ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಮೊದಲ ಬಾರಿ ಅಗರ ಕೆರೆಯಲ್ಲಿ ಜಲರಾಶಿ

ನದಿಯಿಂದ ನೀರು ಹರಿಸುವ ತವಕ: ಜಲ ಮೂಲ ಉಳಿಸುವ ಸವಾಲು
Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ದೊಡ್ಡ ಕೆರೆ ಎಂಬ ಮಾನ್ಯತೆ ಪಡೆದ ಅಗರ ಕೆರೆಯಲ್ಲಿ ಈಗ ನೀರು ಸಮೃದ್ಧವಾಗಿ ನಳನಳಿಸುತ್ತಿದೆ. ಮೊದಲ ಬಾರಿಗೆ ಕೆರೆಯ ನೀರನ್ನು ನಂಬಿ ಕೃಷಿಕರು ನಾಟಿಚಟುವಟಿಕೆಯಲ್ಲಿ ತೊಡಗಿದ್ದಾರೆ.

ಸುವರ್ಣಾವತಿ ನದಿಮೂಲ ಬಳಸಿಕೊಂಡು ಕೆರೆಯ ಒಡಲುತುಂಬಿಸಬಹುದು ಎಂಬುದನ್ನು ಈ ಕೆರೆ ಕಾಮಗಾರಿ ಸಾಧ್ಯವಾಗಿಸಿದೆ.

ತಾಲ್ಲೂಕಿನ 27 ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.ಆದರೆ, 999 ಎಕರೆಗಳಷ್ಟು ವಿಸ್ತಾರವಿರುವ ಅಗರ ಕೆರೆಯು, ಆರು ತಿಂಗಳಿಗೆ ಸಾಕಾಗುವಷ್ಟು ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಆದರೆ, ಕಳೆ ಗಿಡ ಮತ್ತು ಹೂಳಿನ ಸಮಸ್ಯೆ ಕೆರೆಯನ್ನು ಬಾಧಿಸುತ್ತಿತ್ತು.

ಕೋವಿಡ್ ಸಮಯದಲ್ಲಿಅಗರ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಒತ್ತುನೀಡಿದ ಪರಿಣಾಮ, ಈ ಬಾರಿ ಮಳೆ ನೀರು ಸಂಗ್ರಹವಾಗಲು ಕಾರಣವಾಗಿದೆ.

‘ಅಗರ ಹೋಬಳಿ ವ್ಯಾಪ್ತಿಯ ಸುಮಾರು 3,500 ಕೃಷಿಕರ ಜಮೀನುಗಳಿಗೆ ಈ ಕೆರೆಯ ನೀರು ಹರಿಯುತ್ತಿದೆ.ಕೆರೆಗೆ ಸಂಪರ್ಕಿಸುವ ಜಲದಾರಿಗಳ ಒತ್ತುವರಿಯನ್ನು ತೆರವುಗೊಳಿಸಿರುವುದರಿಂದ ಕೆರೆಗೆ ನೀರು ಹರಿಯುವಿಕೆ ಸರಾಗವಾಗಿದೆ. ಇದರಿಂದ ಅಲ್ಫಾವಧಿಯ ಬೆಳೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕಿನಕಳ್ಳಿಕೃಷಿಕ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೊಡ್ಡ ಕಬಿನಿ ಕಾಲುವೆಯಿಂದ ಸುವರ್ಣಾವತಿಗೆ ನೀರು ಹರಿಸಿ, ಗಣಿಗನೂರು ಕಟ್ಟೆ ಮೂಲಕಅಗರ ಕೆರೆಗೆ ನೀರು ಹರಿಯುತ್ತದೆ. ಆದರೆ, ಸುವರ್ಣಾವತಿ ಏತ ನೀರಾವರಿ ಯೋಜನೆಗೆ ಚಾಲನೆನೀಡಿದರೆ, ಈ ಭಾಗದ ರೈತರಿಗೆ ವರ್ಷದಲ್ಲಿ ಎರಡು ಬಾರಿ ಕೃಷಿ ಕೈಗೊಳ್ಳಬಹುದು’ ಎಂದು ಗ್ರಾಮದ ಮುಖಂಡ ವೆಂಕಟೇಶ್ ಅವರು ಅಭಿಪ್ರಾಯ ಪಟ್ಟರು.

‘ಶಾಸಕರ ಅನುದಾನದಿಂದ ಈ ಬಾರಿ 4 ತೂಬು (ನೀರು ನಿಯಂತ್ರಣ ಸಾಧನ) ಮತ್ತು ₹1.5 ಕೋಟಿವೆಚ್ಚದಲ್ಲಿ ಕಾಮಗಾರಿ ಪೂರೈಸಲಾಗಿದೆ. ಇದರಿಂದ ನೀರಿನ ಹರಿವಿನಲ್ಲಿ ಹೆಚ್ಚಳಆಗಿದ್ದು, ಎರಡು ತಿಂಗಳ ನೀರು ಹೆಚ್ಚುವರಿಯಾಗಿ ಕೆರೆ ಸೇರಿದೆ’ ಎಂದು ಅವರು ವಿವರಿಸಿದರು.

ಅಂತರ್ಜಲ ವೃದ್ಧಿ: ಕೆರೆ ಅಭಿವೃದ್ಧಿ ಹಾಗೂ ಅದರಿಂದಾಗಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್‌.ಮಂಜುನಾಥ್‌ ಅವರು, ‘ಅಗರ ಕೆರೆ 999 ಎಕೆರೆ ವಿಸ್ತೀರ್ಣ ಹೊಂದಿದೆ. ನರೇಗಾ ಯೋಜನೆಯಡಿ ₹ 35 ಲಕ್ಷ ವೆಚ್ಛದಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ 359ಕ್ಕೂ ಹೆಚ್ಚಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಏರಿದೆ’ ಎಂದರು.

ಕೆರೆ ಅಭಿವೃದ್ಧಿಗೆ ಒತ್ತು: ಶಾಸಕ

ಅಗರ ಕೆರೆಯು 1,250 ಎಕರೆ ಕೃಷಿ ಜಮೀನಿಗೆ ನೀರು ಹರಿಸುತ್ತದೆ. ಕೆರೆಯ ಸುತ್ತಲೂ ₹40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಇತರಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ₹1.60 ಕೋಟಿ ಭರಿಸಲಾಗಿದೆ. 20ಕ್ಕೂ ಹೆಚ್ಚಿನಜಲಾವರಗಳಲ್ಲಿ ಹೂಳು ತೆಗೆದು, 8 ಕೆರೆಗಳಲ್ಲಿ ನೀರು ತುಂಬಿಸಲು ಆದ್ಯತೆನೀಡಲಾಗಿದೆ ಎಂದು ಶಾಸಕಎನ್. ಮಹೇಶ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

––

ಎತ್ತರದಲ್ಲಿರುವ ಇರುವ ಭೂಮಿಗೆ ಕೆರೆ ನೀರು ಜೀವದಾಯಿ. ಕೆರೆಯಲ್ಲಿ ಯಾವಾಗಲೂ ನೀರು ನಿಲ್ಲಿಸಲು ಪಂಚಾಯಿತಿ ಮುಂದಾಗಬೇಕು.

ವೆಂಕಟೇಶ್, ಅಗರ

–––––––––

ಇದೇ ಮೊದಲ ಸಲ ಅಗರ ಕೆರೆ ನೀರು ನಂಬಿ ಭತ್ತ ಬೆಳೆಯಲು ಮುಂದಾಗಿದ್ಧೇವೆ. ಜಲ ಮೂಲಗಳನ್ನು ಸ್ವಚ್ಛಗೊಳಿಸಲು ಗಮನ ಹರಿಸಬೇಕು

–ಸಿದ್ದಪ್ಪ, ಬಸವಪುರ

––––––––––

ಕೆರೆ ನೀರಾವರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಕಳೆಗಿಡ ಕತ್ತರಿಸಿ, ನರೇಗಾ ಮೂಲಕ ಉದ್ಯೋಗ ಸೃಷ್ಟಿಸಲು ಕಾಳಜಿ ವಹಿಸಬೇಕು

ಶಂಭುಲಿಂಗನಾಯಕ, ಕೆಸ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT