ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಹಿಮ್ಮೆಟ್ಟಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಿ

ಅಕ್ಕಮಹಾದೇವಿ ನಗರ್ತ ಮಹಿಳಾ ಸಂಘದ ವತಿಯಿಂದ ‘ಸಾಂಸ್ಕೃತಿಕ ಮೇಳ–2019’ ಕಾರ್ಯಕ್ರಮ
Last Updated 20 ಜುಲೈ 2019, 14:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಹಿಳೆಯರ ಮನಸ್ಸಿಗೆ ಭಯ ಮೂಡುವ ಭಾವನೆಗಳನ್ನು ಸಮಾಜ ತುಂಬಿದೆ. ಆದರೆ, ಅದನ್ನು ಹಿಮ್ಮೆಟ್ಟಿಸಲು ಮಹಿಳೆಯರು ಸ್ವಾವಲಂಬನೆ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್ ಹೇಳಿದರು.

ಅಕ್ಕಮಹಾದೇವಿ ನಗರ್ತ ಮಹಿಳಾ ಸಂಘ, ಬೆಂಗಳೂರಿನ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘ ಮತ್ತು ಚಿಕ್ಕಬಳ್ಳಾಪುರದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಸಂಘದ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಮೇಳ–2019’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಅಂದಿನಿಂದ ಇಂದಿನವೆರೆಗೂ ಗಂಡು ಹೆಣ್ಣು ಎನ್ನುವ ಪಕ್ಷಪಾತ ಜೀವಂತವಾಗಿದೆ. ಅದರ ನಡುವೆಯೂ ಮಹಿಳೆ ಸಾಧನೆಯತ್ತ ಒಂದೊಂದೆ ಹೆಜ್ಜೆ ಮುಂದಿಡುತ್ತಿದ್ದಾಳೆ. ಇವತ್ತು ಮಹಿಳೆಯರು ಕುಟುಂಬದ ಸಾಮರಸ್ಯ ಕಾಪಾಡುವ ಜತೆಗೆ ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸುವ ಧೈರ್ಯ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಹಲವು ಬಗೆಯಲ್ಲಿ ಮೂಲಕ ಪುರುಷರ ಬದುಕಿನಲ್ಲಿ ವಿಶೇಷ ಪಾತ್ರಗಳನ್ನು ವಹಿಸುವ ಹೆಣ್ಣು ಮಕ್ಕಳು ಪರಾವಲಂಬಿಗಳಲ್ಲ. ಅವರಲ್ಲೂ ಸಾಕಷ್ಟು ಪ್ರತಿಭೆ, ಶಕ್ತಿ ಇದೆ. ಅದನ್ನು ಆವಿಷ್ಕಾರಗೊಳಿಸಲು ಸಹಕಾರಿಯಾಗುವ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಓದಿನ ಮೂಲಕ ಹೆಚ್ಚೆಚ್ಚು ಅರಿವು ಬೆಳೆಸಿಕೊಂಡು ಸಂತೃಪ್ತ ಬದುಕು ಬಾಳಬೇಕು. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು’ ಎಂದರು.

ಸಾಹಿತಿ ಕೆ.ಆರ್.ಸಂಧ್ಯಾರಾಣಿ ಮಾತನಾಡಿ, ‘ಪುರುಷ ಪ್ರಧಾನ ಸಮಾಜದಲ್ಲಿ ಶೋಷಣೆಯ ವಸ್ತುವಾಗಿದ್ದ ಮಹಿಳೆಯರು ಹಿಂದೆಂದಿಗಿಂತಲೂ ಇಂದು ಹೆಚ್ಚು ಸಕ್ರಿಯವಾಗಿ ಸಮಾಜದ ಮುನ್ನೆಲೆಗೆ ಬರುತ್ತಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಮೂಲಕ ಸಮಾಜದಲ್ಲಿ ಗೌರವಯುತ ಜೀವನ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.

ಬೆಂಗಳೂರಿನ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಸ್. ಬಸವರಾಜ್ ಮಾತನಾಡಿ, ‘ಅಕ್ಕಮಹಾದೇವಿ ನಗರ್ತ ಮಹಿಳಾ ಸಂಘವು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ. ಇದನ್ನು ಎಲ್ಲ ಸಂಘಗಳು ಅನುಸರಿಸಬೇಕಿದೆ’ ಎಂದು ತಿಳಿಸಿದರು.

ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ‘ಕೆಲ ದಶಕಗಳ ಹಿಂದೆ ಮಹಿಳೆಯರು ಕೇವಲ ಮನೆ ಮತ್ತು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಶಿಕ್ಷಣದ ಪರಿಣಾಮವಾಗಿ ಅವರು ಕೂಡ ಮನೆಯಿಂದ ಹೊರ ಬಂದು ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ’ ಎಂದರು.

ಅಕ್ಕಮಹಾದೇವಿ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಕಲಾ ಚಂದ್ರಶೇಖರ್ ಮಾತನಾಡಿ, ‘30 ವರ್ಷಗಳ ಹಿಂದೆ ಭಜನೆ, ದೇವರ ಪ್ರಾರ್ಥನೆಯೊಂದಿಗೆ ಶುರುವಾದ ಸಂಘ ಇವತ್ತು ವಿವಿಧ ರಚನಾತ್ಮಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆಯುತ್ತಿದೆ’ ಎಂದು ಹೇಳಿದರು.

ಮೇಳದಲ್ಲಿ ಜನಪದ ನೃತ್ಯ, ಪದಬಂಧ, ವಚನ ನಿರ್ವಚನ ಸ್ಪರ್ಧೆಗಳು ನಡೆದವು. ವಿಜೇತರಿಗೆ ಸರ್ವಮಂಗಳ ಸೋಮಶೇಖರ್ ಅವರು ಬಹುಮಾನ ವಿತರಿಸಿದರು.

ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಸ್‌.ಜಿ.ಲೋಕೂರ್, ಚಿಕ್ಕಬಳ್ಳಾಪುರದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಸಂಘದ ಅಧ್ಯಕ್ಷ ಎನ್.ಜಯದೇವ್, ಬೆಂಗಳೂರಿನ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಅಂಬಿಕಾ ಚಂದ್ರಶೇಖರ್, ಚಿಕ್ಕಬಳ್ಳಾಪುರ ಸಂಘದ ಗೌರವ ಕಾರ್ಯದರ್ಶಿ ಮಂಜುಳಾ ಚಂದ್ರಶೇಖರ್, ಖಜಾಂಚಿ ನಿರ್ಮಲಾ ರಾಜಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT