ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಗಳ ಸ್ಥಿತಿಗತಿ ಸುಧಾರಣೆ ಆಗಲಿ: ಎಲ್. ನಾರಾಯಣಸ್ವಾಮಿ

ಚನ್ನಪಟ್ಟಣ ತಾಲ್ಲೂಕು ನ್ಯಾಯಾಲಯ ಕಟ್ಟಡ ಲೋಕಾರ್ಪಣೆ
Last Updated 2 ಫೆಬ್ರುವರಿ 2019, 14:51 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಕರ್ನಾಟಕವು ವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಲ್ಲಿನ ಬಹುತೇಕ ನ್ಯಾಯಾಲಯಗಳ ಕಟ್ಟಡಗಳು ಹಳೆಯದ್ದಾಗಿವೆ. ಇವುಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ ಇದೆ ಎಂದು ರಾಜ್ಯ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹೇಳಿದರು.

ಚನ್ನಪಟ್ಟಣದ ತಾಲ್ಲೂಕು ನ್ಯಾಯಾಲಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾಕಷ್ಟು ನ್ಯಾಯಾಲಯ ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿದ್ದು, ಹೊಸ ಭವನಗಳ ನಿರ್ಮಾಣದ ಅವಶ್ಯಕತೆ ಇದೆ ಎಂದು ಸರ್ಕಾರದ ಗಮನ ಸೆಳೆದರು.

ಇಲ್ಲಿನ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿರುವ ಭೂಮಿಯ ಸಲುವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದು ವಿಷಾದನೀಯ. ವಕ್ಫ್ ಮಂಡಳಿ ತಾನಾಗಿಯೇ ಜಮೀನು ಬಿಟ್ಟು ಕೊಟ್ಟು ಔದಾರ್ಯ ಮೆರೆಯಬೇಕು ಎಂದು ಸಲಹೆ ನೀಡಿದರು.

ಫ್ಲೆಕ್ಸ್ ಸಂಸ್ಕೃತಿ ಬಿಡಿ: ಜನರು ಕಂಡ ಕಂಡ ಜಾಗಗಳಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕುವ ವಿಕೃತಿಯನ್ನು ಇನ್ನಾದರೂ ಬಿಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಹೈಕೋರ್ಟಿನ ಧೃಢ ನಿರ್ಧಾರ ದಿಂದ ಇಂದು ಬೆಂಗಳೂರು ಸ್ವಚ್ಛ ನಗರಿಯಾಗಿದೆ. ಆದರೆ ರಾಮನಗರ ಜಿಲ್ಲೆಯಾದ್ಯಂತ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಇಲ್ಲಿನ ಅಂದ ಹದಗೆಡಿಸುತ್ತಿದೆ. ಶಿವಕುಮಾರ ಶ್ರೀಗಳು, ಗಾಂಧೀಜಿಯಂತಹ ನೇತಾರರ ಚಿತ್ರಗಳನ್ನು ಹಾಕೋಣ. ಆದರೆ ನಮ್ಮ-ನಿಮ್ಮ ಚಿತ್ರಗಳು ಬೇಡ ಎಂದು ಸೂಚಿಸಿದರು.

ನಿರ್ಮಾಣಕ್ಕೆ ನೆರವು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ ‘ರಾಜ್ಯದಲ್ಲಿ ಒಟ್ಟು 1307 ನ್ಯಾಯಾಲಯಗಳು ಇದ್ದು, ಅವುಗಳಲ್ಲಿ ಶೇ 60ರಷ್ಟು ಮಾತ್ರ ಉತ್ತಮ ಕಟ್ಟಡ ಹೊಂದಿವೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರವು ಹಂತಹಂತವಾಗಿ ಅನುದಾನ ನೀಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆಂದೇ ₹ 1617 ಕೋಟಿ ವ್ಯಯಿಸಿದೆ’ ಎಂದು ಮಾಹಿತಿ ನೀಡಿದರು.

ಸರ್ಕಾರವು ಈಚೆಗೆ 43 ಹೊಸ ನ್ಯಾಯಾಲಯಗಳ ಆರಂಭಕ್ಕೆ ಅನುಮೋದನೆ ನೀಡಿದ್ದು, ಇದರಲ್ಲಿ 13 ಕೌಟುಂಬಿಕ ನ್ಯಾಯಾಲಯಗಳು ಸೇರಿವೆ. ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಮೂರು ವಾಣಿಜ್ಯ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

‘ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆಯು ಧೃಢವಾಗಿರುವ ಕಾರಣದಿಂದಲೇ ಇಲ್ಲಿ ಪ್ರಜಾಪ್ರಭುತ್ವವು ಗಟ್ಟಿಯಾಗಿ ಬೇರೂರಲು ಸಾಧ್ಯವಾಗಿದೆ. ಕಟ್ಟಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬುದು ಸಂವಿಧಾನ ಮತ್ತು ನ್ಯಾಯಾಲಯಗಳ ಆಶಯವಾಗಿದೆ’ ಎಂದರು.

‘ಹೊಸತಾಗಿ ನೋಂದಣಿ ಮಾಡಿಕೊಳ್ಳುವ ವಕೀಲರಿಗೆ ಸರ್ಕಾರವು ತಿಂಗಳಿಗೆ ₹ 2 ಸಾವಿರದಂತೆ 24 ತಿಂಗಳ ಕಾಲ ಪ್ರೋತ್ಸಾಹ ಧನ ನೀಡುತ್ತಿದೆ. ಇದನ್ನು ತಿಂಗಳಿಗೆ ₹ 5 ಸಾವಿರದಂತೆ 5 ವರ್ಷಕ್ಕೆ ವಿಸ್ತರಿಸುವ ಪ್ರಸ್ತಾಪ ಇಡಲಾಗಿದ್ದು, ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಹುಲುವಾಡಿ ರಮೇಶ್ ಮಾತನಾಡಿ ‘ನ್ಯಾಯಾಧೀಶರು, ವಕೀಲರು ಸಮಯೋಚಿತ ನ್ಯಾಯದಾನದ ಮೂಲಕ ಕಕ್ಷಿದಾರರ ಅಲೆದಾಟವನ್ನು ತಪ್ಪಿಸಬೇಕು. ರಾಜೀ ಸಂಧಾನಗಳ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಂಸದ ಡಿ.ಕೆ. ಸುರೇಶ್‌ ಮಾತನಾಡಿ ‘ನ್ಯಾಯದಾನ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಗ್ರಾಮೀಣ ಜನರು ನ್ಯಾಯಾಲಯಗಳ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಧೀಶರು ಮಾರ್ಗಸೂಚಿ ರೂಪಿಸಬೇಕು’ ಎಂದು ಮನವಿ ಮಾಡಿದರು.

‘ನ್ಯಾಯಾಂಗ ಕ್ಷೇತ್ರಕ್ಕೂ ಹಸ್ತಕ್ಷೇಪ ಮಾಡುವ ಪ್ರಯತ್ನ ಕೆಲವೆಡೆ ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಕಳುಹಿಸಿದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಪೂರ್ಣವಾಗಿ ಅನುಷ್ಠಾನಕ್ಕೆ ತರದಿರುವುದು ಇದಕ್ಕೆ ಉದಾಹರಣೆ’ ಎಂದು ಕಳವಳ ವ್ಯಕ್ತಪಡಿಸಿದರು.

ಚನ್ನಪಟ್ಟಣ ತಾಲ್ಲೂಕು ನ್ಯಾಯಾಲಯದ ಗ್ರಂಥಾಲಯಕ್ಕೆ ₹ 10 ಲಕ್ಷ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಮನಗರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಮಾತನಾಡಿ ‘ಶೇ 80ರಷ್ಟು ಪ್ರಕರಣಗಳು ನ್ಯಾಯಾಲಯಗಳ ಹೊರಗೇ ತೀರ್ಮಾನ ಆಗುತ್ತಿದೆ. ನ್ಯಾಯಾಲಯಗಳಿಗೆ ಬರುವವರನ್ನು ತಡೆಯಬಾರದು’ ಎಂದು ಸಲಹೆ ನೀಡಿದರು.

ಹೈಕೋರ್ಟ್‌ನ ಮಹಾ ವಿಲೇಖನಾಧಿಕಾರಿ ವಿ. ಶ್ರೀಶಾನಂದ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ರವೀಂದ್ರ ಬಾಬು, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಕೆ.ಟಿ. ತಿಮ್ಮೇಗೌಡ ಇದ್ದರು. ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಂ.ಜಿ. ಉಮಾ ಸ್ವಾಗತಿಸಿದರು. ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ವಕೀಲರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಕೆರೆ ತುಂಬಿಸಲು ಕಾರಣ ರಮೇಶ್‌’
‘ಚನ್ನಪಟ್ಟಣದ ಕೆರೆಗಳನ್ನು ತುಂಬಿಸಲು ಮೂಲ ಕಾರಣ ಇಲ್ಲಿನವರೇ ಆದ ಹುಲುವಾಡಿ ರಮೇಶ್‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ‘ಕೆಲವರು ನಾನೇ ತುಂಬಿಸಿದ್ದು ಎಂದು ಬೋರ್ಡು ಹಾಕಿಕೊಳ್ಳುತ್ತಾರೆ’ ಎಂದು ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್‌ಗೆ ಟಾಂಗ್‌ ನೀಡಿದರು.

‘ಕನಕಪುರದಲ್ಲಿ ₹ 34 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಸಂಸತ್‌ ಚುನಾವಣೆ ಘೋಷಣೆಗೆ ಮುನ್ನ ಅದಕ್ಕೆ ಚಾಲನೆ ನೀಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಮನವಿ ಮಾಡಿದರು.

ಮುಖ್ಯಮಂತ್ರಿ ಗೈರು: ಡಿಕೆಶಿ ಸಮರ್ಥನೆ
ತಮ್ಮದೇ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗೈರಾದರು. ‘ಕೇಂದ್ರ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಕೆಲವು ಬದಲಾವಣೆಗಳು ನಡೆದಿದೆ. ಈ ತುರ್ತು ಕೆಲಸದಿಂದಾಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.

ಏಳು ವರ್ಷದ ಬಳಿಕ ಉದ್ಘಾಟನೆ
ಚನ್ನಪಟ್ಟಣ ನ್ಯಾಯಾಲಯ ಕಟ್ಟಡ ಕಾಮಗಾರಿಯು 2012ರಲ್ಲಿ ಆರಂಭಗೊಂಡು, 2019ರಲ್ಲಿ ಉದ್ಘಾಟನೆಗೊಂಡಿದೆ. ಇದಕ್ಕಾಗಿ ₹ 15.48 ಕೋಟಿ ವ್ಯಯಿಸಲಾಗಿದೆ.

ಕಟ್ಟಡವು ಒಟ್ಟು 5136 ಚ.ಮೀ. ವಿಸ್ತೀರ್ಣ ಹೊಂದಿದ್ದು, ಎರಡು ಅಂತಸ್ತುಗಳಿಂದ ಕೂಡಿದೆ. ನ್ಯಾಯಾಲಯ ಕೊಠಡಿಗಳು, ನ್ಯಾಯಾಧೀಶರ ಕೊಠಡಿಗಳು, ಗ್ರಂಥಾಲಯ, ವಕೀಲರ ಸಂಘದ ಕಚೇರಿ, ನೋಟರಿ, ಕಂಪ್ಯೂಟರ್ ಕೊಠಡಿ, ಲೆಕ್ಕ ಶಾಖೆ, ಎಪಿಪಿ ಕೊಠಡಿ, ಸಂಧಾನ ಸಭಾಂಗಣ ಹಾಗೂ ಶೌಚಾಲಯಗಳಿವೆ. ಸೋಮವಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಇದೇ ಕಟ್ಟಡದಲ್ಲಿ ನಡೆಯಲಿವೆ.

*ಇಲ್ಲಿ ನಿರ್ಮಾಣವಾಗಿರುವ ನ್ಯಾಯಾಲಯ ಕಟ್ಟಡ ಎಲ್ಲ ಜಾತಿ–ಧರ್ಮದವರಿಗೆ ಸೇರಿದ್ದು. ಇದಕ್ಕೆ ವಕ್ಫ್ ಮಂಡಳಿ ತಾನಾಗಿಯೇ ಜಮೀನು ಬಿಟ್ಟು ಕೊಟ್ಟು ಔದಾರ್ಯ ಮೆರೆಯಬೇಕು
–ಎಲ್‌. ನಾರಾಯಣಸ್ವಾಮಿ,ಹಂಗಾಮಿ ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್‌

* ನ್ಯಾಯಾಧೀಶರು ಪ್ರಕರಣಗಳಲ್ಲಿ ಶೀಘ್ರ ನ್ಯಾಯದಾನ ಮಾಡಬೇಕು. ಆಗ ನ್ಯಾಯಾಲಯಗಳ ಘನತೆ ಇನ್ನಷ್ಟು ಹೆಚ್ಚುತ್ತದೆ
ಕೆ.ಎನ್. ಫಣೀಂದ್ರ,ಆಡಳಿತಾತ್ಮಕ ನ್ಯಾಯಮೂರ್ತಿ, ರಾಮನಗರ ಜಿಲ್ಲೆ

*ಜನರು ಆದಷ್ಟು ಪ್ರಕರಣಗಳನ್ನು ನ್ಯಾಯಾಲಯಗಳ ಹೊರಗೆ ಬಗೆಹರಿಸಿಕೊಳ್ಳಬೇಕು. ಕೋರ್ಟ್ ಮೆಟ್ಟಿಲು ಏರುವುದನ್ನು ಕಡಿಮೆ ಮಾಡಬೇಕು
ಹುಲುವಾಡಿ ರಮೇಶ್‌,ನ್ಯಾಯಮೂರ್ತಿ, ಮಧ್ಯಪ್ರದೇಶ ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT