ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಬಗ್ಗೆ ಎಚ್ಚರಿಸುವ ಆ್ಯಪ್!

ಕೋವಿಡ್‌ 19 ಸೋಂಕಿತರು ಮತ್ತು ಕ್ವಾರಂಟೈನ್‌ಗೆ ಒಳಗಾದವರು ನಿಮ್ಮ ಬಳಿ ಸುಳಿದರೆ ಮೊಬೈಲ್‌ನಲ್ಲಿ ಅಲಾರಾಂ ಮೊಳಗಿಸುವ ’ಆರೋಗ್ಯ ಸೇತು‘ ಆ್ಯಪ್‌
Last Updated 16 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್‌ ಸೋಂಕು ಇದೀಗ ಜನಸಾಮಾನ್ಯರನ್ನೂ ತಲ್ಲಣಕ್ಕೆ ದೂಡಿ ಭೀತಿ ಹುಟ್ಟಿಸುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ಸೋಂಕಿನಿಂದಾಗಿ ಜನರು ಎಲ್ಲಿ, ಯಾವಾಗ ನಮಗೂ ಸೋಂಕು ತಗುಲುತ್ತದೋ ಎಂಬ ಭಯದಲ್ಲಿ ಜೀವಿಸುವಂತಾಗಿದೆ.

ಜನಸಾಮಾನ್ಯರ ಈ ಭಯ ನಿವಾರಿಸುವ ಜತೆಗೆ ಸೋಂಕಿತರಿಂದ ಅಂತರ ಕಾಯ್ದುಕೊಂಡು ರಕ್ಷಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ’ಆರೋಗ್ಯ ಸೇತು‘ ಎಂಬ ಆ್ಯಪ್‌ ರೂಪಿಸಿದೆ.

ಈ ಆ್ಯಪ್‌ ಅನ್ನು ನೀವು ನಿಮ್ಮ ಮೊಬೈಲ್‌ಗೆ ಅಳವಡಿಸಿಕೊಂಡರೆ ಕೋವಿಡ್‌ 19 ಸೋಂಕಿತರು ಮತ್ತು ಕ್ವಾರಂಟೈನ್‌ಗೆ ಒಳಗಾದವರು ನಿಮ್ಮ ಬಳಿ ಸುಳಿದರೆ ಈ ಆ್ಯಪ್‌ ಮೊಬೈಲ್‌ನಲ್ಲಿ ಅಲಾರಾಂ ಮೊಳಗಿಸುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ!

ಕೋವಿಡ್‌–19ಗೆ ತುತ್ತಾಗಿರುವವರ ಮೇಲೆ ನಿಗಾ ಇರಿಸುವ ಹಾಗೂ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಿದ ಈ ಆ್ಯಪ್‌ ಅನ್ನು ಕೇಂದ್ರ ಆರೋಗ್ಯ ಇಲಾಖೆಯು ಏಪ್ರಿಲ್‌ 2ರಂದು ಬಿಡುಗಡೆ ಮಾಡಿದೆ.

ಆ್ಯಂಡ್ರಾಯ್ಡ್‌ ಹಾಗೂ ಐಒಎಸ್‌ ಮೊಬೈಲ್‌ನಲ್ಲಿ ಬಳಸಬಹುದಾದ ’Aarogya Setu' ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ಗೆ ಅಳವಡಿಸಿಕೊಳ್ಳಬಹುದು.

ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಸೇವೆ ನೀಡುವ ಈ ಆ್ಯಪ್‌ನಲ್ಲಿ ಹೆಸರು, ವೈಯಕ್ತಿಕ ವಿವರ, ಮೊಬೈಲ್‌ ಸಂಖ್ಯೆ ನೀಡಿ ನೋಂದಾಯಿಸಿಕೊಂಡು ಬಳಕೆ ಮಾಡಬಹುದು.

ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್ ಮಾಡಿದ ಕೂಡಲೇ, ಸ್ವಯಂ ಚಾಲಿತವಾಗಿ ನಿಮ್ಮ ಮೊಬೈಲ್‌ನಲ್ಲಿ ಬ್ಲೂಟೂತ್‌ ಮತ್ತು ಲೊಕೇಶನ್ ಸ್ವಿಚ್‌ ಆನ್‌ ಆಗುತ್ತವೆ. ಬ್ಲೂಟೂತ್‌ ಮತ್ತು ಲೊಕೇಶನ್ ಜನರೇಟೆಡ್‌ ಸೋಶಿಯಲ್ ಗ್ರಾಫ್‌ ಮೂಲಕ ಈ ಆ್ಯಪ್ ಕೋವಿಡ್‌ 19 ಸೋಂಕಿತ ವ್ಯಕ್ತಿಯೊಂದಿಗಿನ ನಿಮ್ಮ ಒಡನಾಟವನ್ನು ಪತ್ತೆ ಮಾಡುತ್ತದೆ.

ಆರೋಗ್ಯ ಇಲಾಖೆಯು ಕೋವಿಡ್‌ ಸೋಂಕಿತರು ಮತ್ತು ಕ್ವಾರಂಟೈನ್‌ಗೆ ಒಳಗಾದವರಿಂದ ಸಂಗ್ರಹಿಸುವಮೊಬೈಲ್‌ ಸಂಖ್ಯೆ ಸಹಿತ ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ಈ ಆ್ಯಪ್‌ಗೆ ಬೆಸೆಯಲಾಗಿದ್ದು, ಅದರ ಸಹಾಯದಿಂದ ಅದು ನಮ್ಮ ನೆರೆಹೊರೆಯಲ್ಲಿರುವ ಸೋಂಕಿತರ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಈ ಆ್ಯಪ್‌ನಲ್ಲಿ ಬಳಕೆದಾರರ ಗೌಪ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಆ್ಯಪ್ ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎನ್‌ಕ್ರಿಪ್ಟ್ ಮಾಡಲಾಗಿದೆ. ವೈದ್ಯಕೀಯವಾಗಿ ಅಗತ್ಯ ಬಿದ್ದಲ್ಲಿ ಮಾತ್ರ ಡೇಟಾವನ್ನು ಬಳಸಲಾಗುವುದು. ಎಲ್ಲಾ ರೀತಿಯಲ್ಲಿ ವೈಯಕ್ತಿಕ ಮಾಹಿತಿ ಫೋನ್‌ನಲ್ಲಿ ಸುರಕ್ಷಿತವಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ. ಈ ಆ್ಯಪ್‌ಗೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ನಿಮ್ಮನ್ನು ನೀವು ಹೇಗೆ ಪ್ರತ್ಯೇಕವಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂಬ ಸೂಚನೆಗಳ ಜತೆಗೆ ಮತ್ತು ಒಂದು ವೇಳೆ ನಿಮಗೆ ಲಕ್ಷಣಗಳು ಕಂಡುಬಂದರೆ ಅದಕ್ಕೆ ಬೇಕಾದ ಸಹಾಯಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಆ್ಯಪ್‌ ಸಲಹೆಗಳನ್ನು ನೀಡುತ್ತದೆ. ಈ ಆ್ಯಪ್‌ ಬಳಸುವ ಮೂಲಕ ನೀವು ನಿಮ್ಮನ್ನು, ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ರಕ್ಷಿಸಿಕೊಳ್ಳಬಹುದು ಜತೆಗೆ ಕೋವಿಡ್‌ ಹೋರಾಟದಲ್ಲಿ ಕೈಜೋಡಿಸಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT