ಸರಳವಾದರೂ ಸಂಭ್ರಮ ತಂದ ರಾಜ್ಯೋತ್ಸವ

ಚಿಕ್ಕಬಳ್ಳಾಪುರ: ತಾಲ್ಲೂಕಿನ ವಿವಿಧ ಶಾಲೆಗಳು, ಸಂಘ ಸಂಸ್ಥೆಗಳು ಸೋಮವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದವು. ನಾಡು, ನುಡಿಯ ಬಗ್ಗೆ ಗಣ್ಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆವಲಗುರ್ಕಿ ಶಾಲೆ: ತಾಲ್ಲೂಕಿನ ಆವಲಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಮಾತೆ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಕನ್ನಡ ಬಾವುಟದ ಬಣ್ಣದ ಶಲ್ಯಗಳನ್ನು ಧರಿಸಿದ್ದುದು ವಿಶೇಷವಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕ ತಿರನಾವುಕ್ಕರಸು, ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕ ದೇವರಾಜು, ಭಾಷಾವಾರು ಪ್ರಾಂತ್ಯಗಳ ರಚನೆ, ಹೋರಾಟಗಳು, ಕನ್ನಡ ನಾಡಿನ ರಚನೆ, ಕರ್ನಾಟಕ ಎಂದು ನಾಮಕರಣವಾದ ಬಗ್ಗೆ ಮಾತನಾಡಿದರು.
ಶಿಕ್ಷಕಿ ಎಂ.ಚಂದ್ರಕಲಾ, ಆದಿಕವಿ ಪಂಪನಿಂದ ಇಂದಿನ ಆಧುನಿಕ ಕವಿಗಳ ವರೆಗೆ ಕನ್ನಡ ಭಾಷೆ ಬೆಳೆದು ಬಗೆಯನ್ನು ವಿವರಿಸಿದರು. ವಿದ್ಯಾರ್ಥಿಗಳಿಂದ ನಾಡಗೀತೆ, ಕನ್ನಡಗೀತೆಗಳ ಸಾಮೂಹಿವಾಗಿ ಗಾಯನ ನಡೆಯಿತು. ವಿದ್ಯಾರ್ಥಿಗಳು ವಿವಿಧ ವೇಷಗಳನ್ನು ತೊಟ್ಟಿದ್ದದ್ದರು. ಸಾಮೂಹಿಕ ನೃತ್ಯ ಪ್ರದರ್ಶನ ಜರುಗಿತು. ಶಿಕ್ಷರಾದ ಕೆ.ಎಂ.ರೆಡ್ಡಪ್ಪ, ವಸಂತಕುಮಾರಿ, ರಮಾಮಣಿ, ಮುನಿಕೃಷ್ಣಪ್ಪ,ಹನುಮಂತರಾಯ, ಮಂಜೇಶ್ ಹಾಜರಿದ್ದರು.
ಕನ್ನಡ ಸೇನೆ: ನಗರದಹೊರವಲಯದ ಚದಲುಪುರ ಗೇಟ್‌ನಲ್ಲಿ ಕನ್ನಡ ಸೇನೆಯಿಂದ ಕನ್ನಡ ರಾಜ್ಯೋತ್ಸವ ನಡೆಯಿತು. ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಭುವನೇಶ್ವರಿ ಭಾವಚಿತ್ರದ ಪೂಜೆಯೊಂದಿಗೆ ಮೆರವಣಿಗೆ ಅರಂಭವಾಯಿತು. ನಂತರ ನಗರದ ಕೋಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಘಟನೆ ಜಿಲ್ಲಾಉಪಾಧ್ಯಕ್ಷ ಉದಯಶಂಕರ್, ಮುಖಂಡರಾದ ಕೃಷ್ಣಪ್ಪ, ಘಟಕದ ಅಧ್ಯಕ್ಷ ಸಂದೀಪ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಚಂದ್ರಶೇಖರ್, ವಾಹನ ಘಟಕದ ಅಧ್ಯಕ್ಷ ಹರೀಶ್, ಮುಖ್ಯ ಶಿಕ್ಷಕಿ ಜ್ಯೋತಿ ಇದ್ದರು.
ಚುಟುಕು ಸಾಹಿತ್ಯ ಪರಿಷತ್: ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರವೂ ನಾವು ಅಪ್ಪಟ ಕನ್ನಡಿಗರಿರುವ ಕಾಸರಗೋಡು, ಸೊಲ್ಲಾಪುರ, ನೀಲಗಿರಿ ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಹೀಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಕಿರುಕುಳ ನಿರಂತರವಾಗಿ ಮುಂದುವರಿದಿದೆ. ಇದು ಬೇಸರದ ಸಂಗತಿ ಎಂದು ತಿಳಿಸಿದರು.
ತಲೆಮಾರಿನಿಂದ ತಲೆಮಾರಿಗೆ ಕನ್ನಡದ ಬಳಕೆ ಕಡಿಮೆ ಆಗುತ್ತಿದೆ. ಪೋಷಕರು ಆಂಗ್ಲಭಾಷೆಯ ಹಿಂದೆ ಬೀಳದೆ ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಾತಮುತ್ತಕಹಳ್ಳಿ ಎಂ.ಚಲಪತಿಗೌಡ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಬಳಸಿದಾಗ ಮಾತ್ರ ಭಾಷೆ ಉಳಿಯುತ್ತದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಗರಿಯು ನಮ್ಮ ಹೆಗ್ಗಳಿಕೆಯಾಗಿದೆ. ಮುಂದಿನ ಪೀಳಿಗೆ ಈ ಹಿರಿಮೆಯನ್ನು ಉಳಿಸಿಕೊಳ್ಳುತ್ತಾ ಸಾಗಬೇಕಾಗಿರುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ.
ಕಾದಂಬರಿಗಾರ್ತಿ ಸರಸಮ್ಮ ಮಾತನಾಡಿದರು. ಚುಸಾಪ ಪ್ರಧಾನ ಕಾರ್ಯದರ್ಶಿ ಯಲುವಳ್ಳಿ ಸೊಣ್ಣೇಗೌಡ, ತಾಲ್ಲೂಕು ಅಧ್ಯಕ್ಷ ನಾಗಭೂಷಣ್‍ರೆಡ್ಡಿ, ಪದಾಧಿಕಾರಿ ಲತಾ ರಾಮಮೋಹನ್, ಪ್ರೇಮಲೀಲಾ ವೆಂಕಟೇಶ್, ಸುಶೀಲಾ ಮಂಜುನಾಥ್, ನಾಗೇಂದ್ರಸಿಂಹ, ವೆಂಕಟೇಶ್ ಹಾಲಪ್ಪ, ಉಪಾಧ್ಯಕ್ಷ ಗೋಪಾಲ್, ಪತ್ರಕರ್ತ ಬ್ರಹ್ಮಾಚಾರಿ, ಶಿಕ್ಷಕರಾದ ಗೋವಿಂದರಾಜು ಯಾದವ್, ಮಂಜುನಾಥ್, ಲಕ್ಷ್ಮಿನಾರಾಯಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.