ಶುಕ್ರವಾರ, ಆಗಸ್ಟ್ 6, 2021
25 °C
ಹಾಲು ಉತ್ಪಾದಕರಿಗೆ ಆಹಾರದ ಕಿಟ್‌ ವಿತರಣೆ

ಮುನುಗನಹಳ್ಳಿ: ಕೋಚಿಮುಲ್‌ಗೆ ₹ 18 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ತಾವೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ವೈ.ವಿ. ಅಶ್ವತ್ಥನಾರಾಯಣಬಾಬು ಸಲಹೆ ನೀಡಿದರು.

ತಾಲ್ಲೂಕಿನ ಮುನುಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉತ್ಪಾದಕರಿಗೆ ಉಚಿತವಾಗಿ ಅಕ್ಕಿ ಮತ್ತು ದಿನಸಿ ಪದಾರ್ಥ ವಿತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಒಟ್ಟು 237 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅನೇಕ ಸಂಘಗಳು ಆರ್ಥಿಕವಾಗಿ ಬೆಳೆದು ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಮಾಡಿದ್ದಾರೆ. ಗುಣಮಟ್ಟದ ಹಾಲು ನೀಡಿದರೆ ಮಾತ್ರ ಸಂಘ ಉಳಿಯಲು ಹಾಗೂ ಉತ್ಪಾದಕರು ಬದುಕಲು ಸಾಧ್ಯವಾಗುತ್ತದೆ. ಆಹಾರ ಭದ್ರತಾ ಸುರಕ್ಷತಾ ಕಾಯ್ದೆ ಜಾರಿಗೆ ಬಂದ ಮೇಲೆ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಸಂಸ್ಕರಣೆ ಮಾಡಿದ ಹಾಲನ್ನು ಟೆಟ್ರಾಪ್ಯಾಕ್ ಮೂಲಕ ಪೂರೈಸಲು ಯೋಜನೆ ರೂಪಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಸುಮಾರು 2,500 ಸಂಘಗಳಿವೆ. ಇವು ಸದೃಢವಾಗಿ ಮುಂದುವರಿದರೆ ಮಾತ್ರ ಉತ್ಪಾದಕರ ಜೀವನ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.

ಒಕ್ಕೂಟದಿಂದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಬೆಂಗಳೂರಿನಲ್ಲಿ ಹಾಸ್ಟೆಲ್ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ಗಂಡು ಮಕ್ಕಳಿಗೂ ವಿದ್ಯಾರ್ಥಿನಿಲಯ ಸ್ಥಾಪಿಸಲಾಗುವುದು. ವಿದ್ಯಾರ್ಥಿವೇತನ ಸೇರಿದಂತೆ ಇನ್ನೂ ಹಲವಾರು ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್ ಮಹಾಮಾರಿಯಿಂದ ರೈತರು ತರಕಾರಿ ಬೆಳೆದು ಸರಿಯಾದ ಬೆಲೆ ಸಿಗದೆ ತೊಂದರೆಗೀಡಾಗಿದ್ದಾರೆ. ಹೈನುಗಾರಿಕೆಗೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಒಕ್ಕೂಟದ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದಿನಕ್ಕೆ ₹ 3 ಕೋಟಿ ಬಟವಾಡೆಯಾಗುತ್ತಿದೆ. ಒಕ್ಕೂಟ ₹ 18 ಕೋಟಿ ನಷ್ಟದಲ್ಲಿದ್ದರೂ ಉತ್ಪಾದಕರನ್ನು ಮಾತ್ರ ಕೈಬಿಡಲಿಲ್ಲ ಎಂದರು.

ತಾಲ್ಲೂಕಿನಲ್ಲಿ ಪ್ರತಿದಿನ 1.10 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, 2 ಜಿಲ್ಲೆಯಲ್ಲಿ 12 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಕೋವಿಡ್ ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದೆ ಕೋಟ್ಯಂತರ ರೂಪಾಯಿ ಬೆಲೆಯ ಹಾಲಿನಪುಡಿ, ಬೆಣ್ಣೆ, ತುಪ್ಪ ಇನ್ನಿತರೆ ಹಾಲಿನ ಉತ್ಪನ್ನಗಳು ಗೋದಾಮಿನಲ್ಲಿ ಶೇಖರಣೆ ಮಾಡಲಾಗಿದೆ. ಹೊರ ಪ್ರದೇಶಕ್ಕೆ ಸರಬರಾಜು ಆಗದ ಕಾರಣ ಪದಾರ್ಥಗಳು ಗೋದಾಮಿನಲ್ಲಿ ಸಂಗ್ರಹಣೆಯಾಗಿದ್ದು ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ನಾಗಿರೆಡ್ಡಿ ಮಾತನಾಡಿ, ಉತ್ಪಾದಕರು ಹಸುವಿಗೆ ವಿಮೆ ಮಾಡಿಸಿಕೊಳ್ಳಬೇಕು. ಆಕಸ್ಮಿಕವಾಗಿ ತೊಂದರೆಯಾದಾಗ ನೆರವಾಗುತ್ತದೆ. ನಾವು ಕೂಡ ಗ್ರಾಮದಲ್ಲಿ ಕೋವಿಡ್ ಸಮಯದಲ್ಲಿ ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ನಾವು ಇರುತ್ತೇವೆ. 2ನೇ ಅಲೆ ಹೊರಟು ಹೋಗಿದೆ ಎಂಬ ತಪ್ಪು ಭಾವನೆ ಬೇಡ. ಮಾರ್ಗಸೂಚಿ ಪಾಲಿಸಿಕೊಂಡು ಜಾಗೃತರಾಗಿರಿ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್. ಕೃಷ್ಣಾರೆಡ್ಡಿ ಅಧ್ಯಕ್ಷತೆವಹಿಸಿದ್ದರು. ಉಪ ನಿರ್ದೇಶಕ ಡಾ.ಪಾಪೇಗೌಡ, ವಿಸ್ತರಣಾಧಿಕಾರಿ ವೆಂಕಟೇಶಮೂರ್ತಿ, ಎಂ.ಎಸ್. ನಾರಾಯಣಸ್ವಾಮಿ, ಸಂಘದ ಉಪಾಧ್ಯಕ್ಷ ವಿ. ಶ್ರೀನಿವಾಸರೆಡ್ಡಿ, ನಿರ್ದೇಶಕರಾದ ಮುನಿವೆಂಕಟರೆಡ್ಡಿ, ಚಂದ್ರಶೇಖರ್, ರವೀಂದ್ರ, ಎಂ.ಎ. ಕೃಷ್ಣಪ್ಪ, ವಿ. ಕೆಂಪರೆಡ್ಡಿ, ಶ್ರೀನಿವಾಸ್, ದೇವರಾಜು, ಮುನಿವೆಂಕಟಮ್ಮ, ಚಂದ್ರಮ್ಮ, ರವೀಂದ್ರ, ಕಾರ್ಯದರ್ಶಿ ಎಸ್. ಸುಬ್ರಮಣ್ಯಂ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು