ಬುಧವಾರ, ಏಪ್ರಿಲ್ 14, 2021
28 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಸಮಸ್ಯೆಯ ಬಗ್ಗೆ ಗಮನಸೆಳೆದ ಹನೂರು ಭಾಗದ ಸದಸ್ಯರು

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹನೂರು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರವು ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. 

ಹನೂರು ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೇಖಾ, ಮರುಗದ ಮಣಿ, ಮಂಜುಳಾ, ಎಸ್‌.ಬಸವರಾಜು, ಇಷಾರತ್‌ ಬಾನು ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. 

ಮಾರ್ಟಳ್ಳಿ, ಸಂದನಪಾಳ್ಯ, ಒಡ್ಡರದೊಡ್ಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಕಷ್ಟಪಡುತ್ತಿದ್ದಾರೆ. ಸಂದನ ಪಾಳ್ಯ ಹಾಗೂ ಒಡ್ಡರದೊಡ್ಡಿಯಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲು ಆಡಳಿತಾತ್ಮಕ ಅನುಮತಿ ಮಂಜೂರಾಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 

ರಾಮಾಪುರ ಕ್ಷೇತ್ರದ ಸದಸ್ಯ ಎಸ್‌.ಬಸವರಾಜು ಅವರು ಮಾತನಾಡಿ, ‘ಕಾಡಂಚಿನ ಗ್ರಾಮಗಳಲ್ಲಿ ನೀರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಇರುವ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಬೇಸಿಗೆ ಈಗಷ್ಟೇ ಆರಂಭವಾಗಿದೆ. ಕ್ರಮ ಕೈಗೊಳ್ಳದೇ ಹೋದರೆ ಮುಂದೆ ಕಷ್ಟವಾಗಲಿದೆ’ ಎಂದರು.

ಕೌದಳ್ಳಿ ಕ್ಷೇತ್ರದ ಸದಸ್ಯೆ ಮಂಜುಳಾ ಅವರು ಕೌದಳ್ಳಿ ಹಾಗೂ ಗೋಪಿನಾಥಂ ಭಾಗದಲ್ಲಿರುವ ನೀರಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಮರುಗದ ಮಣಿ ಅವರು ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ, ಲೇಖಾ ಅವರು ಬಂಡಳ್ಳಿ ವ್ಯಾಪ್ತಿಯಲ್ಲಿ ಎದುರಾಗಿರುವ ಕುಡಿಯುವ ನೀರಿನ  ಕೊರತೆಯ ಬಗ್ಗೆ ಸಭೆಯ ಗಮನ ಸೆಳೆದರು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶಿವಶಂಕರ್‌ ಅವರು ಮಾತನಾಡಿ, ಗೋಪಿನಾಥಂ ಭಾಗದಲ್ಲಿ ₹3.5 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಾರ್ಟಳ್ಳಿ ಭಾಗದಲ್ಲಿ ಈಗ ಖಾಸಗಿಯವರಿಂದ ನೀರು ಪಡೆದು ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆಗಳು ಕಂಡು ಬರುವ ಕಡೆಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆಗಳು ಇಲ್ಲದ ಕಡೆಗಳಲ್ಲಿ ಹೊಸ ಯೋಜನೆ ಸಿದ್ಧಪಡಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು. 

ಜಲ ಜೀವನ್‌ ಮಿಷನ್ ಮೀಟರ್ ಅಳವಡಿಕೆ ಗೊಂದಲ: ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ, ಮನೆ ಮನೆಗೆ ನಲ್ಲಿ ನೀರು ಸಂಪರ್ಕಿಸುವ ಜಲ ಜೀವನ್‌ ಮಿಷನ್‌ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಗುಂಡ್ಲುಪೇಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಯೋಜನೆ ಅಡಿಯಲ್ಲಿ ನಲ್ಲಿಗೆ ಮೀಟರ್‌ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು ಪ್ರಸ್ತಾಪಿಸಿದರು. 

ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶಿವಶಂಕರ್‌ ಅವರು, ‘ಚಾಮರಾಜನಗರದ 48 ಗ್ರಾಮಗಳು ಹಾ‌ಗೂ ಗುಂಡ್ಲುಪೇಟೆಯ 12 ಗ್ರಾಮಗಳಲ್ಲಿ ಈಗ ಯೋಜನೆ ಜಾರಿಯಲ್ಲಿದೆ. ಗುಂಡ್ಲುಪೇಟೆಯಲ್ಲಿ ರೈತ ಸಂಘಟನೆಯವರು ಮೀಟರ್‌ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಏನೂ ಹೇಳಿಲ್ಲ. ಯೋಜನೆಯ ಬಗ್ಗೆ ಕೆಲವರಿಗೆ ತಪ್ಪು ಕಲ್ಪನೆ ಇದೆ. ಮೀಟರ್‌ ಅಳವಡಿಸಿದರೆ ಖಾಸಗೀಕರಣವಾಗುತ್ತದೆ. ಮುಂದೆ ನೀರಿಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ ಎಂಬುದು ವಿರೋಧಿಸುತ್ತಿರುವವರ ಅಭಿಪ್ರಾಯ. ನಾವು ಈಗಲೂ ಶುದ್ಧ ಕುಡಿಯುವ ನೀರಿಗೆ ಲೀಟರ್‌ಗೆ 2 ಪೈಸೆಯಂತೆ ಗ್ರಾಮ ಪಂಚಾಯಿತಿಗಳಿಗೆ ಬಿಲ್‌ ಹಾಕುತ್ತೇವೆ. ಆದರೆ, ಅದನ್ನು ವಸೂಲು ಮಾಡುತ್ತಿಲ್ಲ’ ಎಂದರು. 

ಗ್ರಾಮ ಪಂಚಾಯಿತಿಗೆ ಸಂಪೂರ್ಣ ಹೊಣೆ: ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಮಾತನಾಡಿ, ‘ಬಹುತೇಕ ಕೇಂದ್ರ ಸರ್ಕಾರದ ಅನುದಾನದಲ್ಲಿ ಜಾರಿಯಾಗುತ್ತಿರುವ ಯೋಜನೆ ಇದು. ಶೇ 10ರಷ್ಟು ವೆಚ್ಚನ್ನು ಸಮುದಾಯದವರಿಂದ ಸಂಗ್ರಹಿಸಲಾಗುತ್ತದೆ. ಒಂದು ವರ್ಷ ಅವರು ಉತ್ತಮವಾಗಿ ನಿರ್ವಹಣೆ ಮಾಡಿದರೆ ಆ ಹಣವನ್ನು ವಾಪಸ್‌ ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಗುಣಮಟ್ಟದ ಪೈಪ್‌ ಅಳವಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು. 

‘ಪ್ರತಿ ಮನೆಗೆ ಮೀಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಮೀಟರ್‌ ಅಳವಡಿಸಲೇಬೇಕಾಗುತ್ತದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ, ಇದರಿಂದ ಅನುಕೂಲವೂ ಇದೆ. ಕೆಲವು ಕಡೆಗಳಲ್ಲಿ ನೀರನ್ನು ಪೋಲು ಮಾಡಲಾಗುತ್ತಿದೆ. ಮೀಟರ್‌ ಅಳವಡಿಸಿದರೆ ಅಂತಹವರಿಗೆ ಜವಾಬ್ದಾರಿ ಬರುತ್ತದೆ. ಅಲ್ಲದೇ ನೀರಿನ ಬಳಕೆ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿಯೂ ಸಿಗುತ್ತದೆ. ನಾವು ಈಗಲೂ ನೀರಿನ ಬಳಕೆಗೆ ಬಿಲ್‌ ಹಾಕುತ್ತೇವೆ. ಆದರೆ ಅದನ್ನು ವಸೂಲಿ ಮಾಡಲು ಹೋಗುತ್ತಿಲ್ಲ. ಈ ಯೋಜನೆಯ ಸಂಪೂರ್ಣ ಹೊಣೆ ಗ್ರಾಮ ಪಂಚಾಯಿತಿಯದ್ದು. ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಪಂಚಾಯಿತಿಗೆ ಇದೆ. ಕುಡಿಯುವ ನೀರಿನ ಪೂರೈಕೆ ಸರ್ಕಾರದ ಆದ್ಯ ಕರ್ತವ್ಯವವಾಗಿದ್ದು, ಅದು ಖಾಸಗೀಕರಣ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. 

ಕೊಳ್ಳೇಗಾಲ: ಪ್ರಸೂತಿ ತಜ್ಞರ ನೇಮಿಸಲು ಒತ್ತಾಯ

ಆರೋಗ್ಯ ಇಲಾಖೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸದಸ್ಯೆ ಮರುಗದಮಣಿ ಅವರು, ‘ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಇಲ್ಲದೆ ನಮ್ಮ ಭಾಗದವರಿಗೆ ತುಂಬಾ ಕಷ್ಟವಾಗುತ್ತಿದೆ. ಹೆರಿಗೆ ಹಾಗೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರಬೇಕಾಗುತ್ತದೆ. ತಕ್ಷಣ ಅಲ್ಲಿ ತಜ್ಞರೊಬ್ಬರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ‘ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ಹೆರಿಗೆ ರಜೆಯಲ್ಲಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾದ ವೈದ್ಯರೊಬ್ಬರನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಕೊಳ್ಳೇಗಾಲದಲ್ಲಿ ಇನ್ನೊಂದು ಹುದ್ದೆ ಖಾಲಿ ಇದೆ’ ಎಂದರು. 

ಕೌದಳ್ಳಿ ಕ್ಷೇತ್ರದ ಮಂಜುಳಾ ಮಾತನಾಡಿ, ‘ಗೋಪಿನಾಥಂಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷ ಯೋಜನೆ ಅಡಿಯಲ್ಲಿ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಇದರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಸಿ.ರವಿ, ‘30 ಸಾವಿರ ಜನಸಂಖ್ಯೆ ಇದ್ದರೆ, ಪ್ರಾಥಮಿಕ ಕೇಂದ್ರ ಸ್ಥಾಪನೆಗೆ ಅವಕಾಶ ಇದೆ. ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಅನುಮತಿ ನೀಡಿದೆ. ಗೋಪಿನಾಥಂನಲ್ಲಿ ಆರೋಗ್ಯ ಉಪ ಕೇಂದ್ರ ಇದ್ದು, ಒಬ್ಬರು ಸಿಬ್ಬಂದಿ ಅಲ್ಲಿದ್ದಾರೆ. ಇನ್ನೊಬ್ಬರನ್ನು ಶೀಘ್ರದಲ್ಲಿ ನೇಮಿಸಲಾಗುವುದು’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು