ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕಲ್ಪವೃಕ್ಷಕ್ಕೂ ಕಂಟಕವಾದ ‘ಸುಳಿಕೊಳೆ’

ಕಪ್ಪು, ಕೆಂಪು ಹುಳು, ರೈನೊಸರಸ್ ದುಂಬಿ ಬಾಧೆ: ನಲುಗಿದ ಬೆಳೆ
Published 27 ಮಾರ್ಚ್ 2024, 5:43 IST
Last Updated 27 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ಯಳಂದೂರು: ಈ ಬಾರಿಯ ಬೇಸಿಗೆಯಲ್ಲಿ ತೆಂಗಿನ ಮರಗಳು ರೋಗಬಾಧೆಗೆ ತುತ್ತಾಗಿವೆ.  ಇದರಿಂದ ಕಾಯಿ ಇಳುವರಿ ಕುಸಿದು, ರೈತರಿಗೆ ಆರ್ಥಿಕತೆಗೆ ಸಂಕಷ್ಟ ತಂದಿತ್ತಿದೆ. ಕಪ್ಪುತಲೆ, ಕೆಂಪುಮೂತಿ ಹುಳು, ರೈನೊಸರಸ್ ದುಂಬಿ, ಕಾಂಡಸೊರಗು ಹಾಗೂ ಸುಳಿಕೊಳೆ ರೋಗ ತೋಟವನ್ನು ಬಾಧಿಸುತ್ತಿದ್ದು, ರೈತರ ನಿದ್ದೆಗೆಡಿಸಿದೆ.

ತಾಲ್ಲೂಕಿನ ರೈತರು ತೆಂಗನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಿದ್ದಾರೆ. 1,600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಆವರಿಸಿದೆ. ಬಹುತೇಕ ಬೇಸಾಯಗಾರರು ಎಳನೀರು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಿದರೆ, ದೊಡ್ಡ ಸಾಗುವಳಿದಾರರು ತೆಂಗು ಮತ್ತು ಕೊಬ್ಬರಿ ಉತ್ಪಾದಿಸಿ ಆದಾಯ ಪಡೆಯುತ್ತಾರೆ. ಆದರೆ, ಈಚಿನ ವರ್ಷಗಳಲ್ಲಿ ತೆಂಗಿನ ಬೆಳೆ ಹಲವು ಕೀಟಬಾಧೆಗೆ ಸಿಲುಕಿ, ಸಸಿಗಳು ಒಣಗಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ.

‘ತೆಂಗು ದೀರ್ಘಾವಧಿ ಬೆಳೆ. ಐದಾರು ವರ್ಷಗಳಲ್ಲಿ ಫಲ ಕಚ್ಚುತ್ತದೆ. ಎಲ್ಲ ಕಾಲಕ್ಕೂ ಬೇಡಿಕೆ ಇರುವ ಕಾಯಿ ಮತ್ತು ಎಳನೀರು ನಂಬಿದವರನ್ನು ಕೈಬಿಡದು. ಆದರೆ, ತೆಂಗಿನ ಮರಗಳಿಗೆ ಸುಳಿಕೊಳೆ ಬಾಧೆ  ಮರದಿಂದ ಮರಕ್ಕೆ ಮತ್ತು ತೋಟದಿಂದ ತೋಟಕ್ಕೆ ಹರಡುತ್ತದೆ. ಇದರಿಂದ ಅನಿವಾರ್ಯವಾಗಿ ಮರಗಳು ಕಾಯಿ ಕಟ್ಟುವ ಮೊದಲೇ ಒಣಗುತ್ತದೆ. ಐದಾರು ವರ್ಷ ಶ್ರಮಿಸಿ ದೊಡ್ಡದಾಗಿ ಬೆಳೆದ ವೃಕ್ಷಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ’ ಎಂದು ಅಂಬಳೆ ಬಂಗಾರು ಆತಂಕ ವ್ಯಕ್ತಪಡಿಸಿದರು.

ರುಗೋಸ್ ಹಾವಳಿ: ‘ಈಚಿನ ದಿನಗಳಲ್ಲಿ ಮರಗಳಲ್ಲಿ ಗುಣಮಟ್ಟದ ಕಾಯಿ ಸಿಗುತ್ತಿಲ್ಲ. ಗರಿ ಒಣಗುತ್ತದೆ. ಎಲೆಯ ಮೇಲೆ ಚುಕ್ಕೆಗಳು ಮೂಡಿ ಬೇಗ ಸುಟ್ಟ ಕಲೆ ಮೂಡುತ್ತದೆ. ಕೆಲವೆಡೆ ರುಗೋಸ್ ಹಾವಳಿಯೂ ಕಾಡಿದೆ. ಇಂತಹ ಸಂದರ್ಭ ಗರಿ ಕಪ್ಪಾಗಿ, ಹೊಂಬಾಳೆ ಮತ್ತು ಗಿಡಗಳ ಬೆಳವಣಿಗೆ ತಗ್ಗುತ್ತದೆ.  ತೋಟಗಾರಿಕಾ ಇಲಾಖೆ ಅಧಿಕಾರಿಗಳು ತೋಟಗಳಿಗೆ ಬಂದು ಮಾಹಿತಿ ಪಡೆದು ರೋಗ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಬರದ ಸಂದರ್ಭದಲ್ಲಿ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬರಬೇಕು’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.

ರೋಗ ಬಾಧಿತ ತೆಂಗಿನಗಿಡವನ್ನು ರೈತರೊಬ್ಬರು ತೋರಿಸಿದರು

ರೋಗ ಬಾಧಿತ ತೆಂಗಿನಗಿಡವನ್ನು ರೈತರೊಬ್ಬರು ತೋರಿಸಿದರು

ರೋಗ ಬಾಧಿತ ತೆಂಗಿನಗಿಡವನ್ನು ರೈತರೊಬ್ಬರು ತೋರಿಸಿದರುಪರೋಪಕಾರಿಜೀವಿಗಳನ್ನು ಬಿಡಿ: ರಾಜು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಸಹಾಯಕ ನಿರ್ದೇಶಕ ಜಿ.ಎಸ್‌.ರಾಜು ‘ಕಾಂಡಸೊರಗು ಸುಳಿಕೊಳೆ ಪ್ರಧಾನವಾಗಿ ಗಿಡಗಳನ್ನು ಕಾಡುತ್ತದೆ. ರುಗೋಸ್ ರೈನೊಸರಸ್ ದುಂಬಿ ಕಪ್ಪು ಕೆಂಪುಮೂತಿ ಹುಳು ಕಾಂಡದ ಒಳ ಸೇರಿ ಸುಳಿಯನ್ನು ಕೊರೆದು ತಿನ್ನುತ್ತವೆ. ಈ ವೇಳೆ ಜೈವಿಕ ವಿಧಾನಗಳ ಮೂಲಕ ರೋಗ ನಿಯಂತ್ರಣ ಮಾಡಬಹುದು. ಕಪ್ಪುತಲೆ ಹುಳು ತಿಂದು ಬದುಕುವಂತಹ ಪರೋಪಜೀವಿ ಹುಳುಗಳನ್ನು ತಜ್ಞರು ಆವಿಷ್ಕರಿಸಿದ್ದು ಬಾಧಿತ ಗಿಡ ಒಂದಕ್ಕೆ 20 ಪರೋಪಕಾರಿಜೀವಿ (ಗೋನಿಯೋಜಸ್ ನೆಫಾಂಡಿಟಿಸ್) ಹುಳುಗಳನ್ನು ಪ್ರತಿ 15 ದಿನಗಳಿಗೊಮ್ಮೆ 4 ಬಾರಿ ಬಿಟ್ಟರೆ ಕಪ್ಪುತಲೆ ಹುಳುಗಳನ್ನು ನಾಶಪಡಿಸುತ್ತವೆ’ ಎಂದರು.  ‘ಪ್ರತಿ ಮರಕ್ಕೆ 2 ಕೆಜಿ ಬೇವಿನ ಹಿಂಡಿಯನ್ನು ಮುಂಗಾರು ಮತ್ತು ಹಿಂಗಾರಿಗೂ ಮೊದಲು ಕೊಟ್ಟಿಗೆ ಗೊಬ್ಬರದಲ್ಲಿ ಸೇರಿಸಿ ಬೇರಿಗೆ ಹಾಕಬೇಕು. ಬೇವಿನ ಎಣ್ಣೆ ಸಿಂಪಡಿಸಬೇಕು. ಸಾಗುವಳಿದಾರರು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಔಷಧೋಪಚಾರ ಪಡೆಯಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT