ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸವ ಪೂರ್ವ ಲಿಂಗ ಪತ್ತೆ ಅಪರಾಧ : ಶ್ರೀಧರ

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ ಕಾಯ್ದೆ 1994 ಕುರಿತು ಕಾರ್ಯಾಗಾರ
Published 28 ಫೆಬ್ರುವರಿ 2024, 16:48 IST
Last Updated 28 ಫೆಬ್ರುವರಿ 2024, 16:48 IST
ಅಕ್ಷರ ಗಾತ್ರ

ಚಾಮರಾಜನಗರ: ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಮತ್ತು ನ್ಯೂನತೆ ತಿಳಿಯಲು ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡು ಪ್ರಸವ ಪೂರ್ವದಲ್ಲಿಯೇ ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಹಚ್ಚುವುದು ಕಾನೂನು ರೀತಿ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅವರು ಬುಧವಾರ ಹೇಳಿದರು. 

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಲಾಗಿದ್ದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ 1994ರ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಲಿಂಗ ಪತ್ತೆ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ. ಗರ್ಭಾವಸ್ಥೆಯಲ್ಲಿ ಭ್ರೂಣ ಹೆಣ್ಣು ಎಂದು ಕಂಡುಬಂದ ತಕ್ಷಣ ಅದನ್ನು ಗರ್ಭದಲ್ಲೇ ಹತ್ಯೆ ಮಾಡುವ ಪ್ರವೃತ್ತಿ ಸರಿಯಲ್ಲ. ಇದರ ಪರಿಣಾಮದಿಂದ ಪುರುಷರು ಮತ್ತು ಮಹಿಳೆಯರ ಅನುಪಾತದಲ್ಲಿ ವ್ಯತ್ಯಾಸವಾಗುತ್ತದೆ’ ಎಂದರು.

‘ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಗ್ರಾಮ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಚುನಾಯಿತ ಮಹಿಳಾ ಪ್ರತಿನಿಧಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದರೆ ಸ್ತ್ರೀ ಭ್ರೂಣ ಹತ್ಯೆ ತಡೆಗಟ್ಟಲು ಸಾಧ್ಯ’ ಎಂದು ಶ್ರೀಧರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ‘ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಪ್ರಕಾರ ಮೊದಲ ಅಪರಾಧಕ್ಕೆ ಮೂರು ವರ್ಷ ಜೈಲುಶಿಕ್ಷೆ ಜತೆಗೆ ₹50 ಸಾವಿರ ದಂಡ, ಎರಡನೇ ಅಪರಾಧಕ್ಕೆ ಐದು ವರ್ಷ ಜೈಲು ಶಿಕ್ಷೆ ₹1 ಲಕ್ಷ ದಂಡ ಹಾಗೂ ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲು ಅವಕಾಶವಿದೆ. ಶಿಕ್ಷೆ ವೈದ್ಯರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯ ಗಂಡ, ಅತ್ತೆ, ಮಾವ ಹಾಗೂ ಇವರ ಸಂಬಂಧಿಕರೂ ಭ್ರೂಣ ಲಿಂಗಪತ್ತೆ ಕ್ರಿಯೆಗೆ ಪ್ರೋತ್ಸಾಹಿಸಿದರೆ ಅಂತಹವರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ’ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಂಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮಾಜ ಹಾಗೂ ಇಲಾಖೆಗಳಿಗೆ ಕೊಂಡಿಯಾಗಿ ತಳ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಸಂಬಂಧಿಸಿದ ಮಾಹಿತಿಗಳನ್ನು ಇಲಾಖಾಧಿಕಾರಿಗಳ ಜೊತೆ ಸಂವಹನ ನಡೆಸಿ ಹೀನಕೃತ್ಯಗಳನ್ನು ತಡೆಗಟ್ಟಬಹುದು’ ಎಂದರು. 

ಆರ್‌ಸಿಎಚ್ ಅಧಿಕಾರಿ ಡಾ. ಮಂಜುನಾಥ್, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಕಾರ್ಯಕ್ರಮಾಧಿಕಾರಿ ದಿನೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಜಿಲ್ಲಾ ಆಶಾ ಸಮನ್ವಯಕಾರ ಪ್ರಸಾದ್, ಮೇಲ್ವಿಚಾರಕಿ ಆಶಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT