ಎದೆಯತ್ತ ಒತ್ತಿಕೊಂಡು ಸಂತೈಸಿದರು.

‘ಮುಂದೆ ಏನಾಗುತ್ತೀಯಾ’ ಎಂದು ಸಚಿವೆ ಕೇಳಿದಾಗ ‘ಡಿಸಿ ಆಗ್ಬೇಕು’ ಎಂದು ವರ್ಷಾ ತಟ್ಟನೆ ಉತ್ತರಿಸಿದಳು.

‘ನಾಲ್ಕು ದಿನ ನನ್ನ ಜೊತೆ ಬಂದು ಬಿಡು’ ಎಂದು ಜೊಲ್ಲೆ ಅವರು ಹೇಳಿದಾಗ, ಇಲ್ಲ ಎಂದು ತಲೆಯಾಡಿಸಿದಳು.

‘ಚಿಕ್ಕಮ್ಮ ಬಂದರೆ ಬರುತ್ತೀಯ’ ಎಂದು ಮರು ಪ್ರಶ್ನಿಸಿದಾಗ, ‘ಹೌದು’ ಎಂದು ಉತ್ತರಿಸಿದಳು.

ಎಲ್ಲ ಸೌಲಭ್ಯಗಳ ಭರವಸೆ: ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ವರ್ಷಾಗೆ ಕೊಡಿಸುವುದಾಗಿ ಸಚಿವರು ಮಹದೇವಸ್ವಾಮಿ ದಂಪತಿಗೆ ಭರವಸೆ ನೀಡಿದರು. ಎಲ್ಲ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸುವುದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಸೂಚಿಸಿದರು.

ವೈಯಕ್ತಿಕ ಸಹಾಯ: ಮಹದೇವಸ್ವಾಮಿ ಅವರದ್ದು ಬಡ ಕುಟುಂಬದವರಾಗಿದ್ದು ವೈಯಕ್ತಿಕವಾಗಿ ಸಹಾಯ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸಚಿವರ ಜೊತೆಯಲ್ಲಿದ್ದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸ್ಪಂದಿಸಿ ಮಗುವಿಗೆ ₹ 50 ಸಾವಿರ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಸಚಿವರು ಕೂಡ ನಮ್ಮ ಸಂಸ್ಥೆಯ ವತಿಯಿಂದಲೂ ಅಗತ್ಯ ಸಹಾಯ ಮಾಡಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ಇತರರು ಇದ್ದರು.

ಸಚಿವರ ಭೇಟಿಯ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವರ್ಷಾಳ ಚಿಕ್ಕಪ್ಪ ಮಹದೇವಸ್ವಾಮಿ ಅವರು, ‘ಸಚಿವರು ಬಂದು ನಮ್ಮ ಜೊತೆ ಮಾತನಾಡಿದರು. ಎಲ್ಲ ಮಾಹಿತಿಗಳನ್ನೂ ಪಡೆದರು. ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT