ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ

ಬಾಲಕಿಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಮಹಿಳೆಗೂ ಐದು ವರ್ಷಗಳ ಶಿಕ್ಷೆ
Last Updated 14 ಸೆಪ್ಟೆಂಬರ್ 2021, 15:19 IST
ಅಕ್ಷರ ಗಾತ್ರ

ಚಾಮರಾಜನಗರ: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಪುಸಲಾಯಿಸಿ, ಪರಿಚಯಸ್ಥ ಮಹಿಳೆಯೊಬ್ಬರಮನೆಯಲ್ಲಿ ಇರಿಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ ಯುವಕನಿಗೆ ಜಿಲ್ಲೆಯ ಪ್ರಧಾನ ಮತ್ತು ಸೆಷನ್ಸ್‌ ‌ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಕೃತ್ಯಕ್ಕೆ ಸಹಕರಿಸಿದ ಮಹಿಳೆಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.ನಗರದ ನಿವಾಸಿ ಚಂದ್ರು ಅಲಿಯಾಸ್‌ ಚಂದ್ರಶೇಖರ್‌ (21) ಹಾಗೂ ಮಹದೇವಮ್ಮ ಶಿಕ್ಷೆಗೆ ಗುರಿಯಾದವರು.

ಪ್ರಕರಣದ ವಿವರ: 2018ರ ಜುಲೈನಲ್ಲಿ ಈ ಪ್ರಕರಣ ನಡೆದಿತ್ತು. ಶಾಲೆ ಹೋಗುತ್ತಿದ್ದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಚಂದ್ರಶೇಖರ್‌, ಮೂರು ವರ್ಷಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ. ಪ್ರಕರಣ ನಡೆಯುವುದಕ್ಕೂ ಆರು ತಿಂಗಳು ಮೊದಲಿನಿಂದ ಖಾಸಗಿ ಬಸ್‌ನಲ್ಲಿ ಹೋಗುವಾಗ ಬಾಲಕಿಯನ್ನು ಮಾತನಾಡಿಸುತ್ತಿದ್ದ ಆತ, ‘ನಿನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗುತ್ತೇನೆ’ ಎಂದು ಹೇಳುತ್ತಿದ್ದ.

2018ರ ಜುಲೈ 11ರಂದು ಬಾಲಕಿಯು ಶಾಲೆಗೆ ಖಾಸಗಿ ಬಸ್‌ನಲ್ಲಿ ಹೊರಟಿದ್ದಾಗ, ಪಕ್ಕದ ತಂಗುದಾಣದಲ್ಲಿ ಬಸ್‌ ಹತ್ತಿದ್ದ ಚಂದ್ರಶೇಖರ್‌, ‘ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಪುಸಲಾಯಿಸಿ ಶಾಲೆ ಹತ್ತಿರ ಆಕೆಯನ್ನು ಇಳಿಯಲು ಬಿಡದೆ ತಾಲ್ಲೂಕಿನ ಗ್ರಾಮವೊಂದರಲ್ಲಿರುವ ಮಹದೇವಮ್ಮ ಎಂಬುವವರ ಮನೆಗೆ ಕರೆದುಕೊಂಡು ಬಂದು ಇರಿಸಿದ್ದ. ಬಾಲಕಿ ಎಂದು ಗೊತ್ತಿದ್ದರೂ ಮಹದೇವಮ್ಮ ಜುಲೈ 11ರಿಂದ 16ರವರೆಗೆ ಆಕೆಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು. ಈ ಅವಧಿಯಲ್ಲಿ ಚಂದ್ರಶೇಖರ್‌ ಆಕೆಯ ಜೊತೆ ದೈಹಿಕ ಸಂಪರ್ಕ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ನಡೆಸಲಾದ ವೈದ್ಯಕೀಯ ಪರೀಕ್ಷೆಗಳಿಂದ ಹಾಗೂ ತನಿಖೆಯ ವೇಳೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ಇದು ಸಾಬೀತಾಗಿದೆ.

ಬಾಲಕಿಯ ‌ತಾಯಿ ಪಟ್ಟಣ ಠಾಣೆಗೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಇನ್‌ಸ್ಪೆಕ್ಟರ್‌ ಮಹದೇವಯ್ಯ ಅವರು, ಆರೋಪಿಗಳ ವಿರುದ್ಧ ವಿವಿಧ ಐಪಿಸಿ‌ಸೆಕ್ಷನ್‌ 376 (3) (ಒಬ್ಬಳೇ ಮಹಿಳೆ ಮೇಲೆ ನಿರಂತರ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಇಬ್ಬರ ವಿರುದ್ಧವೂ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಚಂದ್ರಶೇಖರ್‌ ಹಾಗೂ ಮಹದೇವಮ್ಮ ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ ಪುರಿ ಅವರು ಇಬ್ಬರೂ ಅಪರಾಧಿಗಳು ಎಂದು ಘೋಷಿಸಿದ್ದು, ಚಂದ್ರಶೇಖರ್‌ಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹6.25 ಲಕ್ಷ ದಂಡ ಹಾಗೂ ಕೃತ್ಯ ಎಸಗಲು ಸಹಕರಿಸಿದ ಮಹದೇವಮ್ಮ ಅವರಿಗೆ 5 ವರ್ಷ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಪರಿಹಾರಕ್ಕೆ ಸೂಚನೆ: ಪ್ರಕರಣದ ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ₹7.50 ಲಕ್ಷ ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಸಿಕ್ಯಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್‌ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT