ಸೋಮವಾರ, ಆಗಸ್ಟ್ 8, 2022
24 °C
ಕೊರೊನಾ ಸೋಂಕಿನಿಂದ ವರ್ಷವಿಡೀ ಮಕ್ಕಳಿಗೆ ರಜೆಯ ಅನುಭವ

ಬಾಲ್ಯ ಲೋಕದ ಚಿಣ್ಣರ ಆಟಪಾಠ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಹಳ್ಳಿಯ ಬದುಕೇ ಚೆಂದ. ನಗರ ಪ್ರದೇಶದ ಆಧುನಿಕತೆಯ ಥಳುಕು ಬಳುಕಿಲ್ಲದಿದ್ದರೂ ಗ್ರಾಮ್ಯ ಭಾಗದ ಸ್ವಚ್ಛ ಪರಿಸರದ ಜೀವನ ಮನಸ್ಸಿಗೆ ಹಿತ ನೀಡುತ್ತದೆ. ಬಹುತೇಕರ ಬದುಕಿನಲ್ಲಿ ಹಳ್ಳಿ ಜೊತೆ ಸಂಬಂಧ ಇದ್ದೇ ಇರುತ್ತದೆ. ಹಳ್ಳಿಗಳಲ್ಲಿ ಎಲ್ಲರಲ್ಲೂ ಸಿರಿವಂತಿಕೆ ಇಲ್ಲದೇ ಇರಬಹುದು. ಆದರೆ, ಇಲ್ಲಿ ಖುಷಿಗೇನು ಕೊರತೆ ಇಲ್ಲ.

ಕೊರೊನಾ ಎರಡನೇ ಅಲೆ, ಲಾಕ್‌ಡೌನ್ ಮುಂತಾದ ಸಂಕಷ್ಟದ ನಡುವೆ ಹಳ್ಳಿಯ ಮಕ್ಕಳ ಆಟಗಳನ್ನು ಕಂಡಾಗ ಬದುಕು ಎಷ್ಟು ಸುಂದರ ಎಂಬ ಭಾವ ಮೂಡುತ್ತದೆ. ಈ ಮಕ್ಕಳು ಸಿಕ್ಕ ಅತ್ಯಲ್ಪ ಪರಿಕರ ಬಳಸಿಕೊಂಡು ತಮ್ಮದೇ ಖುಷಿಯ ಆಟ ಆಡುತ್ತಾರೆ. ಈ ಮೂಲಕ ಜಗತ್ತನ್ನೇ ಮರೆಯುತ್ತಾರೆ. ಇವರಲ್ಲಿ ಅತಿಯಾದ ಸಿರಿವಂತಿಕೆ ಇಲ್ಲದೇ ಇರಬಹುದು. ನಗರ ಪ್ರದೇಶದ ಮಕ್ಕಳಿಗಿರುವಂತಹ ಸೌಲಭ್ಯಗಳೂ ಇಲ್ಲದಿರಬಹುದು. ಆದರೆ, ಅದಕ್ಕವರು ಕೊರಗುವುದಿಲ್ಲ. ಬದಲಾಗಿ ತಾವು ಇರುವ ಜಾಗದಲ್ಲೇ ಇವರು ಖುಷಿಯಿಂದ ಆಟ ಆಡುತ್ತಾರೆ.

ಹಲವಾರು ಹಳ್ಳಿಗಳಲ್ಲಿ ಮಕ್ಕಳ ಆಟಗಳನ್ನು ಕಂಡ ಬಹುತೇಕ ಹಿರಿಯರಿಗೆ ತಮ್ಮ ಬಾಲ್ಯದ ದಿನಗಳು ಸ್ಮೃತಿಪಟಲದ ಮುಂದೆ ಹಾದು ಹೋಗುತ್ತವೆ. ಆ ದಿನಗಳು ಎಷ್ಟು ಚೆನ್ನಿತ್ತು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾರೆ.

ಹೆಚ್ಚೂಕಡಿಮೆ ಈ ವರ್ಷವಿಡೀ ಶಾಲೆ ನಡೆಯಲೇ ಇಲ್ಲ. ಆನ್‌ಲೈನ್ ಎಲ್ಲ ಮಕ್ಕಳನ್ನೂ, ಅದರಲ್ಲೂ ಹಳ್ಳಿ ಮಕ್ಕಳನ್ನು ತಲುಪಲಿಲ್ಲ. ದಸರೆ, ಬೇಸಿಗೆಯಲ್ಲಷ್ಟೇ ಮಕ್ಕಳಿಗೆ ದೀರ್ಘ ರಜೆ ಸಿಗುತ್ತಿತ್ತು. ಈಗ ವರ್ಷವಿಡೀ ಕೋವಿಡ್ ಕಾರಣದಿಂದ ರಜೆ ವಿಸ್ತರಣೆಯಾಗಿದೆ.

ಮಕ್ಕಳಿಗೆ ಆಟಗಳ ಬಗ್ಗೆ ಅನ್ವೇಷಣೆ ಮಾಡುವಂತೆ ಈ ರಜೆಯು ಪ್ರೇರೇಪಿಸಿದೆ. ನಗರ ಮಕ್ಕಳಾದರೆ ಮೊಬೈಲ್‌ನಲ್ಲಿನ ಆಟದಲ್ಲಿ ತಲ್ಲೀನರಾದರೆ, ಹಳ್ಳಿಗಳಲ್ಲಿ ಸಿಕ್ಕಸಿಕ್ಕ ವಸ್ತುಗಳೆಲ್ಲ ಆಟಕ್ಕೆ ಬಳಕೆಯಾದವು. ಕೆಲವು ಮಕ್ಕಳು ತಮ್ಮ ಹೊಲ, ತೋಟಗಳಲ್ಲಿ, ಮನೆಗೆಲಸಗಳಲ್ಲಿ ಹಿರಿಯರಿಗೆ ನೆರವಾಗುವುದರ ಜೊತೆಗೆ ತಮ್ಮದೇ ಆದ ಆಟ ಆಡುವುದನ್ನು ರೂಢಿಸಿಕೊಂಡರು.

‘ಕೋವಿಡ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹಳ್ಳಿಯ ಹುಡುಗರು ಬಿಂದಾಸ್ ಆಗಿ ಬಾಲ್ಯ ಕಳೆಯುತ್ತಿದ್ದಾರೆ. ಇದು ಒಂದು ಹಳ್ಳಿಗೆ ಸೀಮಿತವಾದ ಉದಾಹರಣೆಯಲ್ಲ. ಹಳ್ಳಿಗಳಲ್ಲಿ ಮಕ್ಕಳು ಎಂದಿನಂತೆ ತಮ್ಮ ಸಹಜ ದಿನಗಳನ್ನು ಆಟ, ಊಟ, ಪಾಠ, ತಮಾಷೆ, ಕಾಲೆಳೆಯುವಿಕೆಯಲ್ಲಿ ಬಾಲ್ಯದ ಸಂಭ್ರಮ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಗೌಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಎಂ. ದೇವರಾಜ್.

ಗ್ರಾಮೀಣ ಪ್ರದೇಶದ ಮಕ್ಕಳು ಈಗಲೂ ತಮ್ಮ ಬಾಲ್ಯದ ದಿನಗಳನ್ನು ಕಳೆದುಕೊಂಡಿಲ್ಲ. ಲಗೋರಿ, ಗೋಲಿ, ಚಿನ್ನಿದಾಂಡ, ಕುಂಟೆಪಿಲ್ಲೆ, ಬುಗುರಿ, ಕಣ್ಣಮುಚ್ಚಾಲೆ, ಚನ್ನಮಣೆ ಮತ್ತು ಮರಕೋತಿಯಾಟ ಹೀಗೆ ಹಲವಾರು ಆಟಗಳನ್ನು ಆಡಿ ಹಳ್ಳಿ ಸೊಬಗಿನ ಸಂಭ್ರಮ ಹೆಚ್ಚಿಸುತ್ತಿದ್ದಾರೆ.

ಗ್ರಾಮೀಣ ಪೋಷಕರು ಸ್ಥಿತಿವಂತರಾಗಿರುವುದಿಲ್ಲ. ಆದ್ದರಿಂದ ಅವರಿಗೆಲ್ಲ ತಮ್ಮೂರಿನ ಅಥವಾ ಸುತ್ತಲಿನ ಊರುಗಳ ಸರ್ಕಾರಿ ಶಾಲೆಗಳೇ ಆಸರೆ. ಕೋವಿಡ್‌ ಇಲ್ಲದ ಕಾಲದಲ್ಲಿಯೂ ಶಾಲೆ ಮುಗಿಸಿಕೊಂಡು ಬಂದ ಬಳಿಕ ಅವರ ಬಾಲ್ಯದ ಲೋಕ ಆಟದತ್ತಲೇ ಹೊರಳುತ್ತದೆ. ಕೋವಿಡ್ ಇದ್ದರೂ, ಇಲ್ಲದಿದ್ದರೂ ಈ ‘ಬಾಲ್ಯದ ಲೋಕ’ ಯಾವಾಗಲೂ ಬದಲಾಗುವುದೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವರು ತಮ್ಮ ಬಾಲ್ಯದ ದಿನಗಳನ್ನು ಸುಂದರಗೊಳಿಸಿಕೊಂಡು ಸವಿನೆನಪುಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು