ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಗಾಯಗೊಂಡ ಹುಲಿ ಬಂಡೀಪುರದ ಕಡೆಗೆ: ಕಟ್ಟೆಚ್ಚರ

Last Updated 15 ಜನವರಿ 2021, 7:39 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೇರಳದ ವಯನಾಡು ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಗಾಯಗೊಂಡಿರುವ ಗಂಡು ಹುಲಿಯೊಂದು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಅದರ ಮೇಲೆ ನಿಗಾ ಇಡುವಂತೆ ಅಲ್ಲಿನ ಅಧಿಕಾರಿಗಳು ಇಲ್ಲಿನ ಹುಲಿ ಯೋಜನೆ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

‘ಸಂರಕ್ಷಿತ ಪ್ರದೇಶದ ಯಾವುದೇ ವ್ಯಾಪ್ತಿಯಲ್ಲಿ ಗಾಯಗೊಂಡ ಹುಲಿ ಕಂಡು ಬಂದಿಲ್ಲ. ಈ ಬಗ್ಗೆ ನಿಗಾ ವಹಿಸಲು ಬೀಟ್ ಸಿಬ್ಬಂದಿಗೆ ತಿಳಿಸಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಯನಾಡು ಭಾಗದಲ್ಲಿ ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ, ಏಳು ವರ್ಷದ ಗಂಡು ಹುಲಿಯ ಕತ್ತಿನ ಭಾಗದಲ್ಲಿ ಬಲವಾದ ಗಾಯವಾಗಿದೆ ಎಂದು ಹೇಳುತ್ತಿದ್ದಾರೆ. ಗಾಯಗೊಂಡ ಹುಲಿಗಳು ಯಾವಾಗಲೂ ಕಾಡಿನಿಂದ ಹೊರ ಬೀಳುತ್ತವೆ. ಕಾಡಂಚಿನ ಭಾಗದಲ್ಲಿರುವ ಗ್ರಾಮಗಳ ಜಾನುವಾರು ಮತ್ತು ಕುರಿ, ಮೇಕೆಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತವೆ’ ಎಂದು ಅವರು ತಿಳಿಸಿದರು.

‘ನಮ್ಮ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿ ಗಾಯಗೊಂಡ ಹುಲಿ ಕಂಡು ಬಂದಿಲ್ಲ. ಜಾನುವಾರುಗಳ ಮೇಲೆ ದಾಳಿ ನಡೆದ ಪ್ರಕರಣಗಳೂ ವರದಿಯಾಗಿಲ್ಲ. ಒಂದು ವೇಳೆ, ನಮ್ಮ ಭಾಗದಲ್ಲಿ ಕಂಡುಬಂದರೆ ಸೆರೆ ಹಿಡಿದು ಚಿಕಿತ್ಸೆ ಕೊಡಿಸುವ ಅಥವಾ ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಲಾಗುವುದು

‘ಹುಲಿ ಬಗ್ಗೆ ನಿಗಾ ವಹಿಸಲು ವಿಶೇಷ ತಂಡ ರಚನೆ ಮಾಡಲಾಗಿದ್ದು, ಅವರು ವಯನಾಡು ಅರಣ್ಯಾಧಿಕಾರಿಗಳ ಸಂಪರ್ಕದಲ್ಲಿದ್ದುಕೊಂಡು ಕಾರ್ಯಾಚರಣೆ ನಡೆಸುತ್ತಾರೆ’ ಎಂದು ತಿಳಿಸಿದರು.

ವಯನಾಡು ಜಿಲ್ಲೆಯ ಕೊಲವಲ್ಲಿ ಪ್ರದೇಶದಲ್ಲಿ‌ ಹುಲಿಯು ನಾಲ್ಕು ದಿನಗಳ ಹಿಂದೆ ಆರ್‌ಎಫ್‌ಒ ಒಬ್ಬರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಂಡಿದೆ. ಎರಡು ದಿನಗಳ ಹಿಂದೆ ಕಬಿನಿ ನದಿಯನ್ನು ದಾಟಿ ಬಂಡೀಪುರ ಅರಣ್ಯ ಪ್ರದೇದತ್ತ ಬಂದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT