ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ₹10 ಲಕ್ಷ ಮೌಲ್ಯದ ಗಾಂಜಾ ವಶ; ಬಂಧನ

Last Updated 9 ಸೆಪ್ಟೆಂಬರ್ 2020, 3:07 IST
ಅಕ್ಷರ ಗಾತ್ರ

ಚಿಂತಾಮಣಿ: ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ 32 ಕೆ.ಜಿ.ಗಾಂಜಾವನ್ನು ನಗರಠಾಣೆ ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಂಬಾಳಪಲ್ಲಿ ತಾಲ್ಲೂಕಿನ ಗುಂತೂರು ಗ್ರಾಮದ ಶಂಕರ್, ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯ ಮಸೀದಿ ಬಳಿಯ ನಿವಾಸು ಶಾಬಾಜ್ ಬಂಧಿತರು. ಸುಮಾರು ₹10 ಲಕ್ಷ ಮೌಲ್ಯದ
32 ಕೆ.ಜಿ. ಗಾಂಜಾ ಹಾಗೂ ₹3 ಲಕ್ಷ ಬೆಲೆ ಬಾಳುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ಕಾರಿನಲ್ಲಿ ಗಾಂಜಾ ಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಇನ್‌ಸ್ಪೆಕ್ಟರ್ ಜೆ.ಆನಂದಕುಮಾರ್, ಸಬ್ಇನ್‌ಸ್ಪೆಕ್ಟರ್‌ಗಳಾದ ನಾರಾಯಣಸ್ವಾಮಿ, ಸತೀಶ್ ಮತ್ತು ಸಿಬ್ಬಂದಿ ಸೋಮವಾರ ಸಂಜೆ ನಗರದ ರಾಮಕುಂಟೆ ಬಳಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಕಾರಿನ ಹಿಂಭಾಗದ ಸೀಟ್‌ನಲ್ಲಿ ಬ್ಯಾಗ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ತಿಳಿಸಿದರು.

ಇಬ್ಬರು ಆರೋಪಿಗಳು ಹಿಂದೆಯೂ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಗಾಂಜಾ ಸಾಗಣೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎನ್‌ಸಿಬಿ ಗಮನಕ್ಕೂ ತರಲಾಗಿದೆ. ಎಲ್ಲಿಂದ, ಯಾರು ಸಾಗಿಸುತ್ತಿದ್ದರು. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಜಂಟಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ವಾರದಿಂದ 4 ಪ್ರಕರಣಗಳು ನಡೆದಿದ್ದು, ಒಟ್ಟು 40 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಾಗೇಪಲ್ಲಿ, ಬಟ್ಲಹಳ್ಳಿಯಲ್ಲಿ ತಲಾ 1 ಹಾಗೂ ಚಿಂತಾಮಣಿಯಲ್ಲಿ 2 ಪ್ರಕರಣಗಳು ನಡೆದಿವೆ. ನೆರೆಯ ಆಂಧ್ರಪ್ರದೇಶದಿಂದ ಗಾಂಜಾ ಮತ್ತಿತರ ಮಾದಕವಸ್ತುಗಳ ಸಾಗಣೆಗೆ ಕಡಿವಾಣ ಹಾಕಲು 4-5 ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು. ಶ್ವಾನದಳ ಬಳಸಿಕೊಂಡು ಸಾರ್ವಜನಿಕ ವಾಹನ ಮತ್ತು ಗೂಡ್ಸ್ ಸಾಗಾಣಿಕೆಯ ವಾಹನಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಡಿವೈಎಸ್ಪಿ ಲಕ್ಷ್ಮಯ್ಯ, ಇನ್‌ಸ್ಪೆಕ್ಟರ್ ಜೆ.ಆನಂದಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT