ಶುಕ್ರವಾರ, ಅಕ್ಟೋಬರ್ 22, 2021
29 °C
ಒಂದೂವರೆ ತಿಂಗಳಿನಿಂದ ಪ್ರವೇಶ ಬಂದ್; ಆಹಾರಕ್ಕೆ ಎದುರು ನೋಡುವ ಮಂಗಗಳು

ಚಿಕ್ಕಬಳ್ಳಾಪುರ: ಪ್ರವಾಸಿಗರಿಲ್ಲದ ತಣ್ಣನೆಯ ಹಾದಿ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ದಿಬ್ಬ ಕುಸಿದು ಒಂದೂವರೆ ತಿಂಗಳ ಮೇಲಾಗಿದೆ. ಅಂದಿನಿಂದ ಗಿರಿಧಾಮದ ಪ್ರವೇಶದ ಹಾದಿಯೂ ಬಂದ್ ಆಗಿದೆ. ಸದಾ ಜನರಿಂದ ಗಿಜಿಡುತ್ತಿದ್ದ ನಂದಿ ಈಗ ಪೂರ್ಣ ಖಾಲಿ ಖಾಲಿ. ಪ್ರವಾಸಿಗರಿಲ್ಲದ ನಂದಿಗಿರಿಧಾಮ ಹೇಗಿದೆ? ಎನ್ನುವ ಬಗ್ಗೆ ‘ಪ್ರಜಾವಾಣಿ’ ಪ್ರತಿನಿಧಿ ವರದಿ ಮಾಡಲು ತೆರಳಿದಾಗ, ಜನರಿಲ್ಲದ ನಂದಿ ಮತ್ತಷ್ಟು ತಣ್ಣಗಿರುವುದು ಕಂಡಿತು.

ಬೈಕು, ಕಾರುಗಳ ಸದ್ದಿನಿಂದ ರಸ್ತೆಯನ್ನು ಬಿಟ್ಟು ಏಳುತ್ತಿದ್ದ ಕಸ, ಮುರಿದ ಟೊಂಗೆಗಳು, ರಸ್ತೆಗೆ ಸುರಿದ ಹೂ ರಾಶಿ...ಹೀಗೆ ಸದಾ ಮನುಷ್ಯರ ಹೆಜ್ಜೆ ಗುರುತಿನಿಂದ ತೊಯ್ಯುತ್ತಿದ್ದ ನೆಲೆದಲ್ಲಿ ಈಗ ಆ ಗುರುತುಗಳಿಲ್ಲ ಎನ್ನುವಂತೆ ಪ್ರಶಾಂತವಾಗಿದೆ.

ಗಿರಿಧಾಮಕ್ಕೆ ಶನಿವಾರ ಮತ್ತು ಭಾನುವಾರ 40ರಿಂದ 45 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಉಳಿದ ದಿನಗಳಲ್ಲಿಯೂ ಹೆಚ್ಚಿನ ಜನಸಂದಣಿಯೇ ಇರುತ್ತಿತ್ತು. ಕಿರಿಯರು, ಪ್ರೇಮಿಗಳು, ಸ್ನೇಹಿತರು, ವಿವಾಹಿತರು, ಹಿರಿಯರು...ಹೀಗೆ ವಿವಿಧ ವಯೋಮಾನದ ಜನರಿಂದ ತುಂಬಿ ತುಳುಕುತ್ತಿತ್ತು. ಕೆಲವು ಸಮಯದಲ್ಲಿ ಕಿಲೋಮೀಟರ್‌ಗಟ್ಟಲೆ ನಂದಿಯ ಹಾದಿ ಸಂಚಾರ ದಟ್ಟಣೆಗೆ ಸಿಲುಕಿದ್ದೂ ಇದೆ. ಪ್ರವಾಸಿಗರ ಅಪಾರ ಒತ್ತಡ ಎದುರಾಗಿದ್ದು ಇದೆ.

ಇಂತಿಪ್ಪ ನಂದಿಯ ಅಂಗಳ ಈಗ ಖಾಲಿ ಖಾಲಿ. ಬೈಕ್, ಕಾರುಗಳ ಓಡಾಟದಿಂದ ರಸ್ತೆಯಲ್ಲಿ ದೂಳು ಸಹ ನಿಲ್ಲುತ್ತಿರಲಿಲ್ಲ. ಆದರೆ ಈಗ ರಸ್ತೆ ಹೂಗಳಿಂದ ಮುಚ್ಚಿದೆ. ಹೋ ತೋಟಕ್ಕೆ ತೆರಳಿದಂತೆ ಭಾಸವಾಗುತ್ತದೆ. ಬೈಕ್ ಕಾರುಗಳ ಓಡಾಟದಿಂದ ರಸ್ತೆ ಬದಿಯಲ್ಲಿ ಗಿಡಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ಆದರೆ ಈಗ ಗಿಡಗಳು ರಸ್ತೆಗೆ ಮುತ್ತಿಕ್ಕಿವೆ. 

ಆಹಾರಕ್ಕೆ ಕಾತುರ: ನಂದಿಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಮಂಗಗಳಿವೆ. ಪ್ರವಾಸಿಗರು ಗಿರಿಧಾಮಕ್ಕೆ ಬರುವಾಗ ಅವರು ಮಂಗಗಳಿಗೆ ಆಹಾರ ನೀಡುತ್ತಿದ್ದರು. ಕೆಲವು ಸಂಘ ಸಂಸ್ಥೆಗಳು ಹಾಗೂ ಯುವಕರು ಹಣ್ಣು, ತರಕಾರಿ ಸೇರಿದಂತೆ ಆಹಾರವನ್ನು ಕಾರುಗಳಲ್ಲಿ ತಂದು ಮಂಗಗಳಿಗೆ ನೀಡುತ್ತಿದ್ದರು. ಆದರೆ ಈಗ ರಸ್ತೆ ಬಂದ್ ಆಗಿರುವುದರಿಂದ ಈ ವಾನರಗಳಿಗೆ ಆಹಾರ ದೊರೆಯುವುದು ದುರ್ಲಭವಾಗಿದೆ.

ಒಂದೂವರೆ ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ರಸ್ತೆ ಕಾಮಗಾರಿಗೊ ಅಥವಾ ಗಿರಿಧಾಮದಲ್ಲಿರುವ ತೋಟಗಾರಿಕೆ, ಪ್ರವಾಸೋದ್ಯಮದ ನಿಗಮದ ಅಧಿಕಾರಿಗಳು ದಾರಿಯಲ್ಲಿ ಸಾಗುವಾಗ ಮಂಗಳು ಹಿಂಬಾಲಿಸುತ್ತವೆ. ಬೈಕ್‌ಗಳು ಬಂದ ತಕ್ಷಣವೇ ಮರದಿಂದ ಜಿಗಿದು ರಸ್ತೆಗೆ ಬರುತ್ತವೆ. ಆಹಾರ ತಂದಿದ್ದಾರಾ ಎನ್ನುವ ಕಾತುರ ಅವುಗಳದ್ದು.

‘ಈಗಲೂ ಅಪರೂಪಕ್ಕೆ ಒಮ್ಮೆ ಕೆಲವೊಬ್ಬರು ತರಕಾರಿ, ಹಣ್ಣುಗಳನ್ನು ತರುತ್ತಾರೆ. ಮಾನವೀಯ ದೃಷ್ಟಿಯಿಂದ ಆಹಾರ ನೀಡಲು ಬಿಡುತ್ತಿದ್ದೇವೆ. ಇಲ್ಲಿ ಅವುಗಳಿಗೆ ನೈಸರ್ಗಿಕವಾಗಿ ಆಹಾರವೇನೂ ಸಿಗುತ್ತಿಲ್ಲ. ನಮಗೆ ಪಾಪ ಎನಿಸುತ್ತದೆ’ ಎನ್ನುತ್ತಾರೆ ಭದ್ರತೆಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.