ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಜೀವನಕ್ಕಾಗಿ ದುಶ್ಚಟಗಳನ್ನು ತ್ಯಜಿಸಿ: ಶಾಸಕ ಡಾ.ಕೆ.ಸುಧಾಕರ್ ಸಲಹೆ

ದಿಬ್ಬೂರಿನಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ
Last Updated 4 ಫೆಬ್ರುವರಿ 2020, 11:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಗ್ರಾಮೀಣ ಭಾಗದ ಜನರು ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಂತಹ ದುಶ್ಚಟ ತ್ಯಜಿಸಿ, ಉತ್ತಮ ಜೀವನ ಶೈಲಿ ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ದಿಬ್ಬೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಶಂಕರ್ ಕ್ಯಾನ್ಸರ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇವತ್ತು ಗ್ರಾಮೀಣ ಪ್ರದೇಶಗಳ ದುಶ್ಚಟಗಳು ಹೆಚ್ಚುತ್ತಿವೆ. ಪರಿಣಾಮ, ಬಡವರು, ಅವಿದ್ಯಾವಂತರದಲ್ಲಿ ಅರಿವಿನ ಕೊರತೆಯಿಂದಾಗಿ ಕ್ಯಾನ್ಸರ್ ಕೂಡ ಹೆಚ್ಚುತ್ತಿದೆ. ಇವತ್ತು ಕ್ಯಾನ್ಸರ್ ಮನೆ ಮಾತಾಗಿದೆ. ಶ್ರೀಮಂತರಿಗೆ ಈ ಕಾಯಿಲೆಗೆ ತಡೆಕೊಳ್ಳಲು ಆಗುವುದಿಲ್ಲ. ಆದರೆ ಬಡವರ ಪಾಡೇನು? ಆದರೆ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘ಕ್ಯಾನ್ಸರ್ ಕೂಡ ಗುಣಮುಖವಾಗುವ ರೋಗ ಎನ್ನುವ ವಿಚಾರ ಬಹುತೇಕ ಜನಸಾಮಾನ್ಯರಿಗೆ ಅರಿವಿಲ್ಲ. ಕೆಲ ಹಂತಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದರೆ ಖಂಡಿತ ಗುಣವಾಗುತ್ತದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚುತ್ತಿದೆ. ಮನೆಯಲ್ಲಿಯೇ ಮಹಿಳೆಯರು ಸುಲಭವಾಗಿ ಸ್ತನ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಬಹುದು. ಕ್ಯಾನ್ಸರ್‌ಗೆ ಅಲೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ಸಾಕಷ್ಟು ಚಿಕಿತ್ಸೆಗಳಿವೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ಇಂತಹ ಶಿಬಿರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ಈ ಭಾಗದ ಜನರು ಬಹಳ ಬಡವರಿದ್ದಾರೆ. ಹೀಗಾಗಿ ಇಲ್ಲಿ ಹಿಂದಿನಿಂದಲೂ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಾಮಾನ್ಯ ಶಿಬಿರಗಳಿಗೆ ಜನ ಬರುತ್ತಾರೆ. ಆದರೆ ಕ್ಯಾನ್ಸರ್ ಶಿಬಿರ ಎಂದರೆ ಜನ ಆತಂಕ, ಭಯದಿಂದ ಮುಂದೆ ಬರುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಹೆಚ್ಚಿನ ಜನರು ಶಿಬಿರದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕಿತ್ತು’ ಎಂದು ಹೇಳಿದರು.

‘ಶಿಕ್ಷಣ ಮತ್ತು ಆರೋಗ್ಯ ಸಮಾಜದ ಎರಡು ಕಣ್ಣುಗಳು ಇದ್ದಂತೆ. ಅವುಗಳ ಮೇಲೆ ಎಷ್ಟು ಹೂಡಿಕೆ ಮಾಡಿದರೂ ಸಾಕಾಗುವುದಿಲ್ಲ. ಯಾರು ಅವುಗಳನ್ನು ಸರಿಯಾದ ರೀತಿ ನೋಡಿಕೊಳ್ಳುತ್ತಾರೋ ಅಂತಹ ಸಮಾಜ ಉಜ್ವಲವಾಗಿ, ಸಮೃದ್ಧವಾಗಿ ಶಾಂತಿಯಿಂದ ಕೂಡಿರುತ್ತದೆ. ಅದಕ್ಕೆ ಅನೇಕ ದೇಶಗಳು ಸಾಕ್ಷಿಯಾಗಿವೆ. ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಮೊದಲ ಹಂತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು 1,000 ಹಾಸಿಗೆ ಉಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌, ಕಿಡ್ನಿ ಹೀಗೆ ಬಹುವಿಧಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ಅತ್ಯಾಧುನಿಕ ಆಸ್ಪತ್ರೆ ಮಾಡಿ, ಈ ಭಾಗದಲ್ಲಿ ಆರೋಗ್ಯದ ನಗರವಾಗಿ ನಿರ್ಮಿಸುವ ಕನಸಿದೆ. ವೈದ್ಯಕೀಯ ಕಾಲೇಜಿನಿಂದಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಬಡ ಜನರ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಹೇಳಿದರು.

ಶಂಕರ್ ಕ್ಯಾನ್ಸರ್ ಸಂಸ್ಥೆಯ ವೈದ್ಯರಾದ ಡಾ.ಶ್ರೀನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT