ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಉಪನ್ಯಾಸಕರಿಲ್ಲದೆ ನಡೆಯದ ಪಾಠ

ಸಾವಯವ ರಸಾಯನ ವಿಜ್ಞಾನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಳಲು
Last Updated 9 ಫೆಬ್ರುವರಿ 2023, 5:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸ್ನಾತಕೋತ್ತರ ಪದವಿಯ ಕೇಂದ್ರದಲ್ಲಿನ ಆರ್ಗ್ಯಾನಿಕ್ ಕೆಮಿಸ್ಟ್ರಿ ಸ್ನಾತಕೋತ್ತರ ತರಗತಿಗಳು ಕಳೆದ 15 ದಿನಗಳಿಂದಲೂ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.

ಸ್ನಾತಕೋತ್ತರ ಪದವಿ ಮತ್ತು ಪದವಿ ಸೇರಿ ಈ ವಿಭಾಗದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸ್ನಾತಕೋತ್ತರ ಪದವಿಯ ಮೊದಲ ಮತ್ತು ಎರಡನೇ ವರ್ಷದ ತರಗತಿಗಳಲ್ಲಿ ತಲಾ 30 ವಿದ್ಯಾರ್ಥಿಗಳು ಇದ್ದಾರೆ. ಈ ಹಿಂದೆ ವಿಭಾಗದಲ್ಲಿ ಅತಿಥಿ ಉಪನ್ಯಾಸಕರು ಮತ್ತು ಮೂವರು ಕಾಯಂ ಉಪನ್ಯಾಕರು ಕೆಲಸ ಮಾಡುತ್ತಿದ್ದರು.

ಅತಿಥಿ ಉಪನ್ಯಾಸಕರಿಗೆ ಕೌನ್ಸೆಲಿಂಗ್ ನಡೆಯುತ್ತಿರುವ ಕಾರಣ ಅವರು ಪಾಠ ಬೋಧಿಸಲು ಬರುತ್ತಿಲ್ಲ. ಇನ್ನೊಂದೆಡೆ ಕಾಲೇಜಿನಲ್ಲಿ ಇದ್ದ ಮೂವರು ಕಾಯಂ ಉಪನ್ಯಾಸಕರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ 15 ದಿನಗಳಿಂದ ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ವಾಪಸ್ ಹೋಗುವುದೇ ಆಗಿದೆ.

ಕಾಯಂ ಉಪನ್ಯಾಸಕರನ್ನು ನಿಯೋಜಿಸುವಂತೆ ಬುಧವಾರ ಸಚಿವ ಡಾ.ಕೆ.ಸುಧಾಕರ್ ಅವರಿಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ‘ನಮ್ಮ ವಿಭಾಗದ ಕಾಯಂ ಉಪನ್ಯಾಸಕರು ವರ್ಗಾವಣೆ ಆಗಿದ್ದಾರೆ. 15 ‌ದಿನಗಳಿಂದ ತರಗತಿಗಳು ನಡೆದಿಲ್ಲ. ವ್ಯಾಸಂಗಕ್ಕೆ ತೊಂದರೆಯಾಗಿದೆ. ವರ್ಗಾವಣೆಯಾದ ಉಪನ್ಯಾಸರಲ್ಲಿ ಒಬ್ಬರನ್ನು ಇಲ್ಲಿಯೇ ನಿಯೋಜಿಸಬೇಕು. ಹೊಸದಾಗಿ ಕಾಯಂ ಉಪನ್ಯಾಸಕರನ್ನು ನೇಮಿಸಬೇಕು’ ಎಂದು ಮನವಿಯಲ್ಲಿ ಕೋರಿದ್ದಾರೆ.

‘ನಿಮ್ಮ ಮನವಿಯ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಮಾಹಿತಿ ನೀಡುತ್ತೇನೆ. ಸಮಸ್ಯೆ ಸರಿಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

‘ಮುಂದಿನ 40 ದಿನಗಳಲ್ಲಿ ಪರೀಕ್ಷೆಗಳು ಬರಲಿವೆ. ಶೇ 1ರಷ್ಟು ಸಹ ಪಾಠಗಳು ನಡೆದಿಲ್ಲ. ಈಗ ಉಪನ್ಯಾಸಕರು ಬಂದು ಪಾಠಗಳನ್ನು ಮಾಡಿದರೂ ಅನುಕೂಲ. ಉಪನ್ಯಾಸಕರು ನೇಮಕವಾಗದಿದ್ದರೆ ನಾವು ಪರೀಕ್ಷೆ ಬರೆಯುವುದೇ ಕಷ್ಟವಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಆರ್ಗ್ಯಾನಿಕ್ ಕೆಮಿಸ್ಟ್ರಿ ಕಠಿಣವಾದ ವಿಷಯ. ಉಪನ್ಯಾಸಕರು ಪಾಠ ಮಾಡಿದರೆ ನಮಗೆ ಅನುಕೂಲ. ನಾವೇ ಓದಿಕೊಳ್ಳಬೇಕು ಎಂದರೆ ಕಷ್ಟವಾಗುತ್ತದೆ. ಇಲ್ಲಿ ಕಾಯಂ ಉಪನ್ಯಾಸಕರು ಇದ್ದಾರೆ ಎನ್ನುವ ಕಾರಣದಿಂದಲೇ ಚಿಂತಾಮಣಿ, ಶ್ರೀನಿವಾಸಪುರ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೋಲಾರದ ಸ್ನಾತಕೋತ್ತರ ಕೇಂದ್ರವನ್ನು ಬಿಟ್ಟು ಇಲ್ಲಿಗೆ ದಾಖಲಾಗಿದ್ದಾರೆ. ಆದರೆ ಇಲ್ಲಿ ಈಗ ಕಾಯಂ ಉಪನ್ಯಾಸಕರು ಇಲ್ಲದಿರುವುದು ತೊಂದರೆ ಆಗುತ್ತಿದೆ’ ಎಂದು ಹೇಳಿದರು.

ಲ್ಯಾಬ್ ಪರೀಕ್ಷೆ ನಡೆಸಲು, ರಾಸಾಯನಿಕಗಳನ್ನು ನೀಡಲು ಹೀಗೆ ನಮ್ಮ ಶಿಕ್ಷಣದ ಬಗ್ಗೆ ಜವಾಬ್ದಾರಿಯನ್ನುವಹಿಸಿಕೊಳ್ಳಲು ಕಾಯಂ ಉಪನ್ಯಾಸಕರು ಅಗತ್ಯ. ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT