ಶನಿವಾರ, ಸೆಪ್ಟೆಂಬರ್ 18, 2021
23 °C
ಕೊಳ್ಳೇಗಾಲ: ಸಾರ್ವಜನಿಕರಿಗೆ ಮುಕ್ತ, ಮೊದಲ ದಿನವೇ ಯುವಕರ ಸಂಭ್ರಮ

ಮರಡಿಗುಡ್ಡದಲ್ಲಿ ‘ಜಿಪ್‌ಲೈನ್‌’ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಇಲ್ಲಿನ ಮರಡಿಗುಡ್ಡ ವೃಕ್ಷ ವನದಲ್ಲಿ ಅರಣ್ಯ ಇಲಾಖೆ ಜಿಪ್‌ಲೈನ್‌ ಸಾಹಸ ಕ್ರೀಡೆ ಸೌಲಭ್ಯ ಕಲ್ಪಿಸಿದ್ದು, ಶುಕ್ರವಾರದಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.   

₹20 ಲಕ್ಷ ವೆಚ್ಚದಲ್ಲಿ ಜಿಪ್‌ಲೈನ್‌ (ಜಾರು ತಂತಿ) ಅಳವಡಿಸಲಾಗಿದ್ದು, ಜಿಲ್ಲೆಯಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ಈ ಸಾಹಸಕ್ರೀಡೆಯು ಯುವಜನರನ್ನು ಆಕರ್ಷಿಸುವ ನಿರೀಕ್ಷೆ ಇದ್ದು, ಮೊದಲ ದಿನವೇ ಕೊಳ್ಳೇಗಾಲ ಹಾಗೂ ಸುತ್ತಮುತ್ತಲಿನ ಯುವಕರು ತಂತಿಯಲ್ಲಿ ಜಾರುತ್ತಾ ಸಾಹಸ ಕ್ರೀಡೆಯ ಮಜಾ ಸವಿದರು. 

ಮರಡ್ಡಿಗುಡ್ಡದ ತುದಿಯಿಂದ 70ರಿಂದ 80 ಅಡಿಯಷ್ಟು ಆಳಕ್ಕೆ ಸಾಗುವ 200 ಮೀಟರ್‌ ಉದ್ದ ಜಿಪ್‌ಲೈನ್‌  ಅಳವಡಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಈ ಸಾಹಸ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಅವಕಾಶ ಇದೆ. ವಯಸ್ಕರಿಗೆ ₹50 ಹಾಗೂ ಮಕ್ಕಳಿಗೆ ₹30 ಟಿಕೆಟ್‌ ಶುಲ್ಕ ನಿಗದಿ ಪಡಿಸಲಾಗಿದೆ. 

ಜಾರು ತಂತಿಯಲ್ಲಿ ಸವಾರಿ ಮಾಡುವವರ ಸುರಕ್ಷತೆಗೆ ಒತ್ತು ನೀಡಲಾಗಿದೆ.  ದೃಢವಾದ ಬೆಲ್ಟ್ ಮತ್ತು ಹೆಲ್ಮೆಟ್‌ ಧರಿಸಿಯೇ ಸವಾರಿ ಮಾಡಬೇಕು. 

ನಿಯಮ ಪಾಲನೆ ಕಡ್ಡಾಯ: ಜಿಪ್‌ಲೈನ್‌ ಸಾಹಸ ಮಾಡುವವರು ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ಕೋವಿಡ್ ಕಾರಣದಿಂದ ಕಾಮಗಾರಿ ಕೆಲ ತಿಂಗಳ ಕಾಲ ಸ್ಥಗಿತಗೊಂಡಿತ್ತು. ಈಗ ಎಲ್ಲ ಕೆಲಸ ಮುಕ್ತಾಯವಾಗಿದ್ದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದೇವೆ. ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಜಿಪ್‌ಲೈನ್‌ ಸಾಹಸಕ್ರೀಡೆ ಸೌಲಭ್ಯ ಕಲ್ಪಿಸಲಾಗಿದೆ. ಸಾಹಸ ಕ್ರೀಡೆಯನ್ನು ಇಷ್ಟ ಪಡುವವರೆಲ್ಲರೂ ಇದರ ಅನುಭವವನ್ನು ಪಡೆಯಬೇಕು’ ಎಂದು ಹೇಳಿದರು. 

ರೋಮಾಂಚಕ ಅನುಭವ

‘ನಮ್ಮ ಊರಿನಲ್ಲಿ ಇಂತಹ ಸಾಹಸ ಕ್ರೀಡೆ ಆರಂಭಿಸಿರುವುದು ಖುಷಿ ತಂದಿದೆ. ಕೋವಿಡ್ ಕಾರಣ ನಾವು ಯಾವ ಪ್ರವಾಸಿ ತಾಣಗಳಿಗೂ ಹೋಗುವುದಕ್ಕೆ ಆಗಿಲ್ಲ. ನಮ್ಮಲ್ಲೇ ಆರಂಭವಾಗಿರುವುದರಿಂದ ಮೊದಲ ದಿನವೇ ಈ ಕ್ರೀಡೆಯ ಅನುಭವ ಪಡೆದೆ. ರೋಮಾಂಚಕ ಅನುಭವವನ್ನು ಬಾಯಲ್ಲಿ ಹೇಳಲು ಸಾಧ್ಯವಿಲ್ಲ. ಅನುಭವಿಸಿಯೇ ತೀರಬೇಕು’ ಎಂದು ಸ್ಥಳೀಯ ಯುವಕ ಸಾಗರ್ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.